ಕೋಟ್ಯಂತರ ಮೌಲ್ಯದ ತಿಮಿಂಗಿಲ ವಾಂತಿ ಮಾರಾಟ ಯತ್ನ; ಇಬ್ಬರ ಸೆರೆ
ಮಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ಬೆಲೆ ಬಾಳುವ ಆಂಬರ್-ಗ್ರೀಸ್ (ತಿಮಿಂಗಿಲ ವಾಂತಿ) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ದಸ್ತಗಿರಿ ಮಾಡಿ ಕೋಟ್ಯಂತರ ಮೌಲ್ಯದ ಸೊತ್ತನ್ನು ಮಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಗರದ ಲಾಲ್ ಬಾಗ್ ನ ಕರಾವಳಿ ಮೈದಾನ ಪರಿಸರದಲ್ಲಿ ಕೋಟ್ಯಂತರ ಬೆಲೆಬಾಳುವ ಉತ್ಪನ್ನವಾದ ಅಂಬರ್ ಗ್ರೀಸ್(ತಿಮಿಂಗಿಲ ವಾಂತಿ)ವಶದಲ್ಲಿಟ್ಟು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ನೇತ್ರತ್ವದಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಗುರುವಾಯನಕೆರೆಯ ನಿಮಿತ್, ಪುಂಜಾಲಕಟ್ಟೆಯ ಯೋಗೀಶ್ ಎಂಬವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ 3.2 ಕೆಜಿ ತೂಕದ ಅಂಬರ್ ಗ್ರೀಸ್(ತಿಮಿಂಗಿಲ ವಾಂತಿ) ಹಾಗೂ 2 ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದಕ್ಕೆ ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 3.2 ಕೋಟಿ ಮೌಲ್ಯವಿರುತ್ತದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಏನಿದು ತಿಮಿಂಗಲ ವಾಂತಿ?
ಅಧ್ಯಯನ ಪ್ರಕಾರ, ತಿಮಿಂಗಿಲ ಮೀನಿನ ಗುದದ್ವಾರ ಹಾಗೂ ಕೆಲವೊಮ್ಮೆ ವಾಂತಿ ರೂಪದಲ್ಲಿ ಬರುವಂತಹ ಮೇಣ ರೂಪದ ವಸ್ತುವಾಗಿರುತ್ತದೆ. ಇದನ್ನು ಸುಗಂಧ ದ್ರವ್ಯ, ಆಹಾರ ಹಾಗೂ ಔಷಧಗಳಿಗೆ ಬಳಸಲಾಗುತ್ತದೆ.
ನಿಷೇಧ ಯಾಕೆ?
ಆಂಬರ್ ಗ್ರೀಸ್ ಅನ್ನೋ ಈ ಪದಾರ್ಥ ಎಲ್ಲ ತಿಮಿಂಗಿಲಗಳಲ್ಲಿ ಸಿಗದು. ಬದಲಾಗಿ, 'ಸ್ಟರ್ಮ್ ವೇಲ್' ಅನ್ನೋ ಅಪರೂಪದ ತಿಮಿಂಗಿಲದಲ್ಲಷ್ಟೇ ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ ಚಂಡಮಾರುತ ಸಮಯದಲ್ಲಿ ಇದು ದಡ ಸೇರುತ್ತದೆ. ಅಂತಹ ಸಮಯಕ್ಕಾಗಿ ಹಲವರು ಕಾಯುತ್ತಿರುತ್ತಾರೆ.
ಆದರೆ, ಈ ಜಾತಿಯ ಜಲಚರ ಅಳಿವಿನಂಚಿನಲ್ಲಿರುವುದರಿಂದ ಅದರ ನಾಶದ ಭೀತಿಯಿಂದಾಗಿ 1972 ರ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಭಾರತದಲ್ಲಿ ಅದಕ್ಕೆ ನಿಷೇಧ ಹೇರಲಾಗಿದೆ. ಮಾತ್ರವಲ್ಲದೇ ಸುಮಾರು 40 ದೇಶಗಳಲ್ಲೂ ಅದರ ಮಾರಾಟ, ಸಾಗಣೆಗೆ ನಿಷೇಧವಿದೆ.