DANGER: ನೋಡೋಕೆ ಸುಂದರಿ; ಹನಿಟ್ರ್ಯಾಪ್ ನಲ್ಲಿ ಸಖತ್ ಕಿಲಾಡಿ!!
ರಾತ್ರಿ ಕುಡಿದು ಮೈಮರೆತು ಮಲಗಿದ್ದವನು. ಬೆಳಗ್ಗೆ ಎದ್ದಿದ್ದೇ ಕಿಲಾಡಿ ಜೋಡಿಯ ಬ್ಲ್ಯಾಕ್ಮೇಲ್ ವಾಯ್ಸ್ ಕೇಳಿದ ಮೇಲೆ. ಅದೊಂದು ವಿಡಿಯೋ ತೋರಿಸಿ, ಬೆಳ್ಳಂ ಬೆಳಗ್ಗೆನೇ ಲಕ್ಷ ಲಕ್ಷ ದುಡ್ಡಿಗಾಗಿ ಇಬ್ಬರು ಖತರ್ನಾಕ್ಗಳು ಬೇಡಿಕೆ ಇಟ್ಟಿದ್ರು. ಬಟ್ ಈಗ ವೈಯಾರಿ ಲಾಕ್ ಆಗ್ತಿದ್ದಂಗೆ, ಆಕೆ ಹೆಣೆದಿದ್ದ ಜೇನಿನ ಬಲೆಯ ಸ್ಫೋಟಕ ವಿಚಾರಗಳು ತೆರೆದುಕೊಳ್ತಿವೆ.
2019ರಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಮುನ್ನಲೆಗೆ ಬಂದ ನಮ್ರ ಖಾದಿರ್, ನೋಡ ನೋಡ್ತಿದ್ದಂಗೆ ದೆಹಲಿಯಲ್ಲಿ ಸಖತ್ ಫೇಮಸ್ ಆಗಿದ್ಲು. ರೀಲ್ಸ್ ಮೂಲಕ ಪಡ್ಡೆ ಹೈಕ್ಳ ಕನಸು ಕದ್ದು ಬಿಟ್ಟಿದ್ಲು. ಹೆಸರು, ಹಣ ಸಕ್ಸಸ್ ಎಲ್ಲವೂ ಇವಳನ್ನ ಒಟ್ಟೊಟ್ಟಿಗೆ ಹಿಂಬಾಲಿಸೋಕೆ ಶುರುವಾಗಿತ್ತು. ಒಂದು ಕಡೆ ಶೈನ್ ಆಗ್ತಿದ್ದಂಗೆ ಈಕೆಯ ಸುತ್ತಾ ಕುರುಡು ಕಾಂಚಾಣ ಕೂಡ ಕುಣಿಯೋಕೆ ಆರಂಭ ಮಾಡಿತ್ತು. ಜಾಹೀರಾತು ಜಗತ್ತು ಕೂಡ ಈಕೆಯನ್ನ ಕೈ ಬೀಸಿ ವೆಲ್ಕಮ್ ಮಾಡಿತ್ತು. ಆದ್ರೆ ದುಡ್ಡಿನ ದಾಹ ಇದ್ಯಲ್ವಾ..? ಅದು ಈಕೆಯನ್ನ ಮತ್ತಷ್ಟು ಕೆಟ್ಟ ಕೆಲಸಗಳನ್ನ ಮಾಡಿಸ್ತು ಅಂದ್ರೆ ತಪ್ಪಾಗಲ್ಲ ಬಿಡಿ. ಯಾಕಂದ್ರೆ 2019-20 ರ ಸಮಯದಲ್ಲಿ ಟಿಕ್ ಟಾಕ್ ಮೂಲಕವೇ ಸದ್ದು ಮಾಡಿದ್ದ ಈಕೆಯತ್ತ ದೊಡ್ಡ ದೊಡ್ಡ ಸ್ಟಾರ್ಗಳ ನೋಟ ಕೂಡ ಬೀರಿತ್ತು. ಇದನ್ನೇ ಬಂಡವಾಳನ್ನವಾಗಿ ಮಾಡ್ಕೊಂಡ ನಮ್ರ ಮಾಡಿದ್ದು ಮಾತ್ರ ಯಾರು ಕನಸು ಮನಸಲ್ಲೂ ಊಹಿಸಲು ಅಸಾಧ್ಯವಾದಂತಹ ಕೃತ್ಯಗಳನ್ನ.
