ಸುರತ್ಕಲ್ ಕ್ಷೇತ್ರದಲ್ಲಿ ಮೊಯ್ದಿನ್ ಬಾವಾ ಪರ ಬಿಜೆಪಿ ಕಾರ್ಯಕರ್ತರ ಒಲವು; ಸರ್ವೇಯಲ್ಲಿ ಬಿಜೆಪಿಗನ ಮುಕ್ತ ಮಾತು!
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ‘ಕೈ‘ ಟಿಕೆಟ್ ವಿಚಾರ ಇನ್ನೂ
ಕಗ್ಗಂಟಾಗಿರುವ ಬೆನ್ನಿಗೆ, ಅತ್ತ ಹಾಲಿ ಶಾಸಕ ಬಿಜೆಪಿಯ ಡಾ. ಭರತ್ ಶೆಟ್ಟಿ ಬಗ್ಗೆ ಅವರದೇ ಪಕ್ಷದಲ್ಲಿ
ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಖುದ್ದು ಬಿಜೆಪಿ ಕಾರ್ಯಕರ್ತರೋರ್ವರು ಮಾಜಿ ಶಾಸಕ ಮೊಯ್ದಿನ್ ಬಾವಾ
ಪರ ಸರ್ವೇಯೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದು, ತಮ್ಮ ಶಾಸಕರ ವಿರುದ್ಧ ಅಭಿಪ್ರಾಯ ತಿಳಿಸಿದ್ದಾರೆ.
‘‘ನಾನು ಕಾಂಗ್ರೆಸ್ ಅಲ್ಲದೇ ಹೋದರೂ, ಮಂಗಳೂರು ಉತ್ತರ ಕ್ಷೇತ್ರದಲ್ಲಿ
ಮೊಯ್ದಿನ್ ಬಾವಾ ಉತ್ತಮ ಕೆಲಸ ಮಾಡಿದ್ದರು. ಧರ್ಮ ನೋಡಿ ವೋಟ್ ಮಾಡಿದ್ದಕ್ಕೆ ಈಗ ಕಷ್ಟವಾಗ್ತಿದೆ.
ಅಭಿವೃದ್ಧಿ ಏನೂ ಆಗ್ತಿಲ್ಲ. ಬಿಜೆಪಿಯವರು ಆಗಿ ನಮ್ಗೆ ಹೇಳಲಿಕ್ಕೆ ಕಷ್ಟವಾಗ್ತಿದೆ. ಸಾಮಾನ್ಯ ಕಾರ್ಯಕರ್ತನಾಗಿ
ನಮಗೆ ಆತ್ಮಸಾಕ್ಷಿಯಿದೆ. ಧರ್ಮಕ್ಕಾಗಿ ವೋಟ್ ಹಾಕಿದ್ರೆ, ಇವರು ಅಧರ್ಮದಲ್ಲಿ ನಡೆಯುತ್ತಿದ್ದಾರೆ.
ನಾವು ಸುಳ್ಳು ಹೇಳಿದ್ರೆ ದೇವರು ಮೆಚ್ಚಲ್ಲ. ಅಷ್ಟೊಂದು ಪಾಪವನ್ನು ಬಿಜೆಪಿ ಮಾಡಿದೆ‘‘ ಎಂದು ತಿಳಿಸಿದ್ದಾರೆ.
‘‘ಬೇರೆ ಪಕ್ಷದ ಶಾಸಕರನ್ನು ಖರೀದಿಸಿ ಪಕ್ಷ ಕಟ್ಟುವುದಾದರೆ, ಅಂತಹ
ಬಿಜೆಪಿ ನನಗೆ ಬೇಡ. ಕಾಂಗ್ರೆಸ್ ನ ಕಳ್ಳರೆಲ್ಲ ಬಿಜೆಪಿಗೆ ಬಂದು ಆಳ್ವಿಕೆ ನಡೆಸುತ್ತಾರೆ ಅಂತಾದ್ರೆ,
ಬಿಜೆಪಿಯು ಕಳ್ಳರ ಪಕ್ಷ ಆಯಿತಲ್ವ?. ಪಕ್ಷದ ಬದಲಾಗಿ ವ್ಯಕ್ತಿಯಾಗಿ ನೋಡುವುದಿದ್ದರೂ ರಾಜ್ಯದಲ್ಲಿ
ಬೇರೆ ಎಲ್ಲ ಸಿಎಂ ಗಳಿಗಿಂತ ಸಿದ್ದರಾಮಯ್ಯ ಬೆಟರ್‘‘ ಎಂದಿದ್ದಾರೆ.
