-->
ಮಂಗಳೂರು ದಕ್ಷಿಣ: ಲೋಬೋಗೆ ಟಿಕೆಟ್ ಕೊಟ್ಟರೆ ಕಾಮತ್ ಗೆ ಲಾಭ!?; ಹೊಸ ಮುಖಕ್ಕೆ ‘ಕೈ‘ ಆದ್ಯತೆ!

ಮಂಗಳೂರು ದಕ್ಷಿಣ: ಲೋಬೋಗೆ ಟಿಕೆಟ್ ಕೊಟ್ಟರೆ ಕಾಮತ್ ಗೆ ಲಾಭ!?; ಹೊಸ ಮುಖಕ್ಕೆ ‘ಕೈ‘ ಆದ್ಯತೆ!


ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ  ಸಂಖ್ಯೆಯೇನು ಕಡಿಮೆಯದ್ದಲ್ಲ. 7 ಮಂದಿ ಕೈ ಪಕ್ಷದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಮಾಜಿ ಶಾಸಕ ಜೆಆರ್ ಲೋಬೋ, ಮಾಜಿ ಎಂಎಲ್ಸಿ ಐವನ್ ಡಿಸೋಜಾ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ವಿಶ್ವಾಸ್ ಕುಮಾರ್ ದಾಸ್, ಆಶಿತ್ ಪಿರೇರಾ, ಮೆರಿಲ್ ರೇಗೋ ಹಾಗೂ ಮಹಾನಗರ ಪಾಲಿಕೆ ಸದಸ್ಯ ಎಸಿ ವಿನಯ್ ರಾಜ್ ಸೇರಿದ್ದಾರೆ. ವಿಶೇಷ ಅಂದ್ರೆ, ಬಹುತೇಕ ಕ್ರೈಸ್ತ ಸಮುದಾಯಕ್ಕೆ ಮೀಸಲಾಗಬಹುದಾದ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಅರ್ಜಿ ಸಲ್ಲಿಸಿದವರಲ್ಲಿ ಇಬ್ಬರು ಇತರೆ ಸಮುದಾಯಕ್ಕೆ ಸೇರಿದ್ದರೆ, ಉಳಿದ 5 ಮಂದಿ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ಧಾರೆ. ಅದರಲ್ಲೂ ಓರ್ವ ಮಹಿಳಾ ಆಕಾಂಕ್ಷಿಯೂ ಇದ್ದು, ಮುಲ್ಕಿ-ಮೂಡಬಿದ್ರಿ ಕ್ಷೇತ್ರದವರಾದರೂ ಶಾಲೆಟ್ ಪಿಂಟೋ (ಇವರ ತವರು ಮನೆ ಮಂಗಳೂರು ಆಗಿರುತ್ತದೆ) ಟಿಕೆಟ್ ಗಾಗಿ ದಕ್ಷಿಣ ಕ್ಷೇತ್ರದಿಂದ ಅರ್ಜಿ ಸಲ್ಲಿಸಿದ್ದಾರೆ.

ಇನ್ನು, ಮಂಗಳೂರು ದಕ್ಷಿಣದಲ್ಲಿ ಅಲ್ಪಸಂಖ್ಯಾತರಾದ ಕ್ರೈಸ್ತರು ಹಾಗೂ ಮುಸ್ಲಿಮರು ಬಹುತೇಕ ನಿರ್ಣಾಯಕ ಮತದಾರರು ಆಗಿದ್ದು, ಉಳಿದಂತೆ ಬಿಲ್ಲವ, ಬಂಟ ಹಾಗೂ ಇನ್ನಿತರ ಸಮುದಾಯಗಳೂ ಇವೆ. ಆದರೆ ಕಾಂಗ್ರೆಸ್ ಸ್ವಲ್ಪ ಹಾರ್ಡ್ ವರ್ಕ್ ಮಾಡಿದ್ದಲ್ಲಿ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ. ಅಂತಿಮವಾಗಿ ಕಳೆದ ಬಾರಿಯಂತೆ ಆಂತರಿಕ ಒಳಜಗಳ ಮೇಳೈಸಿದ್ದಲ್ಲಿ ಕಾಂಗ್ರೆಸ್ ಈ ಬಾರಿಯೂ ಅನಾಯಾಸವಾಗಿ ಈ ಕ್ಷೇತ್ರವನ್ನ ಕಳೆದುಕೊಳ್ಳಲಿದೆ.

