-->
ಮುಲ್ಕಿ-ಮೂಡಬಿದ್ರಿ: ವರ್ಚಸ್ಸು ಉಳಿಸಿಕೊಂಡಿರುವ ಜೈನ್; ಮಿಥುನ್ ರೈ ಗೆ ಟಿಕೆಟ್!? | ಕೋಟ್ಯಾನ್ ಕಟ್ಟಿ ಹಾಕೋದು ಕಷ್ಟ!?

ಮುಲ್ಕಿ-ಮೂಡಬಿದ್ರಿ: ವರ್ಚಸ್ಸು ಉಳಿಸಿಕೊಂಡಿರುವ ಜೈನ್; ಮಿಥುನ್ ರೈ ಗೆ ಟಿಕೆಟ್!? | ಕೋಟ್ಯಾನ್ ಕಟ್ಟಿ ಹಾಕೋದು ಕಷ್ಟ!?

 

ಮಂಗಳೂರು: ಮುಲ್ಕಿ-ಮೂಡಬಿದ್ರಿ ಹಲವು ವರ್ಷಗಳಿಂದ ಕಾಂಗ್ರೆಸ್ ಪಾಳಯದ ಭದ್ರ ಕ್ಷೇತ್ರ. ಕಳೆದ ಅವಧಿವರೆಗೂ ಕಾಂಗ್ರೆಸ್ ಪಾರುಪತ್ಯವಿತ್ತಾದರೂ, 2018ರ ಚುನಾವಣೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಸೋಲಿಸಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಗೆದ್ದು ಇತಿಹಾಸ ಬರೆದರು. ಕಳೆದ ನಾಲ್ಕೂವರೆ ವರ್ಷದಲ್ಲಿ ಉಮಾನಾಥ ಕೋಟ್ಯಾನ್ ದಕ್ಷಿಣ ಕನ್ನಡ ಜಿಲ್ಲೆಯ ಬೇರೆಲ್ಲ ಬಿಜೆಪಿ ಶಾಸಕರಿಗೆ ಹೋಲಿಸಿದ್ದಲ್ಲಿ ಅಭಿವೃದ್ಧಿ ಚಟುವಟಿಕೆಯಲ್ಲಿ ಮುಂದಿದ್ದಾರೆ. ನೆರೆಯ ಸುರತ್ಕಲ್ ಕ್ಷೇತ್ರಕ್ಕೆ ಹೋಲಿಸಿದರೂ ಭರತ್ ಶೆಟ್ಟಿ ಅಭಿವೃದ್ಧಿ ಕೆಲಸ ಕಾರ್ಯಗಳು ಉಮಾನಾಥ ಕೋಟ್ಯಾನ್ ಕೆಲಸ ಕಾರ್ಯದ ಮುಂದೆ ಮಂಕಾಗಿ ಕಾಣುತ್ತಿದೆ.