ಸರ್ವೇಯಲ್ಲಿ ಮುಂದುವರೆದು ಕರೆ ಮಾಡಿದಾತ ಮುಂದಿನ ಶಾಸಕರಾಗಿ ಯಾರನ್ನು
ನೋಡಲು ಇಷ್ಟಪಡುತ್ತೀರ ಅಂತಾ ಪ್ರಶ್ನಿಸಿದ್ದು, ಅದ್ರಲ್ಲಿ ಭರತ್ ಶೆಟ್ಟಿ, ತಿಲಕ್ ರಾಜ್ ಕೃಷ್ಣಾಪುರ,
ಮೊಯ್ದಿನ್ ಬಾವಾ, ಕೃಷ್ಣ ಪಾಲೆಮಾರ್, ಇನಾಯತ್ ಅಲಿ, ವಿಜಯ್ ಕುಮಾರ್ ಶೆಟ್ಟಿ ಹೆಸರನ್ನ ಸೂಚಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯು, ಮೊಯ್ದಿನ್ ಬಾವಾ ಅವಧಿಯಲ್ಲಿ ಉತ್ತಮ ಯೋಜನೆಗಳು ಬಂದಿದ್ದವು.
ಜನತಾ ಕಾಲನಿಯಲ್ಲಿ ಬಡವರಿಗೆ 600-700 ಮನೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದರು. ಅದು ಈಗಲೂ
ಅರ್ಧಕ್ಕೆ ನಿಂತಿದೆ, ಮೊಯ್ದಿನ್ ಬಾವಾ ಇದ್ದಿದ್ದರೆ ಅದು ಕಂಪ್ಲೀಟ್ ಆಗ್ತಿತ್ತು‘‘ ಎಂದಿದ್ದಾರೆ.
‘‘ನಾನು ಇದುವರೆಗೂ ಬಿಜೆಪಿಗೆ ವೋಟ್ ಹಾಕಿದ್ದೇನೆ. ಇನ್ನು ಮೋದಿ ಮುಖ
ನೋಡಲು ಸಾಧ್ಯವಿಲ್ಲ. ಕಾಂಗ್ರೆಸ್ ಗೆ ವೋಟ್ ನೀಡಿದ್ರೆ ತಪ್ಪೇನು? ಕಾಂಗ್ರೆಸ್ ನವರೇ ಬಿಜೆಪಿಯಲ್ಲಿದ್ದಾರೆ.
ಸಂಘ ಏನೂ ಕಂಟ್ರೋಲ್ ಮಾಡ್ತಿಲ್ಲ..‘‘ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ನಾನು ಕ್ಯಾಂಡಿಡೇಟ್ ನೋಡಿ ವೋಟ್ ಹಾಕುವವನು. ಸದ್ಯದ ಪರಿಸ್ಥಿತಿಯಲ್ಲಿ
ಬಿಜೆಪಿಯನ್ನು ಸೋಲಿಸುವುದೇ ಒಳ್ಳೆಯದು ಎಂದು ಭಾವಿಸಿದ್ದೇವೆ. ಬಿಜೆಪಿಯವರು ಧರ್ಮದ ಹೆಸರಲ್ಲಿ ಎಲ್ಲವನ್ನೂ
ಹಾಳು ಮಾಡಿ ಹಾಕಿದ್ದಾರೆ. ಸ್ಥಳೀಯ ಎಂಆರ್ ಪಿಎಲ್ ಕಂಪೆನಿಯಲ್ಲಿ ನಮ್ಮದೇ ಬಿಜೆಪಿಯ ಸದಸ್ಯರ ಮಕ್ಕಳಿಗೆ
ಉದ್ಯೋಗ ಸಿಕ್ಕಿಲ್ಲ‘‘ ಎಂದು ತಿಳಿಸಿದ್ದಾರೆ.
ಚುನಾವಣಾ ಸಮೀಕ್ಷೆ ನಡೆಸಲು ಕರೆ ಮಾಡಿದ ವ್ಯಕ್ತಿಯು ಬಿಜೆಪಿ ಕಾರ್ಯಕರ್ತರ
ಜೊತೆಗೆ ಹೀಗೆ 9.49 ನಿಮಿಷಗಳ ಕಾಲ ನಡೆಸಿದ ಸಂಭಾಷಣೆ ‘ದಿ ನ್ಯೂಸ್ ಅವರ್‘ ಗೆ ಲಭ್ಯವಾಗಿದೆ.