MANGALORE: ಯುಟಿ ಖಾದರ್ ಸೋಲಿಸಲು ಒಂದಾದ ಮೂವರು ಮುಸ್ಲಿಂ ಉದ್ಯಮಿಗಳು!
ಮಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಸೋಲು ಗೆಲುವಿನ ಲೆಕ್ಕಚಾರ ಜೋರಾಗಿದೆ. ಹಾಲಿ ಶಾಸಕರನ್ನು ಮಟ್ಟ ಹಾಕಲು ವಿರೋಧ ಪಕ್ಷಗಳು ಸಿದ್ಧವಾಗುತ್ತಿದ್ದರೆ, ಉಳ್ಳಾಲದ ಮಟ್ಟಿಗೆ ಹಾಲಿ ಶಾಸಕ ಯುಟಿ ಖಾದರ್ ಸೋಲಿಸಲು ಮುಸ್ಲಿಂ ಸಮುದಾಯದ ಉದ್ಯಮಿಗಳೇ ಒಂದಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಯುಟಿ ಖಾದರ್ ಸೋಲಿಸಲು ಯಾರಾದರೂ ಕಣಕ್ಕೆ ಇಳಿದಲ್ಲಿ, ಅಂತಹವರಿಗೆ ಬಂಡವಾಳ ಹೂಡಲು ಈ ಮೂವರು ಸಿದ್ಧರಿದ್ದಾರೆ ಅನ್ನೋ ಚರ್ಚೆ, ಗುಸು ಗುಸು ಕಾಂಗ್ರೆಸ್ ವಲಯದಲ್ಲೇ ಕೇಳಿ ಬಂದಿದೆ.
ಮೂವರು ಉದ್ಯಮಿಗಳಲ್ಲಿ ಓರ್ವ ಸಕ್ರಿಯ ರಾಜಕಾರಣದಲ್ಲಿದ್ದಾರೆ ಅನ್ನೋದು ಸ್ಪಷ್ಟ. ಮಿಕ್ಕ ಇಬ್ಬರು ತೆರೆ ಮರೆ ಹಿಂದೆ ಯುಟಿಕೆ ಸೋಲಿಸಲು ಹಣ ಹೂಡುವ ಸಾಧ್ಯತೆ ಇದೆ.
ಉಳ್ಳಾಲದಿಂದ ಮೊಯ್ದಿನ್ ಬಾವಾ?
ಹೌದು, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೊಯ್ದಿನ್ ಬಾವಾ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಕಡಿಮೆಯಾಗುತ್ತಾ ಸಾಗಿದೆ. ಒಂದು ಕಡೆಯಲ್ಲಿ ಉದ್ಯಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ ಓಡಾಡುತ್ತಿದ್ದರೆ, ಇನ್ನೊಂದೆಡೆ ಪ್ರತಿಭಾ ಕುಳಾಯಿ ಬಹುಮುಖ್ಯ ರೇಸ್ ನಲ್ಲಿದ್ದಾರೆ.
ಇನಾಯತ್ ಅಲಿಗೆ ಟಿಕೆಟ್ ನೀಡಿದ್ದಲ್ಲಿ ಮೊಯ್ದಿನ್ ಬಾವಾ ಪಕ್ಷಕ್ಕೆ ಗುಡ್ ಬೈ ಹೇಳುವ ಸಾಧ್ಯತೆಯೇ ಜಾಸ್ತಿ. ಅಂತಹ ಸಂದರ್ಭ ಬಂದಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಮಂಗಳೂರು (ಉಳ್ಳಾಲ) ಕ್ಷೇತ್ರಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾದ್ದಲ್ಲಿ ಮೊಯ್ದಿನ್ ಬಾವಾ ಜೆಡಿಎಸ್ ನಿಂದ ಯುಟಿ ಖಾದರ್ ಎದುರಿಸಲಿದ್ದಾರೆ ಎನ್ನಲಾಗುತ್ತಿದೆ.
ಮೊಯ್ದಿನ್ ಬಾವಾ ಟಾರ್ಗೆಟ್ ಯುಟಿ ಖಾದರ್?
