ಪದೇ ಪದೇ ಅನೈತಿಕ ಪೊಲೀಸ್ ಗಿರಿ; ಕಣ್ಮುಚ್ಚಿ ಕೂತ ಪೊಲೀಸ್ | ಕರಾವಳಿಯಲ್ಲಿ ಮತ್ತೆ ಗಲಭೆಗೆ ಹುನ್ನಾರ!?
ಮಂಗಳೂರು: ಚುನಾವಣೆ ಹತ್ತಿರ ಬರ್ತಿದ್ದಂತೆ ಪ್ರತಿ ಬಾರಿಯೂ ಕರಾವಳಿ ಭಾಗದಲ್ಲಿ ಕೋಮು ಆಧಾರಿತ ದಾಳಿಗಳು ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್ ಅವಧಿಯಲ್ಲೂ ಹಿಂದೂ ಕಾರ್ಯಕರ್ತರ ಸಾಲು ಸಾಲು ಹತ್ಯೆಗಳು ಸಿದ್ದರಾಮಯ್ಯ ಸರ್ಕಾರವನ್ನು ಕೆಡವಿ ಹಾಕಿತ್ತು. ಅದರ ಬಿಸಿಯಲ್ಲೇ ಬಿಜೆಪಿ ಅಧಿಕಾರ ಹಿಡಿದಿತ್ತು. ಇದೀಗ ಮತ್ತೆ ಚುನಾವಣೆ ಹತ್ತಿರ ಬರುತ್ತಿದ್ದು, ಲವ್ ಜಿಹಾದ್ ವಿರುದ್ಧದ ಹೆಸರಿನಲ್ಲಿ ಮಂಗಳೂರು ನಗರದಲ್ಲೆ ಖುಲ್ಲಂ ಖುಲ್ಲ ಅನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದರೂ, ಪೊಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಫಾಝಿಲ್ ಹತ್ಯೆ ಪ್ರಕರಣ ಸಮರ್ಪಕ ತನಿಖೆ ನಡೆಯದಿರುವುದೇ ಇದೆಲ್ಲಕ್ಕೂ ಕಾರಣ ಅಂತಾ ಮುಸ್ಲಿಂ ಸಮುದಾಯದ ಹಿರಿಯರು ಅಭಿಪ್ರಾಯ ಪಟ್ಟರೆ, ಇನ್ನು ಕೆಲವು ಯುವಕರು ಇದು ಪಿಎಫ್ಐ ನಿಷೇಧದ ನಂತರ ಹಿಂದೂ ಸಂಘಟನೆಗಳು ನಡೆಸುತ್ತಿರುವ ಏಕಪಕ್ಷೀಯ ದಾಳಿ ಅಂತಾ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ಆರಂಭಿಸಿದ್ದಾರೆ.
ಸುಲ್ತಾನ್ ಗೋಲ್ಡ್ ಘಟನೆಯಿಂದ ಮತ್ತಷ್ಟು ಪ್ರಕ್ಷುಬ್ಧ!
ಮಂಗಳೂರು ನಗರದಲ್ಲಿ ಕೇವಲ ಒಂದೇ ತಿಂಗಳ ಅಂತರದಲ್ಲಿ ನಾಲ್ಕು ಘಟನೆಗಳು ನಡೆದಿವೆ. ಇಲ್ಲೆಲ್ಲ ಭಜರಂಗದಳದ ಕಾರ್ಯಕರ್ತರೇ ಪೊಲೀಸರಾಗಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ನಾಗುರಿ, ನಂತೂರು ಸರ್ಕಲ್, ಲಾಲ್ ಬಾಗ್ ಹಾಗೂ ಇದೀಗ ಸುಲ್ತಾನ್ ಗೋಲ್ಡ್ ಘಟನೆಗಳು ಮಂಗಳೂರು ನಗರದಲ್ಲೆ ನಡೆದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕೂತಿದ್ದು, ಮತ್ತೊಂದು ಕೋಮು ಗಲಭೆ ನಡೆಯುವ ಆತಂಕ ಕರಾವಳಿಗರದ್ದು..