ಮುಲ್ಕಿ-ಮೂಡಬಿದ್ರಿ ಕ್ಷೇತ್ರದಾದ್ಯಂತ ಮೂಲಭೂತ ಸೌಕರ್ಯಗಳಿಗೆ ಉಮಾನಾಥ ಕೋಟ್ಯಾನ್ ಆರಂಭಿಕ ದಿನದಿಂದಲೇ ಮಣೆ ಹಾಕುತ್ತಾ ಬಂದಿದ್ದಾರೆ. ಹಾಗಂತ ಕರಾವಳಿಯ ಪಾಲಿಟಿಕ್ಸ್ ಅಭಿವೃದ್ಧಿಗಷ್ಟೇ ಪೂರಕವಲ್ಲ ಅನ್ನೋದಕ್ಕೆ ಕಳೆದ ಬಾರಿಯ ಮೊಯ್ದಿನ್ ಬಾವಾ, ರಮಾನಾಥ ರೈ, ವಿನಯ್ ಕುಮಾರ್ ಸೊರಕೆಯಂತಹ ಘಟಾನುಘಟಿಗಳ ಸೋಲು ಪಾಠ ಕಲಿಸಿತ್ತು. ಹಾಗಾಗಿ ಉಮಾನಾಥ ಕೋಟ್ಯಾನ್ ಅಭಿವೃದ್ದಿ ಹೊರತಾಗಿಯೂ ಗೆಲುವನ್ನ ಪಡೆಯುತ್ತಾರೆ ಎನ್ನಲಾಗದು. ಸರಳ ಸಜ್ಜನಿಕೆ, ಕ್ಷೇತ್ರದ ಜನರ ಜೊತೆಗಿನ ಒಡನಾಟ ಅವರ ಪ್ಲಸ್ ಪಾಯಿಂಟ್. ಆದರೆ, ಬಿಜೆಪಿ ಒಳಗಿರುವ ಆಂತರಿಕ ಕಚ್ಚಾಟ ಕೋಟ್ಯಾನ್ ಅವರನ್ನೂ ಬಿಟ್ಟಿಲ್ಲ. ಮುಲ್ಕಿ-ಮೂಡಬಿದ್ರಿ ಕ್ಷೇತ್ರದ ಮೇಲೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್ ಸಹಿತ ಹಲವರು ಕಣ್ಣಿಟ್ಟಿದ್ದು, ಉಮಾನಾಥ ಕೋಟ್ಯಾನ್ ಗೆ ಈ ಬಾರಿ ಟಿಕೆಟ್ ಇಲ್ಲ ಅನ್ನೋ ಮಾತುಗಳನ್ನ ಅವರದೇ ಪಕ್ಷದ ಮಂದಿ ತೇಲಿ ಬಿಡುತ್ತಿದ್ದಾರೆ. ಇನ್ನು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೃಪಾಕಟಾಕ್ಷವು ಉಮಾನಾಥ ಕೋಟ್ಯಾನ್ ಮೇಲಿಲ್ಲ ಅನ್ನೋದು ಕೂಡಾ ಬಿಜೆಪಿ ಪಾಳಯದಲ್ಲಿ ಗುಟ್ಟಾಗಿ ಉಳಿದಿಲ್ಲ.  


‘ಕೈ‘ ಟಿಕೆಟ್ ಗೆ ಮಿಥುನ್ ರೈ ಟಾಪರ್; ಆದ್ರೂ ಇದೆ ರೇಸ್!

