ಪುತ್ತೂರು: ‘ಕೈ‘ ಟಿಕೆಟ್ ಪಡೆಯಲು ಬಿಜೆಪಿಯ ಅಶೋಕ್ ರೈ ಯತ್ನ; ಕಾವು ನೇತೃತ್ವದಲ್ಲಿ ಮೂಲ ಕಾಂಗ್ರೆಸ್ಸಿಗರ ಸಭೆ!
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ
ಬರೋಬ್ಬರಿ 13 ಮಂದಿ ಅರ್ಜಿ ಸಲ್ಲಿಸಿದ್ಧಾರೆ. ಅದರಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಾವು ಹೇಮನಾಥ
ಶೆಟ್ಟಿ, ದಿವ್ಯಪ್ರಭ ಗೌಡ, ಭರತ್ ಮುಂಡೋಡಿ, ಮಮತಾ ಗಟ್ಟಿ ಮುಂತಾದ ಘಟಾನುಘಟಿ ನಾಯಕರಿದ್ಧಾರೆ. ಆದರೆ
ಈ ಮಧ್ಯೆ ಟಿಕೆಟ್ ಗಾಗಿ ಅರ್ಜಿಯೇ ಹಾಕದ ಉದ್ಯಮಿ, ಆರ್ ಎಸ್ ಎಸ್ ಹಾಗೂ ಹಿಂದುತ್ವ ಸಂಘಟನೆಗಳ ಸದಸ್ಯ
ಮತ್ತು ಪೋಷಕ, ಬಿಜೆಪಿಯ ಅಶೋಕ್ ರೈ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗಲಿದೆ ಎಂಬ ಮಾಹಿತಿ ಬಹಿರಂಗವಾಗಿದ್ದು,
ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ
ಕಾರ್ಯಕರ್ತರ ಸಭೆಯೊಂದು ಅಶ್ಮಿ ಕಂಫರ್ಟ್ ಸಭಾಂಗಣದಲ್ಲಿ ನಡೆದಿದೆ. ಸುದೀರ್ಘ ಸಭೆಯಲ್ಲಿ ಯಾವುದೇ ಕಾರಣಕ್ಕೂ
ಜಾತ್ಯತೀತ ಸಿದ್ಧಾಂತ ಒಪ್ಪಿಕೊಳ್ಳದ ಅಶೋಕ್ ರೈ ಅವರಿಗೆ ಟಿಕೆಟ್ ನೀಡಬಾರದೆನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಈ
ಹಿಂದೆ ಬಿಜೆಪಿಯಿಂದ ಬಂದ ಶಕುಂತಳಾ ಶೆಟ್ಟಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಗೆಲ್ಲಿಸಿದರೂ ಅವರಿಗೆ
ಬಿಜೆಪಿಯಲ್ಲಿನ ತನ್ನ ವಿಚಾರಗಳಿಂದ ಹೊರ ಬರಲು ಸಾಧ್ಯವಾಗದ ಕಾರಣ ಅವರಿಂದ ಜಾತ್ಯಾತೀತ ಸಿದ್ದಾಂತದ
ಪಕ್ಷಕ್ಕೆ ತೊಂದರೆಯಾಗಿತ್ತು. ಇದೀಗ ಮತ್ತೊಮ್ಮೆ ಬಿಜೆಪಿ ಪಕ್ಷದಿಂದ ಅಶೋಕ್ ಕುಮಾರ್ ರೈ ಅವರಿಗೆ ಟಿಕೇಟ್
ನೀಡಿದಲ್ಲಿ ಪಕ್ಷವನ್ನು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಸಿದಂತಾಗುತ್ತದೆ. ಜಾತ್ಯಾತೀತ ಸಿದ್ದಾಂತ
ಹೊಂದಿರುವ ವ್ಯಕ್ತಿಗಳನ್ನು ಪುತ್ತೂರಿನ ಕಾಂಗ್ರೆಸ್
ಶಾಸಕ ಆಭ್ಯರ್ಥಿಯಾಗಿ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
‘‘ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ
ಈಗಾಗಲೇ 13 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಓರ್ವರಿಗೆ ಅವಕಾಶ ಕಲ್ಪಿಸದೆ ಇತರರಿಗೆ ನೀಡುವುದು
ಸರಿಯಲ್ಲ. ಅದರಲ್ಲಿಯೂ ಅರ್ಜಿಯನ್ನೇ ನೀಡದ ಬಿಜೆಪಿಯ ಅಶೋಕ್ ಕುಮಾರ್ ರೈ ಅವರಿಗೆ ಅವಕಾಶ ನೀಡುವುದರಿಂದ
ಪಕ್ಷದ ಸಿದ್ದಾಂತ ಮತ್ತು ವರ್ಚಸ್ಸಿಗೆ ಧಕ್ಕೆಯಾಗಲಿದೆ. ಅಶೋಕ್ ರೈ ಅವರನ್ನು ಕಾಂಗ್ರೆಸ್ ಗೆಲ್ಲಿಸಿದರೆ
ಬಿಜೆಪಿಯ ಪ್ರಥಮ ಅಪರೇಶನ್‍ಗೆ ಅವರು ಗುರಿಯಾಗಲಿದ್ದಾರೆ. ಬಿಜೆಪಿಯ ಅವಶ್ಯಕತೆಗೆ ಅವರು ಅದನ್ನು ಸೇರ್ಪಡೆಯಾಗುವುದರಲ್ಲಿ
ಯಾವುದೇ ಸಂಶಯಗಳಿಲ್ಲ. ಈ ಅಪಾಯಗಳ ಬಗ್ಗೆ ಈಗಾಗಲೇ ಪಕ್ಷದ ಮುಖಂಡರಾದ ರಮಾನಾಥ ರೈ ಮತ್ತು ವಿನಯಕುಮಾರ್
ಸೊರಕೆ ಅವರಿಗೆ ಮನವರಿಕೆ ಮಾಡಲಾಗಿದೆ‘‘ ಎಂದು ಹೇಳಿದ್ದಾರೆ.
ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ ಹಾಗೆಂದು ಇಬ್ಬರ ಜಗಳದಲ್ಲಿ
ಮೂರನೆಯವರು ಆದಾಯ ಪಡೆಯಲು ಕಾರ್ಯಕರ್ತರು ಅವಕಾಶ ನೀಡುವುದಿಲ್ಲ. ನಮ್ಮಲ್ಲಿ ಸಮಸ್ಯೆಗಳಿದೆಯೆಂದು ಕಾಂಗ್ರೆಸ್
ಟಿಕೆಟನ್ನು ಬಿಜೆಪಿಗೆ ಮಾರಲು ಹೊರಟಿರುವುದು ಸರಿಯಲ್ಲ. ಪಕ್ಷದ ಸಿದ್ದಾಂತ, ಜಾತ್ಯಾತೀತ ತತ್ವವನ್ನು
ಉಳಿಸುವ ತಾಕತ್ತು ಇದ್ದವರು ಇಲ್ಲಿನ ಶಾಸಕರಾಗಬೇಕು. ಅಶೋಕ್ ರೈ ಅವರಿಗೆ ಅವರದೇ ಪಕ್ಷವಿದೆ ಅದರಲ್ಲಿ
ನಿಂತು ಅವರು ಗೆಲ್ಲಲಿ. ನಮ್ಮ ಪಕ್ಷವನ್ನು ಅವರು ಖರೀದಿಸುವುದು ಬೇಡ ಎಂದರು.
ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ
ಪ್ರತಿಯೊಬ್ಬ ಕಾರ್ಯಕರ್ತರೂ ಬಿಜೆಪಿ ವಿರುದ್ದ ದುಡಿಯುತ್ತಿದ್ದಾರೆ. ಆದರೆ ಅವರ ಮೇಲೆ ಬಿಜೆಪಿಗರನ್ನು
ಮತ್ತೊಮ್ಮೆ ಹೇರಿಕೆ ಮಾಡುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾಯಕರು ಕಾರ್ಯಕರ್ತರ ಭಾವನೆಗಳನ್ನು
ಅರ್ಥಮಾಡಿಕೊಂಡು ಅವರ ನಿಲುವನ್ನು ಬೆಂಬಲಿಸಬೇಕು. ಅಶೋಕ್ ರೈ ಅವರು ಬಿಜೆಪಿಗಾಗಿ ಸಾಕಷ್ಟು ಕೆಲಸ ಮಾಡಿದ್ದರೂ
ಅವರ ಪಕ್ಷವೇ ಟಿಕೇಟ್ ನೀಡಿಲ್ಲ. ಅವರಿಗೆ ಬೇಡವಾದವರು ಕಾಂಗ್ರೆಸ್ ಯಾಕೆ ಬೇಕು ಎಂದು ಪ್ರಶ್ನಿಸಿದರು.
ಆದಾಗ್ಯಾ ಅವರಿಗೆ ಕಾಂಗ್ರೆಸ್ ಪರ ಒಲವಿದ್ದಲ್ಲಿ ಮೊದಲು ಪಕ್ಷಕ್ಕೆ ಆಗಮಿಸಿ ಕಾರ್ಯಕರ್ತರಾಗಿ ದುಡಿದು
ಬಳಿಕ ಅಧಿಕಾರವನ್ನು ಪಡೆದುಕೊಳ್ಳಲಿ ಎಂದು ಆಗ್ರಹಿಸಿದರು.
ಸಭೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಜಿಪಂ
ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಪಕ್ಷದ ಮುಖಂಡರಾದ ರವಿಪ್ರಸಾದ್ ಶೆಟ್ಟಿ,
ಗಣೇಶ್ ರಾವ್, ಆಸ್ಕರ್ ಆಲಿ, ಫೌಝಿಯಾ, ಫಾರೂಕ್ ಬಯಬ್ಬೆ, ಕಿಟ್ಟಣ್ಣ ಗೌಡ, ಎಂಪಿ ಅಬೂಬಕ್ಕರ್, ಕೇಶವ
ಪೂಜಾರಿ, ಅನ್ವರ್ ಖಾಸಿಂ, ಇಸಾಕ್ ಸಾಲ್ಮರ ಲ್ಯಾನ್ಸಿ ಮಸ್ಕರೇನಸ್, ಪರಮೇಶ್ವರ ಬಲ್ಯಾಯ, ಬೂಡಿಯಾರ್
ಪುರುಷೋತ್ತಮ ರೈ, ಅಶೋಕ್ ಕುಮಾರ್ ಸಂಪ್ಯ ಮತ್ತಿತರರು ಉಪಸ್ಥಿತರಿದ್ದರು.

