ಮಂಗಳೂರು: ಅರಳುವ ಮುನ್ನವೇ ಜೀವನಕ್ಕೆ ಅಂತ್ಯ ಹಾಡುತ್ತಿರುವ ಮಕ್ಕಳು; ಎಚ್ಚೆತ್ತುಕೊಳ್ಳಲಿ ಜಿಲ್ಲಾಡಳಿತ!
ಮಂಗಳೂರು:
ಮೊಬೈಲ್ ನೋಡಬೇಡ ಎಂದಿದ್ದೇ ಬಾಲಕನ ಸಾವಿಗೆ ಕಾರಣವಾಗುತ್ತೆ. ಅಂಕ ಕಡಿಮೆ ಬಂದಿದ್ದೇ ಬಾಲಕಿಯ ಜೀವನ
ಕೊನೆಯಾಗಿಸಳು ಕಾರಣವಾಗುತ್ತೆ.. ಇನ್ನೂ ಅದೇನೋ ಒತ್ತಡ, ಪ್ರಭಾವಕ್ಕೆ ಒಳಗಾಗಿ ಆತ್ಮಹತ್ಯೆ ಶರಣಾಗುತ್ತಿದ್ದಾರೆ
ಮಕ್ಕಳು.. ಹೌದು, ಮಕ್ಕಳ ಆತ್ಮಹತ್ಯೆ ಪ್ರಕರಣ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು
ಆತಂಕ ಮೂಡಿಸುವಂತಿದೆ. ಆದರೆ ಎಲೆಕ್ಷನ್ ಬ್ಯುಸಿಯಲ್ಲಿರುವ ಅಧಿಕಾರಿಗಳು, ಸೀಟು ಉಳಿಸಿಕೊಳ್ಳುವ ಧಾವಂತದಲ್ಲಿರುವ
ಮಂತ್ರಿಗಳು ಈ ಬಗ್ಗೆ ಗಮನ ಹರಿಸಿದಂಗಿಲ್ಲ. ಕೂಡಲೇ ಈ ಕುರಿತು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ
ಇದೆ ಅನ್ನೋ ಕೂಗು ಕೇಳಿ ಬರುತ್ತಿದೆ.
ಉಡುಪಿಯಲ್ಲಿ
ಕಾಪು ಮೂಲದ ದಂಪತಿಯ ಪುತ್ರಿ 6ನೇ ತರಗತಿ ವಿದ್ಯಾರ್ಥಿನಿ ಮಂಗಳಾದೇವಿ (11) ಮನೆಯಲ್ಲಿಯೇ ನೇಣಿಗೆ
ಶರಣಾಗುತ್ತಾಳೆ. ಆಕೆ ಬಳಸುತ್ತಿದ್ದ ಟ್ಯಾಬ್ ಅನ್ನ ಪೊಲೀಸರು ವಶಕ್ಕೆ ಪಡೆಯುತ್ತಾರೆ.
ಇನ್ನೊಂದು
ಘಟನೆಯಲ್ಲಿ ಮಂಗಳೂರಿನ ಕಂಕನಾಡಿಯಲ್ಲಿ ಜಗದೀಶ್ ಹಾಗೂ ವಿನಯ ದಂಪತಿಯ ಪುತ್ರ ಜ್ಞಾನೇಶ್ (14) ಸೀಲಿಂಗ್
ಫ್ಯಾನ್ ಗೆ ಬಿಗಿದ ನೇಣಿಗೆ ಕೊರಳೊಡ್ಡಿರುತ್ತಾನೆ. ಕಾರಣ, ಹೆತ್ತ ತಾಯಿ ಮೊಬೈಲ್ ಬಳಕೆ ಕಡಿಮೆ ಮಾಡು ಎಂದಿದ್ದಾಗಿತ್ತು.
