ಫಾಝಿಲ್ ಹತ್ಯೆ ಸಮರ್ಥನೆ | ಶರಣ್ ಪಂಪ್ವೆಲ್ ವಿರುದ್ಧ ಕಮೀಷನರ್ ಗೆ ಫಾಝಿಲ್ ತಂದೆ ದೂರು
ಮಂಗಳೂರು: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಫಾಝಿಲ್
ಹತ್ಯೆ ಸಂಬಂಧ ನೀಡಿರುವ ವಿವಾದಾತ್ಮಕ ಹೇಳಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಫಾಝಿಲ್ ತಂದೆ ಉಮರ್
ಫಾರೂಕ್ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ದೂರನ್ನು ನೀಡಿದ್ದಾರೆ.
ಸೋಮವಾರ ಮಧ್ಯಾಹ್ನ ನಗರದಲ್ಲಿರುವ ಕಮೀಷನರ್ ಕಚೇರಿಯಲ್ಲಿ ಪೊಲೀಸ್ ಆಯುಕ್ತ
ಎನ್. ಶಶಿಕುಮಾರ್ ಅವರನ್ನು ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
‘‘ನಾನು ಈ ಹಿಂದಿನಿಂದಲೂ ಕೊಲೆಯ ಸೂತ್ರಧಾರರನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದೆನು.
ಆದರೆ 8 ಮಂದಿಯನ್ನಷ್ಟೇ ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಇದೀಗ ತುಮಕೂರಿನಲ್ಲಿ ನಡೆದ ಶೌರ್ಯ
ದಿನ ಕಾರ್ಯಕ್ರಮದಲ್ಲಿ ತನ್ನ ಮಗ ಫಾಝಿಲ್ ಹತ್ಯೆಯನ್ನು ಶರಣ್ ಪಂಪ್ವೆಲ್ ಸಮರ್ಥಿಸಿಕೊಂಡಿದ್ದಾನೆ.
ಹಾಗಾಗಿ ಈ ಕೊಲೆ ಬಗ್ಗೆ ಶರಣ್ ಪಂಪ್ವೆಲ್ ಗೆ ಹೆಚ್ಚಿನ ಮಾಹಿತಿ ಇರುವ ಸಾಧ್ಯತೆಯಿದ್ದು, ಆತನ ಅಣತಿ
ಮೇರೆಗೆ ಇದೆಲ್ಲವೂ ನಡೆದಿರುವ ಸಾಧ್ಯತೆಯಿದೆ. ಆದ್ದರಿಂದ ಶರಣ್ ಪಂಪ್ವೆಲ್ ಬಂಧಿಸಿ ಹೆಚ್ಚಿನ ತನಿಖೆಗೆ
ಒಳಪಡಿಸಬೇಕಿದೆ‘‘ ಎಂದು ಮೃತ ಫಾಝಿಲ್ ತಂದೆ ಉಮರ್ ಫಾರೂಕ್ ಒತ್ತಾಯಿಸಿದ್ದಾರೆ.
ಸುರತ್ಕಲ್ ನ ಮಂಗಳಪೇಟೆ ನಿವಾಸಿ ಫಾಝಿಲ್ ಅವರನ್ನು ಸುರತ್ಕಲ್ ಪೇಟೆಯಲ್ಲಿ
ಕಳೆದ ವರ್ಷ ಜುಲೈ 28 ರಂದು ಸಂಘ ಪರಿವಾರಕ್ಕೆ ಸೇರಿದ ಕಾರ್ಯಕರ್ತರು ಹತ್ಯೆಗೈದಿದ್ದರು.