-->
Mangaluru North: ಹಿಂದುತ್ವಕ್ಕಷ್ಟೇ ಓಕೆ; ಅಭಿವೃದ್ಧಿಗಿಲ್ಲ ಆದ್ಯತೆ: ಭರತ್ ಶೆಟ್ಟಿ ಗೆಲುವು ಈ ಬಾರಿ ಸುಲಭವಲ್ಲ!

Mangaluru North: ಹಿಂದುತ್ವಕ್ಕಷ್ಟೇ ಓಕೆ; ಅಭಿವೃದ್ಧಿಗಿಲ್ಲ ಆದ್ಯತೆ: ಭರತ್ ಶೆಟ್ಟಿ ಗೆಲುವು ಈ ಬಾರಿ ಸುಲಭವಲ್ಲ!

 


ಮಂಗಳೂರು: ಹಿಂದುತ್ವ, ಮತ ಧ್ರುವೀಕರಣ ಹೊರತು ಅಭಿವೃದ್ಧಿಗೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿಗೆ ಆದ್ಯತೆ ನೀಡಿಲ್ಲ ಅನ್ನೋದು ಮೇಲ್ನೋಟಕ್ಕೆ ಒಂದೇ ವಾಕ್ಯದಲ್ಲಿ ಹೇಳಬಹುದಾದ ವಿಶ್ಲೇಷಣೆ. ಸುರತ್ಕಲ್ ಜಂಕ್ಷನ್ ನಲ್ಲೇ ಇರುವ ನೆನೆಗುದಿಗೆ ಬಿದ್ದ ಮಾರ್ಕೆಟ್ ಕಟ್ಟಡ ಇದುವರೆಗೂ ಯಥಾಸ್ಥಿತಿಯಲ್ಲಿರೋದೆ ಭರತ್ ಶೆಟ್ಟಿ ಕಾರ್ಯ ವೈಖರಿಗೆ ಕೈಗನ್ನಡಿಯಾಗಿದೆ. ಪ್ರತಿ ಬಾರಿಯೂ ಪ್ರೆಸ್ ಮೀಟ್ ಕರೆದಾಗ ಮಾರ್ಕೆಟ್ ಕಟ್ಟಡ ಇನ್ನೇನು ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಲಿದ್ದು, ಪೂರ್ಣವಾಗಲಿದೆ ಅನ್ನೋ ಭರವಸೆ ಭರವಸೆಯಾಗಿಯೇ ಉಳಿದಿದೆ. ಹೀಗಾಗಿ ಈ ಬಾರಿ ಸುರತ್ಕಲ್ ಕ್ಷೇತ್ರದಲ್ಲಿ ಡಾ. ಭರತ್ ಶೆಟ್ಟಿ ಗೆಲುವು ಅಷ್ಟು ಸುಲಭವಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ.

ಬಿಲ್ಲವರ ಮೇಲೆ ನಿಂತಿದೆ ಶಾಸಕರ ಗೆಲುವು

ಸುರತ್ಕಲ್ ಕ್ಷೇತ್ರದ ಮಟ್ಟಿಗೆ ಬಿಲ್ಲವರು ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವು ನಿರ್ಣಾಯಕ ಮತದಾರರು. ಹಿಂದೂ, ಮುಸ್ಲಿಂ ಧ್ರುವೀಕರಣ ಮಾಡುವಲ್ಲಿ ಭರತ್ ಶೆಟ್ಟಿ ಬಹುತೇಕ ಸಫಲರಾಗಿದ್ದಾರೆ. ಆದರೆ, ಇನ್ನೊಂದೆಡೆ ಬಿಲ್ಲವರನ್ನು ತುಳಿಯುತ್ತಿದ್ದಾರೆ ಅನ್ನೋ ಆರೋಪವೂ ಭರತ್ ಶೆಟ್ಟಿ ಮೇಲಿದೆ. ಅಲ್ಲದೇ, ಇದೇ ಕ್ಷೇತ್ರದಲ್ಲಿ ಬರುವ ಸತ್ಯಜಿತ್ ಸುರತ್ಕಲ್ ಬಿಲ್ಲವ ಯುವಕರನ್ನು ಸಂಘಟಿಸುತ್ತಿದ್ದು, ಬಿಲ್ಲವ ಯುವಕರೇನಾದರೂ ಪಕ್ಷ ಮರೆತು, ಜಾತಿ ಹಿಂದೆ ಹೋದರೆ ಈ ಬಾರಿ ಭರತ್ ಶೆಟ್ಟಿ ಗೆಲುವಿನ ಪಯಣ ಕಷ್ಟಕರವಾಗಲಿದೆ. ಯಾಕೆಂದರೆ, ಉಳಿದಂತೆ ನಿರ್ಣಾಯಕ ಮತದಾರರೆನಿಸಿಕೊಂಡ ಅಲ್ಪಸಂಖ್ಯಾತ ಸಮುದಾಯದ ಬೆರಳೆಣಿಕೆಯ ಮತವೂ ಭರತ್ ಶೆಟ್ಟಿಗೆ ಸಿಗದು. ಫಾಝಿಲ್ ಹತ್ಯೆ ಬಳಿಕ ಭರತ್ ಶೆಟ್ಟಿ ಮೇಲಿನ ಕೋಪ ತುಸು ಜಾಸ್ತಿಯೇ ಆಗಿದೆ.