ಉದ್ಯಮಿ ಕಂಟ್ರೋಲ್ ತಪ್ಪುವ ಮಟ್ಟಿಗೆ ಕುಡ್ಸಿದ ಐನಾತಿಗಳು
ಮೊನ್ನೆ ಜಾಹೀರಾತಿಗೆಂದು ಬಂದಿದ್ದ ಉದ್ಯಮಿಯನ್ನ ಕೂಡ ಇದೇ ರೀತಿಯಲ್ಲಿ ಬಲೆಗೆ ಬೀಳಿಸಿದ್ದಾಳೆ. ತನ್ನ ಬಳಿ ಬಂದವನ ಹಣವಂತ ಅನ್ನೋದು ಗೊತ್ತಾಗ್ತಿದ್ದಂಗೆ, ಸುಖದ ಮಾತುಗಳನ್ನಾಡಿ ನರಕ ದರ್ಶನ ಮಾಡ್ಸಿದ್ದಾಳೆ. ಹೇಗಾದ್ರೂ ಮಾಡಿ ಖೆಡ್ಡಾಗೆ ಕೆಡವಲೇಬೇಕೆಂದು, ನಮ್ರ ಹಾಗೂ ಈಕೆಯ ಗಂಡ ಸೇರಿ ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ತಮ್ಮ ಪ್ಲಾನ್ನಂತೆಯೇ ಉದ್ಯಮಿಯನ್ನ ಹೋಟೆಲ್ಗೆ ಕರೆಸಿಕೊಂಡಿದ್ದಾರೆ. ಆಮೇಲೇ ಉದ್ಯಮಿ ಕಂಟ್ರೋಲ್ ತಪ್ಪುವ ಮಟ್ಟಿಗೆ ಕುಡ್ಸಿದ್ದಾರೆ. ಮುಂದೆ ಪ್ಲಾನ್ನಂತೆಯೇ ಹೋಟೆಲ್ನ ರೂಂಗೆ ಕರೆದೊಯ್ದಿದ್ದಾರೆ. ಆದ್ರೆ ಅದಾಗ್ಲೆ ಕುಡಿದು ಚಿತ್ ಆಗಿದ್ದ ಬಿಸಿನೆಸ್ಮೆನ್ ಪಕ್ಕದಲ್ಲಿಯೇ ಈತನಿಗೆ ಗೊತ್ತಿಲ್ಲದಂತೆ ನಮ್ರ ಮಲಗಿದ್ಲಂತೆ. ಮುಂದೆ ನಮ್ರ ಹಾಗೂ ಬಿಸಿನೆಸ್ ಮೆನ್ ಇಬ್ಬರೂ ತುಂಬಾ ಕ್ಲೋಸ್ ಆಗಿರುವಂತೆ ವಿಡಿಯೋ ಚಿತ್ರಿಸಿದ್ದಾರೆ ಅನ್ನೋದು ಉದ್ಯಮಿ ಮಾಡ್ತಿರುವ ಆರೋಪ. ಮುಂದೆ ಇದೇ ವಿಡಿಯೋವನ್ನ ಮುಂದಿಟ್ಟುಕೊಂಡು ಬ್ಲಾಕ್ಮೇಲ್ ಶುರು ಮಾಡಿದ್ರಂತೆ.