ಲವ್ ಜಿಹಾದ್
ಬಗ್ಗೆ ಆಗಬೇಕಿದೆ ತನಿಖೆ!
ಹಿಂದೂ ಸಂಘಟನೆಗಳು ಈ ಹಿಂದಿನಿಂದಲೂ ಬಹುದೊಡ್ಡ ಆರೋಪವನ್ನ ಲವ್ ಜಿಹಾದ್ ಬಗ್ಗೆ ವ್ಯಕ್ತಪಡಿಸುತ್ತಲೇ ಬಂದಿದೆ. ಹಾಗಾಗಿ ಕಾನೂನಾತ್ಮಕವಾಗಿ ಇದನ್ನ ತನಿಖೆಗೆ ಒಳಪಡಿಸಿ, ನಿಜಕ್ಕೂ ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಪ್ರೀತಿಸುವ ನಾಟಕವಾಡಿ ಜಿಹಾದ್ ಬಲೆಗೆ ತಳ್ಳುತ್ತಿದ್ದಾರೆಯೇ ಅನ್ನೋದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗದ ಹೊರತು ಭಜರಂಗದಳದ ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಸಾಧ್ಯವಾಗದು ಅನ್ನೋ ಮಾತು ಕೇಳಿ ಬರ್ತಿದೆ.
ಕರಾವಳಿಯ ಶಾಸಕರೇ
ಪೋಷಕರು!
ಹಿಂದೂ ಸಂಘಟನೆಯ ಕಾರ್ಯಕರ್ತರು ನಡೆಸುವ ಅನೈತಿಕ ಪೊಲಿಸ್ ಗಿರಿಗೆ ಸ್ಥಳೀಯ ಶಾಸಕರದ್ಧೇ ಶ್ರೀರಕ್ಷೆ ಅನ್ನೋದು ಸ್ಪಷ್ಟ. ಈ ಹಿಂದೆ ಸುರತ್ಕಲ್, ಮೂಡಬಿದ್ರಿ ವ್ಯಾಪ್ತಿಗಳಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳಿಗೂ ಅಲ್ಲಿನ ಶಾಸಕರೇ ಬೆಂಗಾವಲಾಗಿ ನಿಂತಿದ್ದರು. ಈಗಂತೂ ಎಲೆಕ್ಷನ್ ಹತ್ತಿರ ಬರುತ್ತಿದ್ದು, ಎಳೆಯ ಪ್ರಾಯದ ಯುವಕರನ್ನು ಗುರಾಣಿಯಾಗಿಸಿ ಭಜರಂಗದಳ ದಾಳಿ ನಡೆಸಿದರೆ, ಬಿಜೆಪಿ ಶಾಸಕರು ಇದರ ಫಸಲು ತೆಗೆಯಲು ಮುಂದಾಗುತ್ತಿದ್ದಾರೆ. ಒಂದು ವೇಳೆ ಈ ಹಂತದಲ್ಲಿ ಕೋಮು ಗಲಭೆ ನಡೆದರೆ ಅಭಿವೃದ್ಧಿ ವಿಚಾರಗಳೆಲ್ಲ ಬದಿಗೆ ಸರಿದು ಮತ್ತೆ ಧರ್ಮ ರಾಜಕೀಯ ಮೇಳೈಸುವ ಖುಷಿಯಲ್ಲಿ ಬಿಜೆಪಿ ನಾಯಕರಿದ್ದಾರೆ.
ಶಾಂತಿ ಪ್ರಿಯರಲ್ಲಿ
ಆತಂಕ!
