ಮಂಗಳೂರು| ವಿನಾಯಕ ಬಾಳಿಗಾ ಹತ್ಯೆ ಪ್ರಕರಣ; ಸಾಕ್ಷಿಗಳ ಜೊತೆ ಪ್ರಮುಖ ಆರೋಪಿಯ ಡೀಲ್ ಶಂಕೆ!?
ಮಂಗಳೂರು: ರಾಜ್ಯಾದ್ಯಂತ ಭಾರಿ ಸುದ್ದಿಯಾಗಿದ್ದ RTI ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ವಿಚಾರಣೆಯು 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ನಡೆಯಿತು.
ರಾಜ್ಯ ಸರ್ಕಾರದಿಂದ ವಿಶೇಷವಾಗಿ ನೇಮಕಗೊಂಡಿರುವ ಬೆಂಗಳೂರಿನ ಹಿರಿಯ ನ್ಯಾಯವಾದಿ ಎಸ್.ಬಾಲಕೃಷ್ಣನ್ ಅವರು ಅತ್ಯಗೀಡಾದ ವಿನಾಯಕ ಬಾಡಿಗ ಪರವಾಗಿ ವಾದಿಸಿ " ಪ್ರಮುಖ ಆರೋಪಿ ನರೇಶ್ ಶೆಣೈಯು ಸಾಕ್ಷಿದಾರರನ್ನು ಕಾಶ್ಮೀರ,ಕನ್ಯಾಕುಮಾರಿ ಮತ್ತಿತರ ಕಡೆಗೆ ಕರೆದುಕೊಂಡು ಹೋದ ಬಗ್ಗೆ ದಾಖಲೆ ಇದೆ. ಇದು ತನ್ನ ಪರವಾಗಿ ಹೇಳಿಕೆ ನೀಡಲು ಸಾಕ್ಷಿದಾರರ ಮೇಲೆ ಒತ್ತಡ ಹೇರುವುದರ ಭಾಗವಾಗಿ ಕಂಡು ಬರುತ್ತದೆ. ಅಲ್ಲದೆ ನ್ಯಾಯಾಲಯದ ಆವರಣದಲ್ಲಿ ಸಾಕ್ಷಿದಾರರೊಂದಿಗೆ ಆರೋಪಿ ಮಾತುಕತೆ ನಡೆಸಿರುವುದು ಗೊತ್ತಾಗಿದೆ. ಹಾಗಾಗಿ ಒಂದನೇ ಆರೋಪಿ ನರೇಶ್ ಶೆಣೈ ಮತ್ತು ಸಾಕ್ಷಿದಾರರ ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸಬೇಕು. ಅಲ್ಲದೆ ಈ ಕುರಿತು ಸಿಸಿ ಕ್ಯಾಮೆರಾದ ದೃಶ್ಯಾವಳಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಈ ವೇಳೆ ಸತ್ಯಾಂಶ ಬೆಳಕಿಗೆ ಬರಲಿದೆ ಎಂದರು.
ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ ಇದು ಕಾನೂನಿನ ವರದಿಯೊಳಗೆ ಬರುವುದಿಲ್ಲ ಎಂದರು. ಈ ಹಿಂದೆ ಎರಡು-ಮೂರು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸಿಸಿ ಕ್ಯಾಮೆರಾದ ದೃಶ್ಯಾವಳಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಮತ್ತು ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸಲು ಅನುಮತಿ ನೀಡಿದೆ ಎಂದು ಸರ್ಕಾರಿ ಪರ ನ್ಯಾಯವಾದಿ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.
ಹತ್ಯಗೀಡಾದ ವಿನಾಯಕ ಬಾಳಿಗಾರ ಸಹೋದರಿ ಅನುರಾಧ ಬಾಳಿಗ ಮತ್ತು ಅವರಿಗೆ ಧೈರ್ಯ ತುಂಬುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್ ಅವರಿಗೆ 2023ರ ಜನವರಿ 17ರ ಬಳಿಕ ಆರೋಪಿಗಳ ಕಡೆಯಿಂದ ವಾಟ್ಸಪ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಿದರು ಕೂಡ ಪೊಲೀಸರು ಸರಿಯಾಗಿ ತನಿಖೆ ನಡೆಸಲಿಲ್ಲ. ಇಂತಹ ವ್ಯವಸ್ಥೆಯು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಲಿದೆ. ಹಾಗಾಗಿ ಈ ದೂರಿನ ಬಗ್ಗೆಯೂ ಸಮರ್ಪಕ ತನಿಖೆ ನಡೆಸಬೇಕು ಎಂದು ನ್ಯಾಯವಾದಿ ಎಸ್.ಬಾಲಕೃಷ್ಣನ್ ಒತ್ತಾಯಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸಿಸಿ ಕ್ಯಾಮರದ ದೃಶ್ಯಾವಳಿ ಮತ್ತು ಮೊಬೈಲ್ ವಶಕ್ಕೆ ಸಂಬಂಧಿಸಿದಂತೆ ಕಾಲಾವಕಾಶ ನೀಡಿದರಲ್ಲದೆ ಮುಂದಿನ ವಿಚಾರಣೆಯನ್ನು ಮೇ 10ಕ್ಕೆ ಮುಂದೂಡಿದರು.