ಅನೈತಿಕ ಪೊಲೀಸ್ ಗಿರಿ, ದ್ವೇಷ ಭಾವನೆಗೆ ಆದ್ಯತೆ!?

ಬಿಜೆಪಿ ಪಕ್ಷದ ಹಾಲಿ ಶಾಸಕ ಡಾ. ಭರತ್ ಶೆಟ್ಟಿ ಕಳೆದ ಮೊಯ್ದಿನ್ ಬಾವಾ ಅವಧಿಗೆ ಹೋಲಿಸಿದಲ್ಲಿ ಅದರ ಅರ್ಧದಷ್ಟು ಅಭಿವೃದ್ಧಿ ಕಾಮಗಾರಿ ನಡೆಸಿಲ್ಲ ಅನ್ನೋ ಮಾತಿದೆ. ಮಾತ್ರವಲ್ಲದೇ, ಮೊಯ್ದಿನ್ ಬಾವಾ ಕೊರೊನಾ, ನೆರೆ ಸಮಯದಲ್ಲಿ ನಡೆಸಿದ ಓಡಾಟ ಅವರ ಬಗ್ಗೆ ಜನರಿಗೆ ಹೆಚ್ಚು ಒಲವು ಮೂಡಿಸಿದೆ. ಆದರೆ, ಕಾಂಗ್ರೆಸ್ ನಿಂದ ಬಾವಾಗೆ ಟಿಕೆಟ್ ಕನ್ಫರ್ಮ್ ಇಲ್ಲದೇ ಇರೋದು ಕೂಡಾ ‘ಕೈ‘ ಗೆಲುವು ಕಗ್ಗಂಟಿನಲ್ಲಿ ಸಿಲುಕಿದೆ.

ಇನ್ನೊಂದೆಡೆ ಹಿಂದುತ್ವ ಕಾರ್ಯಕರ್ತರ ಅನೈತಿಕ ಪೊಲೀಸ್ ಗಿರಿ, ದ್ವೇಷ ಬಿತ್ತುವ ಕಾರ್ಯಕ್ರಮಗಳಿಗೆ ಭರತ್ ಶೆಟ್ಟಿ ಬೆಂಬಲವಿದೆ ಅನ್ನೋ ಆರೋಪವೂ ಇದೆ.

ಕೈ ಹಿಡಿಯದ ಸಾವರ್ಕರ್, ಟೋಲ್ ಗೇಟ್ ನಲ್ಲೂ ಇಲ್ಲ ಕ್ರೆಡಿಟ್!

ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ವೃತ್ತ, ಪಾಲಿಕೆಯ ಸುರತ್ಕಲ್ ಕಚೇರಿಯಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ಇದ್ಯಾವುದೂ ನಿರೀಕ್ಷಿತ ಪ್ರಮಾಣದಲ್ಲಿ ಬಿಜೆಪಿ ಕೈ ಹಿಡಿದಿಲ್ಲ. ಜನರು ಇದನ್ನೆಲ್ಲ ರಾಜಕೀಯ ನಾಟಕವೆಂದೇ ಪರಿಗಣಿಸಿದ್ದಾರೆ. ಇನ್ನು ಸದಾ ಸೂಕ್ಷ್ಮ ವಿಚಾರ ಬಂದಾಗ ತುಪ್ಪ ಸುರಿಯುವ ಸಾಧ್ಯತೆ ಇದ್ದ ಎಸ್ಡಿಪಿಐ ಕೂಡಾ ನಿರೀಕ್ಷಿತ ಮಟ್ಟದಲ್ಲಿ ವಿರೋಧಿಸದೇ ಇರುವುದು ಬಿಜೆಪಿ ಪಾಲಿಗೆ ಹಿನ್ನಡೆಯಾಗಿದೆ. ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ಹೆಸರಿಟ್ಟ ಮಾತ್ರಕ್ಕೆ ಮುಸ್ಲಿಂ ಸಮುದಾಯ ಆಕ್ರೋಶಗೊಳ್ಳುತ್ತದೆ ಅನ್ನೋ ನಿರೀಕ್ಷೆಯೂ ಹುಸಿಯಾಗಿದೆ. ಬದಲಿಗೆ, ಮುಸ್ಲಿಂ ಐಕ್ಯತಾ ವೇದಿಕೆಯೇ ಸುರತ್ಕಲ್ ಜಂಕ್ಷನ್ ಗೆ ‘ಕೋಟಿ ಚೆನ್ನಯ್ಯ‘ ಹೆಸರಿಡುವಂತೆ ಮಾಡಿದ ಒತ್ತಾಯವೂ ಕೌಂಟರ್ ಅಟ್ಯಾಕ್ ನಂತಿತ್ತು. ಇನ್ನು, ಸುರತ್ಕಲ್ ಟೋಲ್ ಗೇಟ್ ತೆರವಂತೂ ಜನಸಾಮಾನ್ಯರ ಗೆಲುವು ಅನ್ನೋದು ಸುರತ್ಕಲ್ ಭಾಗದ ಪ್ರತಿಯೊಬ್ಬನಿಗೂ ತಿಳಿದ ಸತ್ಯ.