ಜೆಆರ್ ಲೋಬೋಗೆ ಟಿಕೆಟ್ ಕೊಟ್ರೆ ಕಾಮತ್ ಗೆ ಖುಷ್!

ಹೌದು, ಇಂತಹ ಮಾತು ದಕ್ಷಿಣ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಕಾರಣ, ಜೆಆರ್ ಲೋಬೋ ಕಳೆದ ಅವಧಿಯಲ್ಲಿ ಸೋಲಲು ಅವರು ಮಾಡಿಕೊಂಡ ಕೆಲವು ಎಡವಟ್ಟುಗಳು. ವಿಶೇಷವಾಗಿ ಮುಸ್ಲಿಮರ ವಿರೋಧ ಕಟ್ಟಿಕೊಂಡಿದ್ದು ಲೋಬೋ ಸೋಲಿಗೆ ಪ್ರಮುಖ ಕಾರಣವೂ ಆಗಿತ್ತು. ಇದೆಲ್ಲವೂ ವೇದವ್ಯಾಸ ಕಾಮತ್ ಜೋಳಿಗೆ ತುಂಬಿತ್ತು ಅನ್ನೋ ಮಾತು ಜನಜನಿತ. ಹೀಗಾಗಿ ಈ ಬಾರಿಯೂ ಜೆಆರ್ ಲೋಬೋಗೆ ಟಿಕೆಟ್ ನೀಡಿದ್ದಲ್ಲಿ ಮುಸ್ಲಿಮ್ ಸಮುದಾಯದ ವೋಟ್ ಕೈ ತಪ್ಪೋದರಲ್ಲಿ ಡೌಟಿಲ್ಲ.

ಹಾಗಂತ ವೇದವ್ಯಾಸ್ ಕಾಮತ್ ಗೂ ಕಷ್ಟ!

ಹೌದು, ಈ ಬಾರಿ ಅಲ್ಪಸಂಖ್ಯಾತ ಸಮುದಾಯದ ವೋಟ್ ವೇದವ್ಯಾಸ ಪಾಲಿಗೂ ಕಷ್ಟ. ಯಾಕೆಂದರೆ, ಹಿಜಾಬ್ ವಿಚಾರ, ಮಂಗಳೂರು ಗೋಲಿಬಾರ್ ಕುರಿತು ಅಧಿವೇಶನದಲ್ಲಿ ನೀಡಿದ ಹೇಳಿಕೆ, ಮುಸ್ಲಿಂ ಅಧಿಕಾರಿಗಳ ವರ್ಗಾವಣೆ ಆರೋಪ, ನಗರದಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ, ಆಜಾನ್ ನಿಲುಗಡೆ, ಸರಕಾರದ ಮುಸ್ಲಿಮ್ ವಿರೋಧಿ ನೀತಿ ಇದೆಲ್ಲವೂ ವೇದವ್ಯಾಸ ಕಾಮತ್ ಅವರಿಗೆ ಮೈನಸ್ ಆಗಲಿದ್ದು, ಮುಸ್ಲಿಮರ ವೋಟ್ ಕೂಡಾ ವೇದವ್ಯಾಸ ಕಾಮತ್ ಗೆ ಬಹುತೇಕ ಮೈನಸ್ ಅನ್ನೋದನ್ನ ಹೇಳಬೇಕಿಲ್ಲ.  

ಯಾರಿಗೆ ಕೊಟ್ಟರೆ ಗೆಲ್ಲಬಹುದು?

ಜಾತಿ, ಧರ್ಮ ಆಧಾರದ ಹೊರತಾಗಿ ಕಾಂಗ್ರೆಸ್ ಟಿಕೆಟ್ ನೀಡುವುದಿದ್ದರೆ ಕೈ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಎನ್.ಎಸ್.ಯು.ಐ ಹಾಗೂ ಯುವ ಕಾಂಗ್ರೆಸ್ ನಲ್ಲಿ ಹಲವು ಜವಾಬ್ದಾರಿ, ಕೆಪಿಸಿಸಿ ಸಂಯೋಜಕ, ವಕ್ತಾರನಾಗಿ, ಪಾಲಿಕೆ ಸದಸ್ಯರಾಗಿ ಹಲವು ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಎಸಿ ವಿನಯ್ ರಾಜ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಯುವಕರಿಗೆ ಆದ್ಯತೆ ನೀಡುವುದಿದ್ದರೂ ವಿನಯ್ ರಾಜ್ ಸೂಕ್ತ ಆಯ್ಕೆ. ಪಾಲಿಕೆ ಸದಸ್ಯನಾಗಿ ನಗರದ ನಾಡಿಮಿಡಿತವೂ ತಿಳಿದಿದೆ ಅನ್ನೋದು ವಿನಯ್ ರಾಜ್ ಪ್ಲಸ್ ಪಾಯಿಂಟ್.



