ಸುಳ್ಯ: ಬಿಜೆಪಿ ಅಭ್ಯರ್ಥಿ ಬದಲಾವಣೆ ಕನ್ಫರ್ಮ್!; ಅಂಗಾರ ಬದಲು ರವಿ ಮೊಗೇರ‘ಗೆ ಟಿಕೆಟ್!?
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಮೀಸಲು ವಿಧಾನಸಭಾ ಕ್ಷೇತ್ರ ಸುಳ್ಯದಲ್ಲಿ
ಈ ಬಾರಿ ಹಾಲಿ ಶಾಸಕರ ಬದಲು ಯುವಕರಿಗೆ ಮಣೆ ಹಾಕಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಹೈಕಮಾಂಡ್
ಮುಂದೆ ಮೂವರು ಯುವ ಆಕಾಂಕ್ಷಿಗಳ ಪಟ್ಟಿ ತಲುಪಿದೆ ಎನ್ನಲಾಗಿದ್ದು, ಅದರಲ್ಲಿ ಮೂಲತಃ ಮಡಿಕೇರಿಯವರಾದ
ಪಿ.ಎಂ. ರವಿ ಮೊಗೇರ ಪರ ಹೆಚ್ಚಿನ ಒಲವು ಇದೆ ಎನ್ನಲಾಗಿದೆ.
ಹಾಲಿ ಶಾಸಕ, ಸಚಿವ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ಸಿಕ್ಕ ಬಳಿಕವಂತೂ
ತವರು ಕ್ಷೇತ್ರದಲ್ಲಿ ಹೆಚ್ಚಿನ ವಿರೋಧ ಸ್ವಪಕ್ಷೀಯರಿಂದಲೇ ಕೇಳಿ ಬರುತ್ತಿದೆ. ಇತ್ತೀಚೆಗೆ ಬಿಜೆಪಿ
ಮತದಾರರೇ ಅಂಗಾರ ವಿರುದ್ಧ ಮುನಿಸಿಕೊಂಡಿದ್ದು ಹಾಗೂ ಆರು ಬಾರಿ ಶಾಸಕ ಸ್ಥಾನ ಅಲಂಕರಿಸಿದ್ದ ಕಾರಣಕ್ಕಾಗಿ
ಅವರನ್ನು ಬದಲಾಯಿಸಲು ಹೈಕಮಾಂಡ್ ಮುಂದಾಗಿದೆ. ಇದರ ಮುಂದುವರಿದು ಪಿ.ಎಂ. ರವಿ ಮೊಗೇರ ಅವರಿಗೆ ಸುಳ್ಯದಲ್ಲಿ
ಟಿಕೆಟ್ ನಿಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
![]() |
| ಪಿ.ಎಂ. ರವಿ ಮೊಗೇರ |
ಯಾರಿವರು ರವಿ ಮೊಗೇರ?
ಪಿ.ಎಂ. ರವಿ ಮೊಗೇರ ಸಂಘ ಪರಿವಾರ ಹಾಗೂ ಅದರ ಸಹ ಸಂಘಟನೆಗಳಲ್ಲಿ ಸಕ್ರಿಯವಾಗಿ
ಗುರುತಿಸಿಕೊಂಡಿದ್ದಾರೆ. ಸಂಘದ ಹಿರಿಯ ನಾಯಕರ ಜೊತೆಗೂ ಆತ್ಮೀಯರಾಗಿದ್ದಾರೆ. ಮಾತ್ರವಲ್ಲದೇ ತುಳು,
ಕನ್ನಡ ಭಾಷಾ ಸೇವೆ, ಧಾರ್ಮಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವಿಕೆ, ಮಡಿಕೇರಿ ದಸರಾ ಸಮಿತಿ ಉಪಾಧ್ಯಕ್ಷ,
ತುಳು ಅಕಾಡೆಮಿ ಸದಸ್ಯನಾಗಿ ಹೀಗೆ ಅನೇಕ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲೂ ರವಿ ಮೊಗೇರ ತನ್ನನ್ನು
ತಾನು ಗುರುತಿಸಿಕೊಂಡಿದ್ದಾರೆ. ಸುಳ್ಯ ಹಾಲಿ ಶಾಸಕ ಎಸ್. ಅಂಗಾರ ಅವರ ಜೊತೆಗೂ ಉತ್ತಮ ಒಡನಾಟ ಹೊಂದಿದ್ದಾರೆ.
ಜನರ ಜೊತೆ ಮುಕ್ತವಾಗಿ ಬೆರೆಯುವ ಸ್ವಭಾವ ಹೊಂದಿರುವ ರವಿ ಮೊಗೇರ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ
ಹೆಚ್ಚಿದೆ ಎನ್ನಲಾಗಿದೆ.