ಸತ್ಯಣ್ಣನಿಗೆ ಕಾಂಗ್ರೆಸ್ ಟಿಕೆಟ್ ಸಾಧ್ಯತೆ!

ಈ ನಡುವೆ ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್ ಅವರನ್ನು ಕಾಂಗ್ರೆಸ್ ವರಿಷ್ಠರು ಸಂಪರ್ಕಿಸಿದ್ದಾಗಿ ಮಾತುಗಳು ಕೇಳಿ ಬರ್ತಿವೆ. ಸತ್ಯಜಿತ್ ಸುರತ್ಕಲ್ ಹಿಂದಿರುವ ಜನ ಬೆಂಬಲವನ್ನು ಕಾಂಗ್ರೆಸ್ ತಮ್ಮ ಜೋಳಿಗೆ ತುಂಬಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ‘ದಿ ನ್ಯೂಸ್ ಅವರ್‘ ವಿಶೇಷ ಸಂದರ್ಶನದಲ್ಲಿ ಸತ್ಯಜಿತ್ ಸುರತ್ಕಲ್ ಈ ವಿಚಾರವನ್ನು ತಳ್ಳಿ ಹಾಕಿದ್ದರು.    

ಒಟ್ಟಿನಲ್ಲಿ ಡಾ. ಭರತ್ ಶೆಟ್ಟಿ ಗೆಲುವು ಪಡೆಯಬೇಕಿದ್ದರೆ ತುಸು ಜಾಸ್ತಿಯೇ ವರ್ಕೌಟ್ ಮಾಡಬೇಕಿದೆ. 2018ರ ಚುನಾವಣೆ ವೇಳೆಗೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿದ್ದ ಹಿಂದೂ ಕಾರ್ಯಕರ್ತರ ಹತ್ಯೆ, ಅದರಲ್ಲೂ ಸುರತ್ಕಲ್ ಭಾಗದಲ್ಲಿ ನಡೆದ ದೀಪಕ್ ರಾವ್ ಹತ್ಯೆ, ಕಾಂಗ್ರೆಸ್ ಸರ್ಕಾರದ ವಿರುದ್ಧವಿದ್ದ ಹಿಂದೂ ವಿರೋಧಿ ಅಲೆ ಬಿಜೆಪಿಯ ಹಲವು ಅಭ್ಯರ್ಥಿಗಳನ್ನು ಗೆಲ್ಲಿಸಿತ್ತು. ಆದರೆ, ಈ ಬಾರಿ ಡಬಲ್ ಇಂಜಿನ್ ಸರ್ಕಾರವಿದ್ದರೂ ಅಭಿವೃದ್ಧಿ ಕುಸಿತ, ಕೈಗಾರಿಕೆಗಳಲ್ಲಿ ತುಳುವರಿಗೆ ಸಿಗದ ಆದ್ಯತೆ, ಬೆಲೆ ಏರಿಕೆ, ನಿರುದ್ಯೋಗ ಇದೆಲ್ಲವನ್ನೂ ಮೆಟ್ಟಿ ನಿಂತು ಭರತ್ ಶೆಟ್ಟಿ ಗೆಲುವು ಪಡೆಯುತ್ತಾರ ಅನ್ನೋ ಪ್ರಶ್ನೆಗೆ ಮತದಾರರ ಪ್ರಭು ಕೆಲವೇ ತಿಂಗಳಲ್ಲಿ ಉತ್ತರಿಸಲಿದ್ದಾನೆ.

ಪೊಲಿಟಿಕಲ್ ಬ್ಯೂರೋ, TNH

Ads on article

Advertise in articles 1

advertising articles 2

Advertise under the article