80 ಲಕ್ಷ ಕೊಡುವಂತೆ ನಾರಿಯಿಂದ ಬ್ಲ್ಯಾಕ್ಮೇಲ್
ನಮ್ರ ಜೊತೆ ಉದ್ಯಮಿ ಕ್ಲೋಸ್ ಆಗಿರುವಂತೆ ಚಿತ್ರಿಸಿದ ವಿಡಿಯೋವನ್ನ ಮುಂದಿಟ್ಟುಕೊಂಡು ಬ್ಲಾಕ್ಮೇಲ್ ಶುರು ಮಾಡಿದ್ದಾಳೆ. ಆರಂಭದಲ್ಲಿ 10, ಆಮೇಲೆ 20, ಆಮೇಲೆ 40 ಲಕ್ಷ , ಹೀಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಡದಿದ್ರೆ ಈ ವಿಡಿಯೋವನ್ನ ವೈರಲ್ ಮಾಡೋದಾಗಿ ಈ ಖತರ್ನಾಕ್ ಜೋಡಿ ಬೆದರಿಕೆ ಹಾಕಿದೆ. ಎಷ್ಟಾದ್ರೂ ಬಿಸಿನೆಸ್ ಮೆನ್ ಅಲ್ವಾ..? ವಿಡಿಯೋ ಹೊರಗಡೆ ಲೀಕ್ ಆದ್ರೆ, ನನ್ ಮರ್ಯಾದೆ ಮಾತ್ರವಲ್ಲ ಬಿಸಿನೆಸ್ ಕೂಡ ಮಕಾಡೆ ಮಲಗುತ್ತೆ ಎಂದು ಭಯಗೊಂಡ ಉದ್ಯಮಿ, ಆರಂಭದಲ್ಲಿ ಇವರು ಕೇಳಿದಷ್ಟು ಹಣವನ್ನ ಹೋಗಿ ಇವರ ಪಾದಕ್ಕೆ ಸುರಿದಿದ್ದಾರೆ. ಆದ್ರೆ ಈ ಖತರ್ನಾಕ್ ದಂಪತಿಗೆ ದುಡ್ಡಿನ ಮೇಲೆ ಮತ್ತಷ್ಟು ದಾಹ ಹುಟ್ಟಿದೆ. ಮತ್ತೆ ಮತ್ತೆ ಬ್ಲ್ಯಾಕ್ಮೇಲ್ ಮುಂದುವರೆಸಿದ್ದಾರೆ.
ವಿಚಾರ ಹೊರಗಡೆ ಬಂದ್ರೆ ರೇಪ್ ಕೇಸ್ ಹಾಕೋ ಬೆದರಿಕೆ
ಆರಂಭದಲ್ಲಿ ಬ್ಲ್ಯಾಕ್ಮೇಲ್ ಮಾಡಿ ದುಡ್ಡು ಪಡೆದುಕೊಂಡ ಈ ದಂಪತಿ, ವಿಚಾರವನ್ನ ಹೊರಗಡೆ ಹೇಳದಂತೆ ಮತ್ತೆ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಈ ವಿಚಾರವನ್ನ ಹೊರಗಡೆ ಹೇಳಿದ್ರೆ ನಿನ್ ಮೇಲೆ ರೇಪ್ ಕೇಸ್ ಹಾಕೋದಾಗಿ ವಾರ್ನಿಂಗ್ ಮಾಡಿದ್ದಾರೆ. ರೇಪ್ ಕೇಸ್ ದಾಖಲಾದ್ರೆ ಇದ್ದ ಬದ್ದ ಮರ್ಯಾದೆ ಹೋಗುತ್ತೆ ಎಂದು ಅಂಜಿದ ಉದ್ಯಮಿ, ಆರಂಭದಲ್ಲಿ ಸುಮ್ಮನಾಗಿದ್ದ. ಬಟ್ ದುಡ್ಡಿಗಾಗಿ ಧಮ್ಕಿ ಹೆಚ್ಚಾಗ್ತಿದ್ದಂಗೆ ಕಾನೂನು ಸಮರ ಶುರು ಮಾಡಿದ್ದ.