ಸುರತ್ಕಲ್: ಜಲೀಲ್ ಹತ್ಯೆ ತನಿಖೆ ಚುರುಕು; ಸಿಸಿಟಿವಿ ಫೂಟೇಜ್ ಬೆನ್ನು ಬಿದ್ದ ಪೊಲಿಸರು, ಕ್ರಿಸ್ಮಸ್ ಸಂಭ್ರಮಕ್ಕೆ ಸೆಕ್ಷನ್ ಆತಂಕ!
ಮಂಗಳೂರು: ಸುರತ್ಕಲ್ ನಗರದ ಕಾಟಿಪಳ್ಳ ನಾಲ್ಕನೇ ಬ್ಲಾಕ್ ನಲ್ಲಿ ನಡೆದ ಜಲೀಲ್ ಎಂಬವರ ಹತ್ಯೆ ಇದೀಗ ಪೊಲೀಸರ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ತನಿಖೆ ತೀವ್ರಗೊಳಿಸಿರುವ ಪೊಲೀಸರು ಹತ್ಯೆ ನಡೆದ ಸ್ಥಳ ಹಾಗೂ ಆರೋಪಿಗಳು ಪರಾರಿಯಾಗಿರುವ ರಸ್ತೆ, ಅಂಗಡಿ ಮುಂಗಟ್ಟು, ಕಟ್ಟಡ, ವಸತಿ ಸಂಕೀರ್ಣಗಳ ಸಿಸಿಟಿವಿ ಫೂಟೇಜ್ ಪರಿಶೀಲನೆಗೆ ಮುಂದಾಗಿದ್ದಾರೆ. ಅಲ್ಲದೇ, ಜಲೀಲ್ ಹತ್ಯೆ ಕಾರಣ ತಿಳಿಯಲು ಇತ್ತೀಚೆಗೆ ಯಾವುದಾದರೂ ಅಹಿತಕರ ಘಟನೆ ಜಲೀಲ್ ಅವರು ನಡೆಸುತ್ತಿದ್ದ ಅಂಗಡಿಯ ಸಮೀಪ ನಡೆದಿತ್ತೇ? ಅಥವಾ ಜಲೀಲ್ ಜೊತೆಗೆ ಯಾರಾದರೂ ಜಗಳ ಮಾಡಿಕೊಂಡಿದ್ದರೇ ಅನ್ನೋದನ್ನ ಜಲೀಲ್ ಅವರ ಆತ್ಮೀಯರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸೆಕ್ಷನ್ ಜಾರಿ
ಜಲೀಲ್ ಅವರ ಹತ್ಯೆ ಬೆನ್ನಲ್ಲೇ ಕೋಮು ಸೂಕ್ಷ್ಮ ಪ್ರದೇಶಗಳಾದ ಸುರತ್ಕಲ್, ಬಜ್ಪೆ, ಕಾವೂರು ಹಾಗೂ ಪಣಂಬೂರು ಈ ನಾಲ್ಕು ಠಾಣಾ ವ್ಯಾಪ್ತಿಗಳಲ್ಲಿ ಸೆಕ್ಷನ್ 144ರ ಅನ್ವಯ ಇಂದು ಮುಂಜಾನೆಯಿಂದ ಡಿಸೆಂಬರ್ 27ರ ವರೆಗೆ ಬೆಳಿಗ್ಗೆ 10 ಗಂಟೆವರೆಗೆ ನಿಷೇಧಾಜ್ಞೆ ವಿಧಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.
ಕಟ್ಟೆಯೊಡೆದ
ಮುಸ್ಲಿಮರ ಆಕ್ರೋಶ!
ಘಟನೆ ಬೆನ್ನಲ್ಲೇ ಮುಸ್ಲಿಮರ ಆಕ್ರೋಶದ ಕಟ್ಟೆಯೊಡೆದಿದೆ. ಫಾಝಿಲ್ ಹತ್ಯೆ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ಅವರೆಲ್ಲರ ಬಂಧನವಾಗದಿರುವುದೇ ಇಂತಹ ಕೊಲೆಗಳಿಗೆ ಮೂಲ ಕಾರಣ ಅನ್ನೋದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಲೀಲ್ ಹತ್ಯೆ ಪ್ರಕರಣದ ಸೂಕ್ತ ತನಿಖೆಗಾಗಿ ಮುಸ್ಲಿಂ ಸಂಘಟನೆಗಳ ಒಕ್ಕೂಟ ಸಹಿತ ಹಲವು ಸಂಘಟನೆಗಳು ಒತ್ತಾಯಿಸಿವೆ.
ಕ್ರಿಸ್ಮಸ್,
ಹೊಸ ವರ್ಷ ಸಂಭ್ರಮಕ್ಕೆ ಆತಂಕ!
ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡುತ್ತಿದ್ದಂತೆ ಕರಾವಳಿಯಲ್ಲಿ ನೆತ್ತರು ಹರಿದಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಪೊಲೀಸರ ಓಡಾಟ ಹೆಚ್ಚಿದ್ದು, ಕೆಲವೆಡೆ ಅಂಗಡಿ ಮುಂಗಟ್ಟುಗಳನ್ನು ಓಪನ್ ಮಾಡಲು ಪೊಲೀಸರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಹೀಗಾಗಿ ಕ್ರಿಸ್ಮಸ್ ಜೊತೆಗೆ ಹೊಸ ವರ್ಷಾಚರಣೆಗೂ ಆತಂಕ ಎದುರಾಗಿದೆ.
ಕಾರಣ ನಿಗೂಢ!
ಜಲೀಲ್ ಯಾವುದೇ
ಚಟುವಟಿಕೆಯಲ್ಲಿ ಇಲ್ಲದಾಗಿದ್ದು, ಅವರ ಹತ್ಯೆ ಕಾರಣವೂ ನಿಗೂಢವಾಗಿದೆ. ಡಿಸೆಂಬರ್ 24ರ ರಾತ್ರಿ 8
ಗಂಟೆ ಸುಮಾರಿಗೆ ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ಮುಸುಕುಧಾರಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು.
ಜುಲೈ 28 ರಂದು ಫಾಝಿಲ್ ಹತ್ಯೆ ಸುರತ್ಕಲ್ ನಗರದಲ್ಲಿ ನಡೆದು, ಐದು ತಿಂಗಳಾಗುತ್ತಲೇ ಮತ್ತೆ ನೆತ್ತರು
ಹರಿದಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.