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರೋರ ಸಂಖ್ಯೆ ಮುಲ್ಕಿ-ಮೂಡಬಿದ್ರಿ ಕ್ಷೇತ್ರದಲ್ಲಿ ತುಸು ಕಡಿಮೆಯೇ. ಯಾಕೆಂದರೆ ಇಲ್ಲಿ ಬಹುತೇಕ ಮಿಥುನ್ ರೈ ಅವರಿಗೆ ಟಿಕೆಟ್ ಅನ್ನೋ ಕನ್ಫರ್ಮೇಶನ್ ಇದ್ದಿದ್ರಿಂದಲೇ ಮಿಥುನ್ ರೈ ಹೊರತಾಗಿ ಕೇವಲ ಇಬ್ಬರಷ್ಟೇ ಅರ್ಜಿ ಸಲ್ಲಿಸಿದ್ದಾರೆ. ಗಮನಾರ್ಹ ಸಂಗತಿ ಅಂದ್ರೆ ಆ ಇಬ್ಬರು ಅಭ್ಯರ್ಥಿಗಳು ಕೂಡಾ ಬಿಲ್ಲವ ಸಮುದಾಯಕ್ಕೆ ಸೇರಿದವರು. ಒಂದು ವೇಳೆ ಬಿಲ್ಲವ ಸಮಾವೇಶದ ಬಳಿಕ ‘ಬಿಲ್ಲವ ಪಾಲಿಟಿಕ್ಸ್‘ ಜೋರಾದಲ್ಲಿ ಒಂದು ಕೈ ನೋಡುವ ಇರಾದೆಯಿಂದಲೋ ಏನೋ ರಾಜಶೇಖರ್ ಕೋಟ್ಯಾನ್ ಹಾಗೂ ಪ್ರತಿಭಾ ಕುಳಾಯಿ ಅರ್ಜಿ ಸಲ್ಲಿಸಿದ್ದಾರೆ. ಉಮಾನಾಥ ಕೋಟ್ಯಾನ್ ಕೂಡಾ ಬಿಲ್ಲವರಾಗಿದ್ದರಿಂದ ಅವರನ್ನ ಮಣಿಸಲು ಬಿಲ್ಲವ ಕ್ಯಾಂಡಿಡೇಟ್ ಅನಿವಾರ್ಯತೆ ಅನ್ನೋ ವಿಚಾರ ಬಂದ್ರೆ ಮಿಥುನ್ ಬದಲು ಇವರಿಬ್ಬರಲ್ಲಿ ಯಾರಾದರೂ ಒಬ್ಬರಿಗೆ ಮಣೆ ಹಾಕಬಹುದು. ಆದರೆ, ಅಂತಹ ಅವಕಾಶ ಮಾತ್ರ ನೂರಕ್ಕೆ 99.9 ರಷ್ಟು ಅಸಾಧ್ಯವೇ. ಯಾಕೆಂದ್ರೆ ಮಿಥುನ್ ರೈ ಅದಾಗಲೇ ಸತತ ಐದಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ. ಇನ್ನು ಮಹಿಳಾ ನಾಯಕಿ ಪ್ರತಿಭಾ ಕುಳಾಯಿ ಸುರತ್ಕಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೂಡಾ.  

ಇನ್ನೊಂದೆಡೆ ಮಾಜಿ ಶಾಸಕ ಅಭಯಚಂದ್ರ ಜೈನ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸದೇ ಹೋದರೂ, ಕ್ಷೇತ್ರವನ್ನು ತ್ಯಾಗ ಮಾಡಿದ್ದೀನಿ ಅಂದ್ರೂ ಕ್ಷೇತ್ರದಲ್ಲಿ ಅವರ ಓಡಾಟ, ಉತ್ಸಾಹ ನೋಡಿದ್ರೆ ಕೊನೆ ಗಳಿಗೆಯಲ್ಲಿ ‘ಕೈ‘ ಪಕ್ಷವು ಅವರಿಗೆ ಟಿಕೆಟ್ ನೀಡಿದರೂ ಅಚ್ಚರಿಯಿಲ್ಲ ಎನ್ನುವಂತಾಗಿದೆ.


ವರ್ಚಸ್ಸು ಕಳೆದುಕೊಳ್ಳದ ಅಭಯಚಂದ್ರ!

