ಸುರತ್ಕಲ್: ಫಾಝಿಲ್ ಸಹೋದರ, ತಂದೆ & ಬಜರಂಗದಳ ಮುಖಂಡ ಪ್ರೀತಂ ಶೆಟ್ಟಿ ಸೇರಿ ಇತ್ತಂಡಗಳ 9 ಮಂದಿ ವಿರುದ್ಧ ಕೇಸ್
ಮಂಗಳೂರು:
ಬುಧವಾರ ರಾತ್ರಿ ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಇತ್ತೀಚೆಗೆ ಹತ್ಯೆಗೀಡಾದ
ಫಾಝಿಲ್ ಸಹೋದರ ಆದಿಲ್, ಆತನ ತಂದೆ ಉಮರ್ ಫಾರೂಕ್ ಹಾಗೂ ಬಜರಂಗದಳ ಮುಖಂಡ ಪ್ರೀತಂ ಶೆಟ್ಟಿ ಸೇರಿದಂತೆ
ಇತ್ತಂಡಗಳ 9 ಮಂದಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ
ಫಾಝಿಲ್ ಸಹೋದರ ಆದಿಲ್ ಮೆಹರೂಫ್ ಹಾಗೂ ನಾಗೇಶ್ ದೇವಾಡಿಗ ನೀಡಿದ ಪ್ರತ್ಯೇಕ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದೂರುದಾರರು ಇಬ್ಬರು ಸುರತ್ಕಲ್ ಹಾಗೂ ಮಂಗಳೂರು ನಗರದ ಆಸ್ಪತ್ರೆಯೊಂದರಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ
ಎಂದು ತಿಳಿದು ಬಂದಿದೆ.
ಫಾಝಿಲ್ ಸಹೋದರ
ಆದಿಲ್ ನೀಡಿದ ದೂರಿನಂತೆ, ಬುಧವಾರ ರಾತ್ರಿ 8.45ರ ವೇಳೆಗೆ ಕಾಟಿಪಳ್ಳ ಗಣೇಶಪುರ ಬಳಿ ಕಾರಿನಲ್ಲಿ
ಹೋಗುತ್ತಿದ್ದಾಗ ಉದ್ದೇಶಪೂರ್ವಕವಾಗಿ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದೆ. ಸವಾರ ರಸ್ತೆಗೆ
ಬೀಳುತ್ತಿದ್ದಂತೆ ಅಲ್ಲಿಗೆ ಬಂದ ಪ್ರೀತಮ್ ಶೆಟ್ಟಿ, ಆಕಾಶ್, ಪ್ರಕಾಶ್ ಹಾಗೂ ಇನ್ನೋರ್ವ ವ್ಯಕ್ತಿ
ಅವಾಚ್ಯವಾಗಿ ಬೈದು ಕೈಯ್ಯಿಂದ ಹಲ್ಲೆ ಮಾಡಿದ್ದು ಆ ಸಮಯ ಫಾರೂಕ್ ಎಂಬವರು ಜಗಳ ಬಿಡಿಸಿರುತ್ತಾರೆ.
ಅಲ್ಲದೇ, ಪ್ರೀತಮ್ ಶೆಟ್ಟಿ ಅಲ್ಲಿದ್ದವರನ್ನ ಉದ್ದೇಶಿಸಿ ಹರ್ಷಿತ್ ಗೆ ಕರೆ ಮಾಡುವಂತೆ ತಿಳಿಸಿದ್ದಾಗಿಯೂ
ದೂರಿನಲ್ಲಿ ಹೇಳಲಾಗಿದೆ.
ಇನ್ನು ದ್ವಿಚಕ್ರ
ವಾಹನ ಸವಾರ ನಾಗೇಶ್ ದೇವಾಡಿಗ ನೀಡಿದ ದೂರಿನನ್ವಯ, ಕಾಟಿಪಳ್ಳ ಗಣೇಶ್ ಪುರ ಜಂಕ್ಷನ್ ಬಳಿ ತೆರಳುತ್ತಿದ್ದಾಗ
ದುಡುಕುತನದಿಂದ ಕಾರು ಚಲಾಯಿಸಿಕೊಂಡು ಬಂದ ಆದಿಲ್ ಮೆಹರೂಫ್, ಕಾರನ್ನು ತನ್ನ ದ್ವಿಚಕ್ರ ವಾಹನಕ್ಕೆ
ತಾಗಿಸಿದ್ದು, ಕಾರಿನಿಂದ ಇಳಿದು ಬಂದ ಆದಿಲ್ ತನಗೆ ಬೈದಿದ್ದು ಅಲ್ಲದೇ ಆತನ ತಂದೆ ಉಮರ್ ಫಾರೂಕ್,
ಅಬ್ದುಲ್ ಹಮೀದ್ ಹಾಗೂ ಮಾವ ಉಮರ್ ಫಾರೂಕ್ ಜೊತೆ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ
ಅಲ್ಲಿಗೆ ಆಗಮಿಸಿದ ಪ್ರೀತಮ್ ಶೆಟ್ಟಿ, ಪ್ರಕಾಶ್, ರಾಜು ಇತರರನ್ನು ಕಂಡು ನಿಮ್ಮನ್ನ ಕೊಲೆ ಮಾಡುವುದಾಗಿ
ಬೆದರಿಸಿದ್ದಾಗಿ ದೂರಲಾಗಿದೆ.
ಆದಿಲ್ ನೀಡಿದ
ದೂರಿನನ್ವಯ ಬಜರಂಗದಳ ಮುಖಂಡ ಪ್ರೀತಂ ಶೆಟ್ಟಿ, ಆಕಾಶ್, ಪ್ರಕಾಶ್, ಹರ್ಷಿತ್ ಹಾಗೂ ಇನ್ನೊಬ್ಬಾತನ
ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ನಾಗೇಶ್ ದೇವಾಡಿಗ ನೀಡಿದ ದೂರಿನನ್ವಯ ಫಾಝಿಲ್ ಸಹೋದರ
ಆದಿಲ್ ಮೆಹರೂಫ್, ತಂದೆ ಉಮರ್ ಫಾರೂಕ್, ಅಬ್ದುಲ್ ಹಮೀದ್ ಹಾಗೂ ಉಮರ್ ಫಾರೂಕ್ ಎಂಬವರ ವಿರುದ್ಧ ಜೀವ
ಬೆದರಿಕೆ, ಹಲ್ಲೆ ಸಹಿತ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದರಲ್ಲಿ ಹರ್ಷಿತ್,
ಫಾಝಿಲ್ ಹತ್ಯೆ ಆರೋಪಿಗಳಲ್ಲಿ ಒಬ್ಬನಾಗಿದ್ದು ಜಾಮೀನಿನ ಮೇಲೆ ಬಿಡುಗಡೆಗೊಂಡಿರುತ್ತಾನೆ. ಹಣಕ್ಕಾಗಿ
ಉದ್ಯಮಿಯೋರ್ವರಿಗೆ ಬೆದರಿಕೆಯೊಡ್ಡಿದ ಪ್ರಕರಣದ ಮೇಲೆ ಮೂರು ದಿನಗಳ ಹಿಂದಷ್ಟೇ ಉಳ್ಳಾಲ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
Also Read ಸುರತ್ಕಲ್: ಫಾಝಿಲ್ ಸಹೋದರನ ಮೇಲೆ ಹಲ್ಲೆ; ಬಿಗುವಿನ ವಾತಾವರಣ