ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಕೇಸ್; ಪೋಕ್ಸೋ ಪ್ರಕರಣದಲ್ಲಿ ತಂದೆ ಖುಲಾಸೆ
ಮಂಗಳೂರು: ತನ್ನ ಸ್ವಂತ ಪುತ್ರಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದ ಆರೋಪಿತ ತಂದೆಯ ಮೇಲಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದರಲ್ಲಿ ಪೋಕ್ಸೋ ನ್ಯಾಯಾಲಯವು ಆರೋಪಿಯನ್ನು ದೋಷಮುಕ್ತಗೊಳಿಸಿ ಖುಲಾಸೆಗೊಳಿಸಿದೆ.
ಜೂನ್ 2021 ರಲ್ಲಿ ಸುರತ್ಕಲ್ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣವೊಂದರಲ್ಲಿ ತಂದೆಯ ವಿರುದ್ಧವೇ ಆತನ ಇಬ್ಬರು ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯವು ತ್ವರಿತ ಗತಿಯಲ್ಲಿ ಹಾಗೂ ಜಾಮೀನು ನೀಡದೆ ವಿಚಾರಣೆ ನಡೆಸಿತ್ತು. ಇದೀಗ ಕಿರಿಯ ಮಗಳು ಹೊರಿಸಿದ್ದ ಆರೋಪಕ್ಕೆ ಪೂರಕ ಸಾಕ್ಷ್ಯಗಳು ಲಭ್ಯವಾಗದಿರುವ ಹಿನ್ನೆಲೆ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎರಡನೇ ಎಫ್ ಟಿಎಸ್ ಸಿ ಪೋಕ್ಸೋ ನ್ಯಾಯಾಲಯವು ಆರೋಪಿಯನ್ನು ದೋಷಮುಕ್ತಗೊಳಿಸಿ ಖುಲಾಸೆಗೊಳಿಸಿದೆ.
ಇದೀಗ ಖುಲಾಸೆಗೊಂಡ ಪ್ರಕರಣದಲ್ಲಿ ಕಿರಿಯ ಮಗಳು ತನ್ನ ತಂದೆ ತನ್ನನ್ನು ಸತತ ಮೂರು ವರ್ಷಗಳಿಂದ ಅತ್ಯಾ*ರ ನಡೆಸಿದ್ದ ಆರೋಪ ಹೊರಿಸಿದ್ದಳು.
ಸುರತ್ಕಲ್ ವ್ಯಾಪ್ತಿಯ ಕಾಟಿಪಳ್ಳ ಮೂಲದವರಾದ ವ್ಯಕ್ತಿಯ ವಿರುದ್ಧ ಅವರ ಇಬ್ಬರು ಪುತ್ರಿಯರೇ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ಅದರನ್ವಯ ಆರೋಪಿ ತಂದೆಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಇದೀಗ ಆರೋಪಿ ಮೇಲಿನ ಕೇಸ್ ಖುಲಾಸೆಗೊಳ್ಳುತ್ತಲೇ ನ್ಯಾಯಾಧೀಶ ಕೆ.ಎಂ ರಾಧಾಕೃಷ್ಣ ಅವರು ಆರೋಪಿತ ವ್ಯಕ್ತಿಯನ್ನು ಬಿಡುಗಡೆ ಮಾಡಲು ಆದೇಶ ಮಾಡಿದ್ದಾರೆ. ಆರೋಪಿ ಕಳೆದ ಒಂದೂವರೆ ವರ್ಷಗಳಿಂದ ಜೈಲುವಾಸ ಅನುಭವಿಸಿದ್ದರು. ಇನ್ನೊಂದು ಪ್ರಕರಣವು ಸದ್ಯ ವಿಚಾರಣಾ ಹಂತದಲ್ಲಿದೆ.
ಆರೋಪಿಯ ಪರವಾಗಿ ನ್ಯಾಯವಾದಿಗಳಾದ ಆಸಿಫ್ ಬೈಕಾಡಿ, ರುಬಿಯ ಅಕ್ತರ್, ಮಹಮ್ಮದ್ ಅಸ್ಗರ್, ಶ್ರೀನಿಧಿ ಪ್ರಕಾಶ್, ನಿರೀಕ್ಷಾ ವಾದ ಮಂಡಿಸಿದ್ದರು.