ಮಾಜಿ ಸಚಿವ, ಕಳೆದ ಅವಧಿಯ ಶಾಸಕ ಅಭಯಚಂದ್ರ ಜೈನ್ ಇಂದಿಗೂ ಕ್ಷೇತ್ರದಲ್ಲಿ ವರ್ಚಸ್ಸು ಉಳಿಸಿಕೊಂಡಿದ್ದಾರೆ. ಯಾವುದೇ ಸರ್ಕಾರಿ ಕಚೇರಿ, ಅಧಿಕಾರಿಗಳಿಂದ ಕೆಲಸ ಆಗಬೇಕಿದ್ದರೂ ಜನ ಅಭಯಚಂದ್ರರ ಮೊರೆ ಹೋಗುತ್ತಿರುವುದು ನಿಂತಿಲ್ಲ. ಮನೆ ಬಾಗಿಲಿಗೆ ಸಹಾಯ ಕೇಳಿ ಬಂದವರನ್ನು ‘‘ನೀವು ನನ್ನನ್ನು ಸೋಲಿಸಿದ್ದೀರಿ..‘‘ ಅಂತಾ ವಾಪಸ್ ಕಳಿಸಿದ್ದೂ ಇಲ್ಲ. ಹೀಗಾಗಿ ಅಭಯಚಂದ್ರ ಜೈನ್ ಗೆ ಮತ್ತೆ ಟಿಕೆಟ್ ಕೊಟ್ಟರೆ ಗೆಲ್ಲಬಹುದು, ಆದರೆ ಮಿಥುನ್ ರೈ ಗೆ ಟಿಕೆಟ್ ನೀಡಿದರೆ ಗೆಲುವು ಸುಲಭವಲ್ಲ ಅನ್ನೋ ಮಾತೂ ಕ್ಷೇತ್ರದಲ್ಲಿ ಕೇಳಿ ಬರ್ತಿದೆ. ಮಾತ್ರವಲ್ಲದೇ ಇತ್ತೀಚೆಗೆ ನಡೆದ ಟೋಲ್ ವಿರೋಧಿ ಹೋರಾಟದಲ್ಲಿ ಅಭಯಚಂದ್ರ ಜೈನ್ ಸಕ್ರಿಯವಾಗಿ ಪಾಲ್ಗೊಂಡಿದ್ದು, ರಾತ್ರಿ ಧರಣಿ ಸ್ಥಳದಲ್ಲೇ ಉಳಿದುಕೊಂಡಿದ್ದು ಇದೆಲ್ಲವೂ ಹೋರಾಟಗಾರರ ಶಕ್ತಿಯನ್ನು ಹೆಚ್ಚಿಸಿತ್ತು. ಮಾತ್ರವಲ್ಲದೇ, ಅಭಯಚಂದ್ರ ಜೈನ್ ಹೋರಾಟದ ಕಿಚ್ಚು ಜನರ ಗಮನ  ಸೆಳೆದಿತ್ತು.


‘ರೈ‘ ಹಿಂದೂ ತುಷ್ಟೀಕರಣ, ಕ್ಷೇತ್ರದಾದ್ಯಂತ ಓಡಾಟ!

ಇನ್ನು ಯೂತ್ ಕಾಂಗ್ರೆಸ್ ಮುಖಂಡ, ಮುಲ್ಕಿ-ಮೂಡಬಿದ್ರಿ ಕ್ಷೇತ್ರದ ಪ್ರಬಲ ‘ಕೈ‘ ಟಿಕೆಟ್ ಆಕಾಂಕ್ಷಿ ಮಿಥುನ್ ರೈ ಕ್ಷೇತ್ರದಲ್ಲಿ ಬಿರುಸಿನ ಓಡಾಟ ನಡೆಸುತ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ಮಿಥುನ್ ರೈ ಓಡಾಟ ಇಲ್ಲಿ ಕಡಿಮೆಯದ್ದಲ್ಲ. ಹೆಚ್ಚಾಗಿ ಹಿಂದೂ ತುಷ್ಟೀಕರಣ ಮಾಡುತ್ತಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ ಆದರೂ, ಹಿಂದೂ ವೋಟ್ ಬ್ಯಾಂಕ್ ಜೋಳಿಗೆಯಿಂದ ಅದೆಷ್ಟು ಮತಗಳು ಇತ್ತ ಸರಿದಾವು ಅನ್ನೋ ಲೆಕ್ಕಚಾರವಿಲ್ಲ. ಮಾತ್ರವಲ್ಲದೇ, ಜನರ ಅದೆಷ್ಟೋ ಕೆಲಸ ಕಾರ್ಯಗಳನ್ನ ಯಾವುದೇ ಅಧಿಕಾರ ಇಲ್ಲದೇ ಮಾಡುತ್ತಿರೋ ಮಿಥುನ್ ರೈ ಬಗ್ಗೆ ಕ್ಷೇತ್ರದ ಜನರಲ್ಲಿ ಆಶಾವಾದವೂ ಇದೆ. ಯುವ ನಾಯಕನಾಗಿರುವ ರೈ, ತುಳುನಾಡಿನ ಸಂಸ್ಕೃತಿ, ಕಲೆ ಬಗ್ಗೆ ತೋರುವ ಆಸಕ್ತಿ ಕಡಿಮೆಯದ್ದಲ್ಲ. ಯುವ ಜನರನ್ನ ಸೆಳೆಯುವಲ್ಲಿ ಮಿಥುನ್ ರೈ ಸಕ್ಸಸ್ ಆಗಬಹುದು ಅನ್ನೋ ಮಾತಿದೆ. ಕಷ್ಟದಲ್ಲಿದ್ದವರಿಗೆ ನೆರವು ನೀಡುವ, ನೆರೆ ಬಂದಾಗ ತೆರಳಿ ಸಮಸ್ಯೆ ಪರಿಹರಿಸಿದ, ದೇಗುಲ, ದೈವಸ್ಥಾನಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದು ಮತದಾರರು ಕೈ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಮಿಥುನ್ ರೈ ಪುಟಿದೆದ್ದಿರುವುದು ಸುಳ್ಳಲ್ಲ.


