ಪುತ್ತೂರು: ವಿಧಾನಸಭೆ ಚುನಾವಣೆಗೆ ಜೈಲಿನಿಂದಲೇ ಎಸ್ಡಿಪಿಐ ಅಭ್ಯರ್ಥಿಗಳ ಸ್ಪರ್ಧೆ!
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ
ಕ್ಷೇತ್ರ ಎಸ್ಡಿಪಿಐ ತಕ್ಕ ಮಟ್ಟಿನ ಪ್ರಾಬಲ್ಯ ತೋರಿಸಬಲ್ಲಂತಹ ಕ್ಷೇತ್ರ. ಆದರೆ ಪ್ರವೀಣ್ ನೆಟ್ಟಾರ್
ಹತ್ಯೆ ಬಳಿಕ ಆದ ಬೆಳವಣಿಗೆ ಪಕ್ಷದ ಚಟುವಟಿಕೆಗೆ ಹಿನ್ನಡೆಯಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ. ಪ್ರವೀಣ್
ಹತ್ಯೆಯಿಂದಾಗಿ ಸಾಮಾನ್ಯ ಮುಸ್ಲಿಮರು ಯಾರೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ
ಕಡೆಗೆ ತಲೆ ಹಾಕುತ್ತಿಲ್ಲ ಅನ್ನೋ ಚರ್ಚೆಯೂ ಇದೆ. ಅದರಲ್ಲೂ ನೆಟ್ಟಾರ್ ಹತ್ಯೆ ಕೇಸ್ ನಲ್ಲಿ ಕೊನೆಯದಾಗಿ
ಬಂಧಿತರಾದ ಬೆಳ್ಳಾರೆ ಸಹೋದರರಿಂದಾಗಿ ಪಕ್ಷದ ಚಟುವಟಿಕೆಗೆ ಭಾರೀ ದೊಡ್ಡ ಪೆಟ್ಟು ಬಿದ್ದಿದೆ. ಸಂಘಟನಾ
ಚತುರರಾಗಿದ್ದ ಬೆಳ್ಳಾರೆಯ ಶಾಫಿ ಬೆಳ್ಳಾರೆ ಹಾಗೂ ಇಕ್ಬಾಲ್ ಬೆಳ್ಳಾರೆ ಸದ್ಯ ವಿಚಾರಣಾಧೀನ ಖೈದಿಯಾಗಿ
ಬೆಂಗಳೂರು ಜೈಲಿನಲ್ಲಿ ಇರುವುದರಿಂದ ಪಕ್ಷದ ಚಟುವಟಿಕೆ ಅಷ್ಟಾಗಿ ನಡೆಯುತ್ತಿಲ್ಲ ಅನ್ನೋದಕ್ಕೆ ಪಕ್ಷದ
ನೀರಸ ಚಟುವಟಿಕೆ ಸಾಕ್ಷಿ ಹೇಳುತ್ತಿದೆ. ಇನ್ನೊಂದು ಕಡೆಯಲ್ಲಿ ಎಸ್ಡಿಪಿಐ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಷ್ಟೇ
ಸ್ಪರ್ಧಿಸಿ ವಿಧಾನಸಭೆಗೆ ಎಂಟ್ರಿ ಕೊಡುವ ಉಮೇದಿನಲ್ಲಿದೆ ಎನ್ನಲಾಗುತ್ತಿದೆ.
ಜೈಲಿನಿಂದಲೇ ಸ್ಪರ್ಧೆ!
ಹೌದು, ಸದ್ಯ
ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವವರು ಯಾರು ಅನ್ನೋ ವಿಚಾರ ಸಂಬಂಧ ಯಾವ ಅಭ್ಯರ್ಥಿಯ
ಘೋಷಣೆ ಇನ್ನೂ ಆಗಿಲ್ಲ. ಆದರೆ, ಮೂಲಗಳ ಪ್ರಕಾರ ಎಸ್ಡಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ
ಅಥವಾ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ ಹೆಸರು ಫೈನಲ್ ಆಗುವ ಹಂತದಲ್ಲಿತ್ತು
ಎನ್ನಲಾಗಿದೆ. ಆದರೆ, ಈ ನಡುವೆ ಅವರಿಬ್ಬರ ಬಂಧನದಿಂದಾಗಿ ಪುತ್ತೂರು ಸ್ಪರ್ಧೆ ಕಗ್ಗಂಟಾಗಿ ಉಳಿದಿತ್ತು.