ಇನ್ನು ಉಡುಪಿಯ
ಪೆರ್ಡೂರಿನಲ್ಲಿ ಪಿಯು ಕಲಿಯುತ್ತಿದ್ದ ತೃಪ್ತಿ (17) ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕಾಗಿ
ತಾನು ಮಲಗುವ ಕೋಣೆಯಲ್ಲಿ ನೇಣಿಗೆ ಶರಣಾಗುತ್ತಾಳೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ದಂಡ
ವಿಧಿಸಿದ್ದು ಕಾರಣ ಅನ್ನೋ ವಿಚಾರವೂ ಬೆಳಕಿಗೆ ಬಂದಿದೆ.
ಅಂಕ ಕಡಿಮೆ
ಬಂದಿತ್ತು ಅನ್ನೋ ಅಂತಹದ್ದೇ ಕಾರಣಕ್ಕೆ ಇತ್ತ ಮಂಗಳೂರಿನ ಕುದ್ರೋಳಿಯ ಟಿಪ್ಪು ಸುಲ್ತಾನ್ ನಗರ ನಿವಾಸಿ,
ಪಿಯು ವಿದ್ಯಾರ್ಥಿನಿ ಖತೀಜಾ ರೀನಾ(16) ಆತ್ಮಹತ್ಯೆಗೆ ಶರಣಾಗುತ್ತಾಳೆ.
ಸುರತ್ಕಲ್
ಠಾಣಾ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದಲ್ಲಿ ಹರ್ಷಿತ್ (13) ಎಂಬ ಬಾಲಕ ಯಾವುದೋ ಕ್ಷುಲ್ಲಕ ಕಾರಣಕ್ಕೆ
ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ಕಳೆದ
ವರ್ಷ ನಗರದ ಹೊರವಲಯದ ಉಳ್ಳಾಲ ವ್ಯಾಪ್ತಿಯ ಹಾಸ್ಟೆಲ್ ನಲ್ಲಿದ್ದ ಪೂರ್ವಜ್ (14) ಎಂಬ 9ನೇ ತರಗತಿ
ಬಾಲಕನು ತಾಯಿಯ ಬರ್ತ್ ಡೇ ವಿಶ್ ಮಾಡಲು ಅವಕಾಶ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾಗುತ್ತಾನೆ.
ಹೀಗೆ ಕಳೆದ
ಐದಾರು ತಿಂಗಳಲ್ಲಿ ಸರಣಿ ಆತ್ಮಹತ್ಯೆಗಳು ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ವಿದ್ಯಾಭ್ಯಾಸ ಕಲಿಯುತ್ತಿದ್ದ ಮಕ್ಕಳೇ ಅನಾಯಾಸವಾಗಿ
ನೇಣಿಗೆ ಕೊರಳೊಡ್ಡಿದ್ದಾರೆ.
ವಿಷಾದ ಅಂದ್ರೆ,
ಇಷ್ಟೆಲ್ಲ ಆದ್ರೂ ಉಭಯ ಜಿಲ್ಲೆಗಳ ಜಿಲ್ಲಾಡಳಿತ ಈ ಬಗ್ಗೆ ಅದೆಷ್ಟು ಗಂಭೀರವಾಗಿದೆ ಅನ್ನೋದು ಪ್ರಶ್ನಾರ್ಹ.
ಮಕ್ಕಳ ಮಾನಸಿಕತೆ ತಿಳಿಯಬೇಕಿರುವ ಸಂಬಂಧಪಟ್ಟ ಇಲಾಖೆಗಳ ಪ್ರಯತ್ನ ಹೆಚ್ಚು ಫಲಪ್ರದವಾಗುತ್ತಿಲ್ಲ.
ನೈತಿಕ ಮೌಲ್ಯ ಕುಸಿಯುತ್ತಿದೆ ಅನ್ನೋ ಕೂಗಿನ ನಡುವೆಯೇ ಮಕ್ಕಳು ಮೊಬೈಲ್, ಟ್ಯಾಬ್ ಹಾಗೂ ಆಧುನಿಕ ಗ್ಯಾಜೆಟ್
ಗಳ ಪ್ರಭಾವ ಹಾಗೂ ಅದರಿಂದ ಸಿಕ್ಕ ಮಾಹಿತಿಯನ್ನ ಆಧರಿಸಿಯೇ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ.