ಅದಿಲ್ಲದೇ ಹೋದರೆ, ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತ ವಿಶ್ವಾಸ್ ಕುಮಾರ್ ದಾಸ್ ಕೂಡಾ ಅತೀ ಸೂಕ್ತ ಅಭ್ಯರ್ಥಿ ಅನ್ನೋದರಲ್ಲಿ ಡೌಟಿಲ್ಲ. ರಾಜಕೀಯ ಮಾತ್ರವಲ್ಲದೇ ಧಾರ್ಮಿಕ ಹಾಗೂ ಸಾಮಾಜಿಕವಾಗಿಯೂ ವಿಶ್ವಾಸ್ ಕುಮಾರ್ ದಾಸ್ ಉತ್ತಮ ಹೆಸರು ಹೊಂದಿದ ವ್ಯಕ್ತಿ. ಸಜ್ಜನ , ಸರಳತೆ, ಪಕ್ಷದ ಜೊತೆ ನಿಲ್ಲಬಲ್ಲವರು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

ಇನ್ನು ಜೆಆರ್ ಲೋಬೋ ಹೊರತಾಗಿ ನೋಡುವುದಾದರೆ ಐವನ್ ಡಿಸೋಜಾಗೆ ಟಿಕೆಟ್ ನೀಡಬಹುದು. ಆದರೆ, ಲೋಬೋ ಬಣದ ಗುಂಪುಗಾರಿಕೆ ಆರಂಭವಾದರೆ ಐವನ್ ಗೆಲುವು ಕಷ್ಟಕರವಾಗಲಿದೆ. ಶಾಲೆಟ್ ಪಿಂಟೋಗೆ ನೀಡಿದರೆ ನಗರದಲ್ಲಿ ಹಾಲಿ ಶಾಸಕರಿಗೆ ಪೈಪೋಟಿ ನೀಡೋದಕ್ಕೆ ಸಾಧ್ಯವೇ ಅನ್ನೋದು ಚರ್ಚೆ ವಿಚಾರ.


ಇನ್ನು ಅರ್ಜಿ ಹಾಕದಿದ್ದರೂ ಬಿಲ್ಲವ ಮುಂದಾಳು ಪದ್ಮರಾಜ್ ಆರ್. ಅವರಿಗೆ ಕಾಂಗ್ರೆಸ್ ಮಣೆ ಹಾಕುವ ಸಾಧ್ಯತೆಯೂ ಇದ್ದು, ದಕ್ಷಿಣದ ಕಣದಲ್ಲಿ ಪೈಪೋಟಿ ಹೆಚ್ಚಲಿದೆ.

ಮಂಗಳೂರು ದಕ್ಷಿಣ ಬಹುತೇಕ ಮಂಗಳೂರು ನಗರವನ್ನೇ ಪ್ರತಿನಿಧಿಸುವ ಕ್ಷೇತ್ರವಾಗಿದ್ದರಿಂದ ಹೆಚ್ಚು ಪೈಪೋಟಿ ನೀಡಬಲ್ಲ, ವಿದ್ಯಾವಂತ ಕ್ಯಾಂಡಿಡೇಟ್ ಗೆ ಕಾಂಗ್ರೆಸ್ ಆದ್ಯತೆ ನೀಡುವುದು ಅನಿವಾರ್ಯ. ಅದಾಗ್ಯೂ, ಸರಳ ಸಜ್ಜನಿಕೆಯ ಶಾಸಕ ವೇದವ್ಯಾಸ್ ಕಾಮತ್ ಕಟ್ಟಿ ಹಾಕಲು ಕಾಂಗ್ರೆಸ್ ರಣತಂತ್ರ ಬಹಳ ಮುಖ್ಯ.

 

ಪೊಲಿಟಿಕಲ್ ಬ್ಯೂರೋ, ಟಿಎನ್ಎಚ್

 

Ads on article

Advertise in articles 1

advertising articles 2

Advertise under the article