ಒಂದಾಗುವ ಬಂಟರು, ಬಿಲ್ಲವರ ಕಥೆ ಏನು!?

ಮುಲ್ಕಿ-ಮೂಡಬಿದ್ರಿ ಕ್ಷೇತ್ರದ ಮಟ್ಟಿಗೆ ಬಿಲ್ಲವರು, ಅಲ್ಪಸಂಖ್ಯಾತರು ಹಾಗೂ ಬಂಟರು ಹೀಗೆ ನಿರ್ಣಾಯಕ ಮತದಾರರು ಹರಿದು ಹಂಚಿ ಹೋಗಿದ್ದಾರೆ. ಅದರಲ್ಲೂ ಈ ಕ್ಷೇತ್ರದಲ್ಲಂತೂ ಬಂಟರು ತಮ್ಮ ಸಮುದಾಯದ ಕ್ಯಾಂಡಿಡೇಟ್ ಗೆ ಮಣೆ ಹಾಕೋ ಸಾಧ್ಯತೆನೇ ಜಾಸ್ತಿ. ಇನ್ನು ಬಿಲ್ಲವರು ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು ಕೋಟ್ಯಾನ್ ಕೈ ಹಿಡಿಯಬಹುದು. ಅಂತಿಮವಾಗಿ ಅಲ್ಪಸಂಖ್ಯಾತ ಮುಸ್ಲಿಮ್, ಕ್ರೈಸ್ತ ಸಮುದಾಯದ ವೋಟ್ ಗಳು ಮುಖ್ಯವಾಗುತ್ತದೆ. ಕಣದಲ್ಲಿ ಎಸ್ಡಿಪಿಐ, ಸಿಪಿಐಎಂ, ಜೆಡಿಎಸ್ ಸ್ಪರ್ಧಿಸಿದರೆ ಅಲ್ಪಸಂಖ್ಯಾತ, ಜಾತ್ಯತೀತ ವೋಟ್ ಗಳು ಧ್ರುವೀಕರಣ ಆಗಬಹುದು. ಹಾಗಂತ ಇದರ ಲಾಭ ನೇರವಾಗಿ ಬಿಜೆಪಿಗೆ ಎನ್ನುವಂತದ್ದು ಮೂರ್ಖತನವಾದೀತು.


ಅನೈತಿಕ ಪೊಲೀಸ್ ಗಿರಿಗೆ ಸಾಥ್, ಎಡವಟ್ಟು ಕಾಮಗಾರಿ!

