ಯುಟಿ ಖಾದರ್ ಕಟ್ಟಿ ಹಾಕಲು ಹೊರಟಿದ್ದ SDPI ಗೆ ಆಘಾತ; ಅಶ್ರಫ್ ಕೆಸಿ ರೋಡ್ ಗುಡ್ ಬೈ!
ಮಂಗಳೂರು: ಎಲೆಕ್ಷನ್ ಬೆನ್ನಲ್ಲೇ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾಗಿದ್ದ ಅಶ್ರಫ್ ಕೆಸಿ ರೋಡ್ ಪಕ್ಷ ತೊರೆದಿದ್ದು ಭಾರೀ ಆಘಾತ ನೀಡಿದೆ. ಈ ಕುರಿತು ಸ್ವತಃ ಟ್ವಿಟ್ಟರ್ ಮೂಲಕ ಅಶ್ರಫ್ ಕೆಸಿ ರೋಡ್ ಅವರೇ ವಿಷಯ ಸ್ಪಷ್ಟಪಡಿಸಿದ್ದಾರೆ.
"ಕೆಲವು ವೈಯಕ್ತಿಕ ಕಾರಣದಿಂದಾಗಿ ನಾನು ಎಸ್ಡಿಪಿಐ ಪಕ್ಷವನ್ನು ತೊರೆಯುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಕೊನೆಯಲ್ಲಿ ಹ್ಯಾಷ್ ಟ್ಯಾಗ್ ಬಳಸಿ "ರಾಜಕೀಯ ನಿವೃತ್ತಿ" ಎಂದು ಬರೆದುಕೊಂಡಿದ್ದಾರೆ.
ಖಾದರ್ ಕಟ್ಟಿ ಹಾಕುವ ಕನಸು ಭಗ್ನ!
ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಕಟ್ಟಿ ಹಾಕಲು ಹಾತೊರೆಯುತ್ತಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ ಅಶ್ರಫ್ ಕೆಸಿ ರೋಡ್ ರಾಜೀನಾಮೆ ಆರಂಭಿಕ ಹಿನ್ನಡೆ ಎಂದೇ ರಾಜಕೀಯ ರಂಗದಲ್ಲಿ ಚರ್ಚೆಯಾಗುತ್ತಿದೆ. ಯಾಕೆಂದರೆ ಎಸ್ಡಿಪಿಐ ಸೇರುವ ಮುನ್ನ ಡಿವೈಎಫ್ ಐ ಜೊತೆ ಗುರುತಿಸಿಕೊಂಡಿದ್ದ ಅಶ್ರಫ್ ಕೆಸಿ ರೋಡ್ ಬಳಿಕ ಎಸ್ಡಿಪಿಐ ಸೇರಿಕೊಂಡ ನಂತರವೂ ತನ್ನ ಮಾತಿನ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರಖರ ಹಾಗೂ ಪ್ರಬುದ್ಧ ವಾಗ್ಮಿ ಆಗಿಯೂ ಗುರುತಿಸಿಕೊಂಡಿದ್ದರು. ಅದೆಲ್ಲಕ್ಕೂ ಜಾಸ್ತಿ ಉಳ್ಳಾಲ ಭಾಗದಲ್ಲಿ ಯುವಕರನ್ನು ಒಂದುಗೂಡಿಸುವ ಶಕ್ತಿ ಹೊಂದಿದ್ದರು.
ಉಳ್ಳಾಲದಲ್ಲಿ ಈಗಾಗಲೇ ಎಸ್ಡಿಪಿಐ ರಾಷ್ಟ್ರೀಯ ಮುಖಂಡ ರಿಯಾಝ್ ಫರಂಗಿಪೇಟೆ ಸ್ಪರ್ಧೆ ನಡೆಸುವುದಾಗಿ ಅಧಿಕೃತ ಘೋಷಣೆ ಮಾಡಲಾಗಿದೆ.
SDPI ಜೊತೆ ಮುನಿಸು ಯಾಕೆ!?
ಮೇಲ್ನೋಟಕ್ಕೆ ಎಸ್ಡಿಪಿಐ ಜೊತೆ ಅಂತಹ ಮುನಿಸು ಇಲ್ಲದೇ ಹೋದರೂ ಅಶ್ರಫ್ ಕೆಸಿ ರೋಡ್ ಉಳ್ಳಾಲ ಭಾಗದಲ್ಲಿ ರಿಯಾಝ್ ಫರಂಗಿಪೇಟೆ ಹೆಸರು ಶಾಸಕ ಸ್ಥಾನಕ್ಕೆ ಘೋಷಣೆಯಾದ ನಂತರ ಪಕ್ಷದ ಚಟುವಟಿಕೆಯಿಂದ ಹಿಂದೆ ಸರಿದಿದ್ದರೇ ಅನ್ನೋ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಕೆಸಿ ರೋಡ್ ಕೂಡಾ ಸ್ಪರ್ಧಾ ಆಕಾಂಕ್ಷಿಯಾಗಿದ್ದರೇ ಅನ್ನೋ ಚರ್ಚೆಯೂ ಶುರುವಾಗಿದೆ.
ಅಶ್ರಫ್ ಮುಂದಿನ ನಡೆ!?
ಅಶ್ರಫ್ ಎಸ್ಡಿಪಿಐ ತೊರೆದ ಬೆನ್ನಿಗೆ ಯುಟಿ ಖಾದರ್ ಜೊತೆ ಕೈ ಕುಲುಕುವ ಫೋಟೋವೊಂದು ಹರಿದಾಡುತ್ತಿದೆ. ಆದರೆ ಈ ಫೋಟೋ ಯಾವ ಸಮಯದ್ದು ಅನ್ನೋದರ ಬಗ್ಗೆ ಅಶ್ರಫ್ ಅವರೇ ಸ್ಪಷ್ಟನೆ ನೀಡಬೇಕಿದೆ. ಇನ್ನುಳಿದಂತೆ ಎಸ್ಡಿಪಿಐ ಮುಖಂಡರು ಕೂಡಾ ಅಶ್ರಫ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ.