ಮಂಗಳೂರು ಉತ್ತರ ಮಾಜಿ ಶಾಸಕ ಮೊಯ್ದಿನ್ ಬಾವಾ ಟಾರ್ಗೆಟ್ ಕೂಡಾ ಯುಟಿ ಖಾದರ್ ಅನ್ನೋ ಚರ್ಚೆಯಿದೆ. ಮೊಯ್ದಿನ್ ಬಾವಾ ಹಣಿಯಲು ಯುಟಿ ಖಾದರ್ ಡಿಕೆಶಿ ಬಣದ ಇನಾಯತ್ ಅಲಿಯನ್ನು ಸುರತ್ಕಲ್ ಕ್ಷೇತ್ರಕ್ಕೆ ಕರೆ ತಂದಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಯುಟಿಕೆ ಕ್ಷೇತ್ರಕ್ಕೆ ಲಗ್ಗೆ ಇಟ್ಟು ಶಾಕ್ ಕೊಡುವ ಉದ್ದೇಶವನ್ನೂ ಮೊಯ್ದಿನ್ ಬಾವಾ ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ನಡೆದ ಈದ್ ಮಿಲಾದ್ ಸಮಯದಲ್ಲಿ ಮೊಯ್ದಿನ್ ಬಾವಾ ಹೆಸರಿನಲ್ಲಿ ಹತ್ತಾರು ಶುಭಕೋರುವ ಫ್ಲೆಕ್ಸ್ ಗಳು ಸುರತ್ಕಲ್ ಗಿಂತ ಜಾಸ್ತಿ ಉಳ್ಳಾಲದಲ್ಲಿ ಕಾಣಿಸಿಕೊಂಡಿತ್ತು.
ಮೊಯ್ದಿನ್ ಬಾವಾ ಕಣಕ್ಕೆ ಇಳಿದರೆ ಎಸ್ಡಿಪಿಐ ಬೆಂಬಲ!?
ಉಳ್ಳಾಲದ ಮಟ್ಟಿಗೆ ಮೂರನೇ ಬಲಿಷ್ಟ ಪಕ್ಷವಾಗಿ ಎಸ್ಡಿಪಿಐ ಬೆಳೆದಿದೆ ಅನ್ನೋದು ಸತ್ಯ. ಒಂದು ಕಡೆಯಲ್ಲಿ ಯುಟಿ ಖಾದರ್ ಎಸ್ಡಿಪಿಐ ಪಕ್ಷದ ಟಾರ್ಗೆಟ್ ಕೂಡಾ ಹೌದು. ಇನ್ನೊಂದೆಡೆ ಯುಟಿ ಖಾದರ್ ಹಿಜಾಬ್ ವಿಚಾರದಲ್ಲಿ ಹೆಣ್ಮಕ್ಕಳ ವಿರುದ್ಧವಾಗಿ ನೀಡಿದ್ದ ಹೇಳಿಕೆ, ಇತ್ತೀಚೆಗಿನ ಮುಡಿಪು ಘಟನೆ ಬಳಿಕದ ಮೌನ ಮುಸ್ಲಿಂ ಸಮುದಾಯದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಎಲ್ಲ ವೋಟ್ ಗಳು ಬಹುತೇಕ ಕಾಂಗ್ರೆಸ್ ನದ್ದೇ ಆಗಿದ್ದರೂ, ಮುಂದಿನ ಚುನಾವಣೆಯಲ್ಲಿ ಎಸ್ಡಿಪಿಐ ನೀಡಬೇಕೋ, ಬೇಡವೋ ಅನ್ನೋ ಗೊಂದಲವೂ ಎದುರಾಗಬಹುದು. ಆದರೆ, ಅದೇ ಜಾಗದಲ್ಲಿ ಜೆಡಿಎಸ್ ನಿಂದ ಮೊಯ್ದಿನ್ ಬಾವಾ ನಿಂತು, ಎಸ್ಡಿಪಿಐ ಜೊತೆ ಮೈತ್ರಿ ಮಾಡಿಕೊಂಡರೆ ಲಾಭ ಜಾಸ್ತಿ. ಜಾತ್ಯತೀತ ಜನತಾದಳ ಎಸ್ಡಿಪಿಐ ಜೊತೆ ಈ ಹಿಂದೆಯೂ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿತ್ತು. ಹೀಗಾಗಿ ಈ ಎರಡು ಪಕ್ಷಗಳ ಮೈತ್ರಿ ಕಷ್ಟ ಸಾಧ್ಯವಾಗದು. ಹೀಗಾದಲ್ಲಿ ಯುಟಿಕೆ ವಿರುದ್ಧ ಮೂವರು ಮುಸ್ಲಿಂ ಸಮುದಾಯದ ಉದ್ಯಮಿಗಳು ಸುರಿಯಲು ಮುಂದಾದ ಹಣ ವ್ಯರ್ಥವಾಗದು ಅನ್ನೋ ಮಾತು ರಾಜಕೀಯ ಪಡಸಾಲೆಯಲ್ಲಿ ವ್ಯಕ್ತವಾಗುತ್ತಿದೆ.