ಪೋಷಕರ ಪಾತ್ರವೂ ಹಿರಿದು
ಕಾಲ ಬದಲಾದಂತೆ
ಮಕ್ಕಳ ಕಲಿಕಾ ಸಾಮರ್ಥ್ಯವೇನೋ ಹೆಚ್ಚುತ್ತಿದೆ. ಸಿಬಿಎಸ್ಇ, ಐಸಿಎಸ್ಇ ಅಂತಹ ಕಬ್ಬಿಣದ ಕಡಲೆಕಾಯಿಯಂತಹ
ವಿಷಯಗಳೇ ಇದ್ದರೂ ಮಕ್ಕಳು ಓದುವುದರಲ್ಲಿ ಚುರುಕು ಇರುತ್ತಾರೆ. ಆದರೆ, ಕೊಂಚ ಅಂಕ ಕಡಿಮೆಯಾದರೂ ಗದರುವ
ಪೋಷಕರು ಇರುವ ತನಕ ಮಕ್ಕಳು ಇಂತಹ ಯೋಚನೆ ಮಾಡುವ ಸಾಧ್ಯತೆಯೇ ಜಾಸ್ತಿ. 2007 ರಲ್ಲಿ ತೆರೆ ಕಂಡಿದ್ದ
‘ತಾರೇ ಝಮೀನ್ ಪರ್‘ ಸಿನೆಮಾ ಇಂದಿಗೂ ಪ್ರಸ್ತುತ ಎನಿಸಿಕೊಳ್ಳುತ್ತವೆ. ಹಾಗಾಗಿ ಪೋಷಕರು ಓದುವಿಕೆ
ವಿಚಾರದಲ್ಲಿ ಅನಗತ್ಯ ಒತ್ತಡವೇರಬಾರದು. ಮೊಬೈಲ್ ಬಳಕೆ ಬಾಲ್ಯದಲ್ಲೇ ನಿಯಂತ್ರಿಸುತ್ತಾ ಪೋಷಕರಿಗೆ
ಮುಂದೆ ಕಷ್ಟವಾಗದು.
ಎಚ್ಚೆತ್ತುಕೊಳ್ಳಲಿ ಜಿಲ್ಲಾಡಳಿತ
ಕರಾವಳಿ ಈ
ಉಭಯ ಜಿಲ್ಲೆಗಳಲ್ಲಿ ಕಳೆದ ಆರೇಳು ತಿಂಗಳಲ್ಲಿ ನಡೆದ ಈ 6 ಆತ್ಮಹತ್ಯೆ ಪ್ರಕರಣಗಳು ಆತಂಕ ಮೂಡಿಸುವಂತಿದೆ.
ಇನ್ನೇನು ಪರೀಕ್ಷೆ ಎದುರಾಗುತ್ತಿದ್ದು, ಜಿಲ್ಲಾಡಳಿತಗಳು ರಾಜ್ಯ ಸರಕಾರದ ನಿರ್ದೇಶನವನ್ನೇ ಕಾಯದೇ
ಮಕ್ಕಳ ಅಮೂಲ್ಯ ಪ್ರಾಣವನ್ನ ಉಳಿಸಲು ವಿಶೇಷ ಪ್ರಯತ್ನ ನಡೆಸಬೇಕಿದೆ. ಹೀಗಾದಲ್ಲಿ ಮಾತ್ರ ಇಂದಿನ ಮಕ್ಕಳೇ
ಮುಂದಿನ ಭವಿಷ್ಯ ಅನ್ನೋ ಮಾತಿಗೆ ಅರ್ಥ ಬಂದೀತು.