
MANGALORE: ಸಾಹೀಬ್ ಗಂಜ್ ಗ್ಯಾಂಗ್ ಮಂಗಳೂರು ಸಿಸಿಬಿ ಪೊಲೀಸರ ಬಲೆಗೆ!!
ಮಂಗಳೂರು: ಜ್ಯುವೆಲ್ಲರಿ ದರೋಡೆಗೆ ಯತ್ನಿಸಿದ ಕುಖ್ಯಾತ ಅಂತರಾಜ್ಯ ಗ್ಯಾಂಗ್ ಮಂಗಳೂರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ . ಸಾಹೀಬ್ ಗಂಜ್ ಗ್ಯಾಂಗ್ ನ 9 ಮಂದಿಯನ್ನ ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಹೀಬ್ ಗಂಜ್ ಗ್ಯಾಂಗ್ ಉಳ್ಳಾಲ ಸಮೀಪ ಜ್ಯುವೆಲ್ಲರಿಯೊಂದರ ದರೋಡೆಗೆ ಸಂಚು ರೂಪಿಸಿದ್ದರು. ಇಷ್ಟೇ ಅಲ್ಲದೆ ತೊಕ್ಕೊಟ್ಟು ಮಂಚಿಲ ಪರಸರದ ಮನೆಯೊಂದರಲ್ಲಿ ಜ್ಯುವೆಲ್ಲರಿ ದರೋಡೆಗೆ ಯತ್ನಿಸಿದ್ದರು. ಇದೀಗ ಈ ಉತ್ತರ ಭಾರತದ ಕುಖ್ಯಾತ ಸಾಹೀಬ್ ಗಂಜ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗುಜರಾತ್‌ನ ಭಾಸ್ಕರ ಬೆಳ್ಚಪ್ಪಾಡ(65), ದಿನೇಶ್ ರಾವಲ್ ಯಾನೇ ಸಾಗರ್ ದಿಲ್ಲಿ(38), ಮೊಹಮ್ಮದ್ ಜಾಮೀಲ್ ಶೇಖ್(29), ಇಂಜಮಾಮ್ ಉಲ್ ಹಕ್(27), ಬಿಸ್ತ ರೂಪ್ ಸಿಂಗ್(34), ಕೃಷ್ಣ ಬಹದ್ದೂರ್ ಬೋಗಟಿ(41), ಇಮ್ದದುಲ್ ರಝಾಕ್ ಶೇಕ್(32), ಬಿವುಲ್ ಶೇಕ್(31) ಮತ್ತು ಇಮ್ರಾನ್ ಶೇಖ್ ಬಂಧಿತರು ಎಂದು ಗುರುತಿಸಲಾಗಿದೆ.
ಈ ಕುಖ್ಯಾತ ದರೋಡೆಕೋರರು 15 ದಿನಗಳ ಹಿಂದೆ ಮಂಗಳೂರಿಗೆ ರೈಲಿನಲ್ಲಿ ಆಗಮಿಸಿ ತೊಕ್ಕೊಟ್ಟಿನಲ್ಲಿ ತಂಗಿದ್ದರು. ಸೂಪರ್ ಗೋಲ್ಡ್ ಮತ್ತು ಡೈಮಂಡ್ ಜುವೆಲ್ಲರಿಯನ್ನು ಗುರುತಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದರು. ಇನ್ನು ಸಾಹೀಬ್ ಗಂಜ್ ಗ್ಯಾಂಗ್ ಉತ್ತರ ಭಾರತದ ಜಾರ್ಖಂಡ್ ರಾಜ್ಯದ ಕುಖ್ಯಾತ ದರೋಡೆಕೋರರು. ಈ ಗ್ಯಾಂಗ್ ನಲ್ಲಿ ನೇಪಾಳ ದೇಶದ ಪ್ರಜೆಗಳು ಕೂಡಾ ಇದ್ದಾರೆ ಎನ್ನಲಾಗಿದೆ.
ಇವರಿಂದ ಗ್ಯಾಸ್ ಕಟ್ಟರ್, ಆಕ್ಸಿಜನ್ ಸಿಲಿಂಡರ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟಿಂಗ್ ನೋಝಲ್, ಕಟ್ಟಿಂಗ್ ಹೊಸ ಪೈಪ್, ಲೆದರ್ ಹ್ಯಾಂಡ್ ಗ್ಲೌಸ್, ಕಬ್ಬಿಣದ ರಾಡ್, ತಲವಾರು, ಆಕ್ಸೋ ಬ್ಲೇಡ್, ಹ್ಯಾಮರ್, ಸ್ಕ್ರೂ ಡ್ರೆವರ್, ಮೆಣಸಿನ ಹುಡಿ ಮತ್ತು ನೈಲಾನ್ ಹಗ್ಗವನ್ನ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.