ಆದರೆ, ಎಸ್ಡಿಪಿಐ ಪಕ್ಷದ ಕಾರ್ಯಕರ್ತರು ಮಾತ್ರ ಚುನಾವಣೆಗೆ ತಾವು ಸಿದ್ಧರಾಗಿರುವುದಾಗಿ ತಮ್ಮ ನಾಯಕರಿಗೆ
ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಶಾಫಿ ಬೆಳ್ಳಾರೆ ಅಥವಾ ಇಕ್ಬಾಲ್ ಬೆಳ್ಳಾರೆ ಇವರಿಬ್ಬರಲ್ಲಿ
ಯಾರಾದರೊಬ್ಬರನ್ನು ಟಿಕೆಟ್ ನೀಡಿ ಕಣಕ್ಕೆ ಇಳಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಸದ್ಯ ಪ್ರವೀಣ್
ನೆಟ್ಟಾರ್ ಹತ್ಯೆ ಸಂಬಂಧ ಈ ಇಬ್ಬರು ನಾಯಕರನ್ನು ಬಂಧಿಸಲಾಗಿದ್ದು, ಈ ಇಬ್ಬರು ಎಸ್ಡಿಪಿಐ ಮುಖಂಡರ ಮೇಲೆ ಯುಎಪಿಎ ಕಾಯ್ದೆ ವಿಧಿಸಿರುವುದರಿಂದ
ಸುಲಭವಾಗಿ ಜೈಲಿನಿಂದ ಹೊರ ಬರಲಾರರು ಅನ್ನೋದು ಎಸ್ಡಿಪಿಐ ನಾಯಕರಿಗೂ ತಿಳಿದಿದೆ. ಕನಿಷ್ಟ ಪಕ್ಷ ಚುನಾವಣೆಗೂ
ಮುನ್ನ ರಿಲೀಸ್ ಆಗುವ ಸಾಧ್ಯತೆ ಬಗ್ಗೆಯೂ ಏನನ್ನೂ ಹೇಳಲಾಗದು. ಒಂದು ವೇಳೆ ಜಾಮೀನು ದೊರೆತಲ್ಲಿ, ಜಾಮೀನು
ಪಡೆದಂತಹ ವ್ಯಕ್ತಿಗೆ ಪಕ್ಷವು ಟಿಕೆಟ್ ನೀಡುವ ಸಾಧ್ಯತೆ ಇದೆ. ಅದಿಲ್ಲದೇ ಹೋದರೆ, ಜೈಲಿನಿಂದಲೇ ನಾಮಪತ್ರ
ಸಲ್ಲಿಕೆಗೆ ಅವಕಾಶ ಮಾಡಿಕೊಡುವುದಾಗಿ ಪಕ್ಷದ ಸ್ಥಳೀಯ ಮಟ್ಟದ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಅನ್ನೋದಾಗಿ ಮೂಲಗಳು ತಿಳಿಸಿವೆ.
ಪ್ರಜಾಪ್ರಭುತ್ವದ
ಚುನಾವಣಾ ಕಣದಲ್ಲಿ ಜೈಲಿನಿಂದಲೂ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸುವ
ಅವಕಾಶವೂ ಇರುತ್ತದೆ. ಆದರೆ, ಆರೋಪಿತನ ಆರೋಪ ಸಾಬೀತಾಗಿ ನ್ಯಾಯಾಲಯದಿಂದ 2 ವರ್ಷಗಳಿಗಿಂತ ಹೆಚ್ಚು
ಕಾಲ ಶಿಕ್ಷೆಗೆ ಗುರಿಯಾದಲ್ಲಿ ಆತನ ಶಾಸಕ ಸ್ಥಾನ ತಕ್ಷಣದಿಂದಲೇ ಅನರ್ಹಗೊಳ್ಳುತ್ತದೆ. ಇತ್ತೀಚೆಗೆ
ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕ, ವಿವಾದಾತ್ಮಕ ನಾಯಕ ಅಜಂ ಖಾನ್ ಕೂಡಾ 3 ವರ್ಷಗಳ ಕಾಲ ಶಿಕ್ಷೆಗೆ
ಗುರಿಯಾದ ಹಿನ್ನೆಲೆ ಅನರ್ಹಗೊಂಡಿದ್ದರು.
ಒಟ್ಟಿನಲ್ಲಿ
ಪುತ್ತೂರು ಕ್ಷೇತ್ರದಲ್ಲಿ ಎಸ್ಡಿಪಿಐ ಸ್ಪರ್ಧೆ ಕುತೂಹಲ ಹುಟ್ಟು ಹಾಕಿದೆ. ಸದ್ಯ ಆ ಪಕ್ಷದ ಚಟುವಟಿಕೆ
ಎಲ್ಲವೂ ನಿಗೂಢವಾಗಿಯೇ ಉಳಿದಿದೆ. ಜೈಲಿನಲ್ಲಿರುವ ಮುಖಂಡರಿಗೆ ಪಕ್ಷ ಮಣೆ ಹಾಕುತ್ತಾ ಅನ್ನೋದಕ್ಕೆ
ಎಸ್ಡಿಪಿಐ ನಾಯಕರೇ ಉತ್ತರಿಸಬೇಕಿದೆ.