ಸುಲ್ತಾನ್ ಗೋಲ್ಡ್ ಘಟನೆ ನಂತರ ಜನಸಾಮಾನ್ಯರು ಇನ್ಯಾವಾಗ ಮತ್ತೆ ಗಲಭೆ ಸಂಭವಿಸುತ್ತೋ ಅನ್ನೋ ಆತಂಕದಲ್ಲಿ ಬೇಗನೆ ಮನೆ ಸೇರುತ್ತಿದ್ದಾರೆ ಅಂತಾ ನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಅಂತಿಮವಾಗಿ ವ್ಯಾಪಾರ ವಹಿವಾಟುಗಳು ಭಣಗುಡುತ್ತಿವೆ. ಹೀಗಾದ್ದಲ್ಲಿ ಇನ್ಮುಂದೆ ಕಂಪೆನಿಗಳು ಮಂಗಳೂರಿನತ್ತ ಮುಖ ಮಾಡುವ ಸಾಧ್ಯತೆಯೂ ಕಡಿಮೆ ಅಂತಾ ಮಂಗಳೂರಿನ ಸಾಮಾಜಿಕ ಕಾರ್ಯಕರ್ತರೋರ್ವರು ಅಭಿಪ್ರಾಯಪಡುತ್ತಾರೆ.
ಮುಸ್ಲಿಂ ಒಕ್ಕೂಟದ
ಖಂಡನೆ
ಸುಲ್ತಾನ್ ಗೋಲ್ಡ್ ಘಟನೆ ನಡೆದ ಮುಸ್ಲಿಂ ಸಮುದಾಯವು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದು ಪರಿಸ್ಥಿತಿ ಮತ್ತಷ್ಟು ಜಟಿಲವಾಗುವ ಸಾಧ್ಯತೆ ಇದೆ. ಜ್ಯುವೆಲ್ಲರ್ಸ್ ಅಸೋಸಿಯೇಶನ್ ಕ್ರಮಕ್ಕಾಗಿ ಒತ್ಥಾಯಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯವು ಸ್ವರ್ಣ ಮಳೆಗೆಗಳನ್ನು ಬಹಿಷ್ಕರಿಸುವಂತೆ ಆಂದೋಲನ ನಡೆಸಲಾಗುವುದು ಎಂದು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂತಹ ದಾಳಿ ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ. ಕೂಡಲೇ ಕರ್ನಾಟಕ ಗೋಲ್ಡ್ ಕಂಟ್ರೋಲ್ ಬೋರ್ಡ್ ಮಧ್ಯ ಪ್ರವೇಶಿಸಿ ಸುಲ್ತಾನ್ ಗೋಲ್ಡ್ ಪ್ರಕರಣದ ಸಂಬಂಧ ತನಿಖೆಗೆ ಒತ್ತಾಯಿಸುವಂತೆ ಆಗ್ರಹಿಸಿದ್ದಾರೆ.
‘ಮಯ್ಯತ್‘ ಮಾಡ್ತೀನಿ
ಎಂದವರಿಂದಲೇ ಹಲ್ಲೆ!
ಮಂಗಳೂರು ನಗರದ ಕಂಕನಾಡಿಯ ಸುಲ್ತಾನ್ ಗೋಲ್ಡ್ ನಲ್ಲಿ ಹಿಂದೂ ಯುವತಿ
ಜೊತೆಗಿದ್ದ ಮುಸ್ಲಿಂ ಯುವಕನಿಗೆ ಮಳಿಗೆ ಒಳಗಡೆ ನುಗ್ಗಿ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಈ
ಸಂದರ್ಭ ಇತ್ತೀಚೆಗಷ್ಟೇ ‘‘ಲವ್ ಜಿಹಾದ್ ಮಾಡಿದರೆ ರಕ್ತಪಾತ ಮಾಡ್ತೀವಿ‘‘ ಅಂತಾ ಎಚ್ಚರಿಕೆ ಕೊಟ್ಟ
ಭಜರಂಗದಳ ಸಂಚಾಲಕ ಪುನೀತ್ ಅತ್ತಾವರ ಕೂಡ ಅಲ್ಲೇ ಇದ್ದು, ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದು
ಮುಸ್ಲಿಂ ಸಮುದಾಯವನ್ನು ಕೆರಳಿಸಿದ್ದು, ಕರಾವಳಿಯ ಶಾಂತಿಗೆ ಕೊಳ್ಳಿಯಿಡಲು ಇದೆಲ್ಲವೂ ಕಾರಣವಾಗುವ
ಸಾಧ್ಯತೆ ಇದೆ ಅನ್ನೋ ಚರ್ಚೆ ನಡೆಯುತ್ತಿದೆ.