
ಉಡುಪಿ: ಹಿರಿಯಡ್ಕ ಜೈಲಿನಲ್ಲಿ ವಿಚಾರಣಾಧೀನ ಕೈದಿ ಸದಾನಂದ ಶೇರಿಗಾರ್ ಆತ್ಮಹತ್ಯೆ!
ಉಡುಪಿ: 'ಕುರುಪ್' ಸಿನೆಮಾ ಮಾದರಿಯಲ್ಲಿ ವ್ಯಕ್ತಿಯೋರ್ವ ಹತ್ಯೆಗೈದಿದ್ದ ಪ್ರಕರಣ ಸಂಬಂಧ ಬಂಧಿತನಾಗಿದ್ದ ಆರೋಪಿ ಉಡುಪಿ ಸಬ್ ಜೈಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.
ಕಾರ್ಕಳ ನಿವಾಸಿ ಸದಾನಂದ ಶೇರಿಗಾರ್ ಆತ್ಮಹತ್ಯೆ ಮಾಡಿಕೊಂಡ ಕೈದಿ. ಈತ ಐದು ತಿಂಗಳ ಹಿಂದೆ ಬೈಂದೂರಿನ ಒತ್ತಿನೆಣೆ ಬಳಿ ಕಾರನ್ನು ಸುಟ್ಟು ತಾನು ಸತ್ತಿರುವುದಾಗಿ ಬಿಂಬಿಸಿದ್ದನು. ಆದರೆ ಕಾರಿನಲ್ಲಿ ಕಾರ್ಕಳ ಮೂಲದ ಅನಂತ ದೇವಾಡಿಗ (60) ಅವರನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣ ಭೇದಿಸಿದ್ದ ಪೊಲೀಸರು ಸದಾನಂದ ಶೇರಿಗಾರ್ ಸಹಿತ ನಾಲ್ವರನ್ನು ಅರೆಸ್ಟ್ ಮಾಡಿದ್ದರು.
ಇದೀಗ ಸದಾನಂದ ಶೇರಿಗಾರ್ ಉಡುಪಿಯ ಸಬ್ ಜೈಲಿನಲ್ಲಿ ಪಂಚೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಭಾನುವಾರ ಮುಂಜಾನೆ ಐದು ಗಂಟೆಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸಹ ಕೈದಿಗಳು ಗಮನಿಸಿ ನೇಣಿನ ಕುಣಿಕೆಯಿಂದ ಬಿಡಿಸಿದ್ದರು. ಆದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಸದಾನಂದ ಶೇರಿಗಾರ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಾರ್ಕಳ ಮೂಲದ ಸದಾನಂದ ಸೇರಿಗಾರ್ ಸರ್ವೇಯರ್ ಆಗಿದ್ದು, ಪೋರ್ಜರಿ ಪ್ರಕರಣ ಸಂಬಂಧ ಅರೆಸ್ಟ್ ಭೀತಿಯಿಂದ ತನ್ನನ್ನು ತಾನು ಸತ್ತಿದ್ದಾಗಿ ಬಿಂಬಿಸಲು ಹೋಗಿ ಅನಂತ ದೇವಾಡಿಗರನ್ನು ಪೆಟ್ರೋಲ್ ಸುರಿದು ಹತ್ಯೆಗೈದಿದ್ದನು.