ಕಿನ್ನಿಗೋಳಿ: ಗಾಂಜಾ ನಶೆಯಲ್ಲಿ ಎರ್ರಾಬಿರ್ರಿ ಪಿಕಪ್ ಚಾಲನೆ!?; ಚಾಲಕ ಸಹಿತ ಇಬ್ಬರಿಗೆ ಧರ್ಮದೇಟು!
ಮಂಗಳೂರು: ಅಜಾಗರೂಕತೆಯಿಂದ ಪಿಕಪ್ ವಾಹನ ಚಾಲನೆ ಮಾಡಿಕೊಂಡು ಬಂದ ಚಾಲಕನೋರ್ವ ಇತರೆ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಬಂದು ಕೊನೆಗೆ ಸಾರ್ವಜನಿಕರ ಕೈಗೆ ಸಿಕ್ಕಿ ಹಾಕಿ ಚಾಲಕ ಸಹಿತ ಇಬ್ಬರು ಹಣ್ಣುಗಾಯಿ ನೀರುಗಾಯಿ ಆದ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯ ಹೊಸ ಕಾವೇರಿ ಬಳಿ ನಡೆದಿದೆ.
ಗುರುವಾರ ರಾತ್ರಿ 9.30 ರ ವೇಳೆಗೆ ಬಜ್ಪೆಯಿಂದ ಬರುತ್ತಿದ್ದ ಪಿಕಪ್ ವಾಹನವು ಅತ್ಯಂತ ಅಜಾರೂಗಕತೆಯಿಂದ ಚಾಲನೆ ನಡೆಸುತ್ತಿದ್ದಲ್ಲದೇ ದಾರಿಯುದ್ದಕ್ಕೂ ಸಿಕ್ಕ ಸಿಕ್ಕ ಕಾರು, ಬೈಕ್, ಬಸ್ ಗಳಿಗೆ ಡಿಕ್ಕಿ ಹೊಡೆಯುತ್ತಾ ಬಂದಿದೆ. ಹೀಗೆ ಬಜ್ಪೆಯಿಂದ ಸುಮಾರು 15 ಕಿಲೋ ಮೀಟರ್ ಸಾಗಿ ಬಂದ ಪಿಕಪ್ ವಾಹನವನ್ನು ಆಕ್ರೋಶಿತ ಯುವಕರು ಹಿಂಬಾಲಿಸಿಕೊಂಡು ಬೈಕ್ ಗಳಲ್ಲಿ ಬಂದಿದ್ದಾರೆ. ಬಳಿಕ ಕಿನ್ನಿಗೋಳಿಯ ಹೊಸಕಾವೇರಿ ಬಳಿ ತಡೆದು ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ತಕ್ಷಣವೇ ಪಿಕಪ್ ವಾಹನದ ಚಾಲಕ ಹಾಗೂ ಅದರಲ್ಲಿದ್ದ ನಿರ್ವಾಹಕನನ್ನು ಹಿಡಿದು ಥಳಿಸಿದ್ದು, ಮುಖ ಮೂತಿ ನೋಡದೆ ತದುಕಿದ್ದಾರೆ.
ಥಳಿತಕ್ಕೊಳಗಾದ ಚಾಲಕ ಸಿದ್ದೀಕ್ ಮತ್ತು ನಿರ್ವಾಹಕ ಉದಯ್ ಕುಮಾರ್ ಎಂದು ತಿಳಿದು ಬಂದಿದೆ. ಹಲ್ಲೆಯಿಂದ ಉದಯ್ ಕುಮಾರ್ ತೀವ್ರ ಗಾಯಗೊಂಡಿದ್ದಾರೆ.
ಹಿಂದೂ ಹೆಸರು ಹೇಳಿ ಯಾಮಾರಿಸಲು ಯತ್ನ!
ಹೀಗೆ ಬೆನ್ನಟ್ಟಿ ಬಂದ ಆಕ್ರೋಶಿತರ ಬಳಿ ಪಿಕಪ್ ಚಾಲಕ ಹಿಂದೂವಿನ ಹೆಸರೇಳಿದ್ದು, ಡ್ರೈವಿಂಗ್ ಲೈಸೆನ್ಸ್ ಪರಿಶೀಲನೆ ವೇಳೆ ಆತನ ಹೆಸರು ಸಿದ್ದೀಕ್ ಎಂದು ತಿಳಿದಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.
ಗಾಂಜಾ ನಶೆಯ ಶಂಕೆ!
ಚಾಲಕ ಹಾಗೂ ಆತನ ಜೊತೆಗಿದ್ದವನು ಇಬ್ಬರು ಗಾಂಜಾ ನಶೆಯಲ್ಲಿದ್ದರು ಅನ್ನೋದಾಗಿ ಸ್ಥಳೀಯರು ದೂರಿದ್ದಾರೆ. ಆಕ್ರೋಶಿತ ಗುಂಪು ಹಲ್ಲೆ ನಡೆಸಿರುವ ವೀಡಿಯೋ ವೈರಲ್ ಆಗಿದ್ದು, ಗಾಂಜಾ ನಶೆಯಲ್ಲಿ ಚಾಲನೆ ಮಾಡಿ ಹಲವು ಬೈಕ್, ಕಾರುಗಳಿಗೆ ಹಾನಿ ಮಾಡಿದ್ದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆದರೆ, ಪಿಕಪ್ ವಾಹನ ಎಷ್ಟು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಅನ್ನೋ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಗಾಂಜಾ ನಿಯಂತ್ರಣಕ್ಕೆ ಒತ್ತಾಯ
ವೀಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಗಾಂಜಾ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತವಾಗಿದೆ. ಮುಲ್ಕಿ, ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಯುವಕರು ಬಲಿಯಾಗುತ್ತಿದ್ದು, ಗಾಂಜಾ ಪೆಡ್ಲರ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಾಲತಾಣದ ಮೂಲಕ ಪೊಲೀಸರನ್ನು ಒತ್ತಾಯಿಸಿದ್ದಾರೆ.