ಉಮಾನಾಥ ಕೋಟ್ಯಾನ್ ಹಿಂದುತ್ವದ ಪಕ್ಷದಿಂದ ಆಯ್ಕೆಯಾಗಿ ಬಂದಿದ್ರಿಂದ ಅನಿವಾರ್ಯವಾಗಿ ಅನೈತಿಕ ಪೊಲೀಸ್ ಗಿರಿ ಸಾಥ್ ನೀಡಿದ ಉದಾಹರಣೆ ಇದೆ. ಮೂಡಬಿದ್ರಿ ಹೊರವಲಯದಲ್ಲಿ ನಡೆದಿದ್ದ ಅನೈತಿಕ ಪೊಲೀಸ್ ಗಿರಿಯಲ್ಲಿ ಬಂಧಿತರಾದ ಬಜರಂಗದಳದ ಕಾರ್ಯಕರ್ತರನ್ನ ಠಾಣೆಗೆ ತೆರಳಿ ಬಿಡಿಸಿಕೊಂಡು ಬಂದಿದ್ದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಶಾಸಕರೇ ಕಾನೂನು ಭಂಜಕರಿಗೆ ರಕ್ಷಣೆ ನೀಡಿದ್ದಾರೆ ಅನ್ನೋ ಟೀಕೆ ಕೇಳಿ ಬಂದಿತ್ತು. ಇನ್ನು ಉಮಾನಾಥ ಕೋಟ್ಯಾನ್ ಕಟೀಲು ಬ್ರಹ್ಮಕಲಶೋತ್ಸವ ಸಮಯದಲ್ಲಿ ಕಟೀಲು ಹಾಗೂ ಅನಂತರದ ದಿನಗಳಲ್ಲಿ ಕ್ಷೇತ್ರದ ಎಲ್ಲೆಲ್ಲ ರಸ್ತೆ ಡಾಂಬರೀಕರಣ ಮಾಡಿದ್ದಾರೋ ಅಲ್ಲೆಲ್ಲ ರಸ್ತೆಗಳು ಕೆಲವೇ ತಿಂಗಳಲ್ಲಿ ಕಿತ್ತು ಹೋಗಿದೆ.

ಕಡಂದಲೆ ಪವರ್ ಪ್ರಾಜೆಕ್ಟ್, ಬಳ್ಕುಂಜೆ ಭೂ ಸ್ವಾಧೀನದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದೇ ಇರುವುದು ಉಮಾನಾಥ ಕೋಟ್ಯಾನ್ ಪಾಲಿನ ಮೈನಸ್. ಇನ್ನು ಅಧಿಕಾರಿ ವರ್ಗಗಳ ಬಗ್ಗೆಯೂ ಹೆಚ್ಚೇನು ಸಕರಾತ್ಮಕವಾಗಿ ಸ್ಪಂದನೆ ಮಾಡುವುದಿಲ್ಲ ಅನ್ನೋ ದೂರಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಕಪಿಮುಷ್ಠಿಯಲ್ಲಿದ್ದ ಕ್ಷೇತ್ರವನ್ನ ಬಿಜೆಪಿ ಕಳೆದ ಅವಧಿಯಲ್ಲಿ ತಮ್ಮ ಬಗಲಿಗೆ ಎಳೆದುಕೊಂಡಿತ್ತು. ಇದೀಗ ಮತ್ತೆ ಜಂಗೀಕುಸ್ತಿ ಆರಂಭವಾಗಿದ್ದು, ಉಮಾನಾಥ ಕೋಟ್ಯಾನ್ ಅನ್ನೋ ಗೆಲ್ಲುವ ಕುದುರೆಯನ್ನ ಕಟ್ಟಿ ಹಾಕೋ ಯೋಜನೆ ಕಾಂಗ್ರೆಸ್ ಪಾಲಿಗೆ ಅಷ್ಟು ಸುಲಭದಲ್ಲ ಅನ್ನೋದನ್ನ ಮರೆಯುವಂತಿಲ್ಲ.  

Ads on article

Advertise in articles 1

advertising articles 2

Advertise under the article