-->
ಮಂಗಳೂರು ಉತ್ತರ: ಇಬ್ಬರ ನಡುವಿನ ಜಗಳ; ಪ್ರತಿಭಾ ಕುಳಾಯಿಗೆ ಲಾಭ!

ಮಂಗಳೂರು ಉತ್ತರ: ಇಬ್ಬರ ನಡುವಿನ ಜಗಳ; ಪ್ರತಿಭಾ ಕುಳಾಯಿಗೆ ಲಾಭ!

 


ಮಂಗಳೂರು: ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯುವ ಆಕಾಂಕ್ಷಿಗಳಿದ್ದಲ್ಲಿ ತನ್ನ ಉಮೇದುವಾರಿಕೆಯನ್ನು ಪಕ್ಷದ ವೇದಿಕೆಯಲ್ಲಿ ಗುರುತಿಸಿಕೊಳ್ಳಬೇಕು. ಕ್ರಮಬದ್ಧವಾಗಿ ಅರ್ಜಿ ಸಲ್ಲಿಸಬೇಕು. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು (ಉಳ್ಳಾಲ) ಹೊರತಾಗಿ ಮಿಕ್ಕ 7 ಕ್ಷೇತ್ರಗಳಿಗೂ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇನ್ನೇನು ಕೆಲವು ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಸರ್ವೇಯಲ್ಲಿ ಅಭ್ಯರ್ಥಿಯನ್ನು ಫೈನಲ್ ಮಾಡಲಿದೆ. ಅದಕ್ಕಾಗಿ ಈಗಾಗಲೇ ಸರ್ವೇ ಕಾರ್ಯವನ್ನು ಪಕ್ಷದ ವರಿಷ್ಠರು ಆರಂಭಿಸಿದ್ದಾರೆ.

ಮುಂದೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಬಗ್ಗೆ ಡಿಟೇಲ್ ಆಗಿ ‘ದಿ ನ್ಯೂಸ್ ಅವರ್‘ ನಿಮ್ಮ ಮುಂದಿಡಲಿದೆ. ಇದೀಗ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವನ್ನು ನೋಡುವುದಾದರೆ, ಸುರತ್ಕಲ್ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ 8 ಮಂದಿ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಆ ಕ್ಷೇತ್ರದಲ್ಲಿ ಈ ಬಾರಿ ಅಚ್ಚರಿಯ ಆಯ್ಕೆಯಾಗಿ ಪ್ರತಿಭಾ ಕುಳಾಯಿ ಹೆಸರು ಮುಂಚೂಣಿಗೆ ಬಂದಿದೆ. ಅದಕ್ಕೆ ಕಾರಣವೇ ಸಿದ್ದರಾಮಯ್ಯ ಬೆಂಬಲಿಗ ಮೊಯ್ದಿನ್ ಬಾವಾ ಹಾಗೂ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿ ಓಡಾಡುತ್ತಿರುವ ಡಿಕೆಶಿ ಬಂಟ ಇನಾಯತ್ ಅಲಿ ನಡುವಿನ ಮುಸುಕಿನ ಗುದ್ದಾಟ ಎನ್ನಲಾಗುತ್ತಿದೆ.  

ಯಾರೆಲ್ಲ ಆ 8 ಮಂದಿ?

ನಿರೀಕ್ಷೆಯಂತೆ ಮಾಜಿ ಶಾಸಕ ಮೊಯ್ದಿನ್ ಬಾವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಮಹಿಳಾ ನಾಯಕಿ ಪ್ರತಿಭಾ ಕುಳಾಯಿ, ಶಶಿಧರ ಹೆಗಡೆ, ಲುಕ್ಮಾನ್ ಬಂಟ್ವಾಳ, ಕವಿತಾ ಸನಿಲ್, ಅನಿಲ್ ಕುಮಾರ್ ಪೂಜಾರಿ ಹಾಗೂ ಅಲ್ತಾಫ್ ಸುರತ್ಕಲ್ ಅರ್ಜಿ ಸಲ್ಲಿಸಿದ್ದಾರೆ.

ಪ್ರತಿಭಾ ಕುಳಾಯಿಗೆ ಮಣೆ ಹಾಕಲಿದೆ ಕೆಪಿಸಿಸಿ..!?

ಸದ್ಯದ ಸುರತ್ಕಲ್ (ಮಂಗಳೂರು ಉತ್ತರ) ಕ್ಷೇತ್ರದ ಪೊಲಿಟಿಕಲ್ ಟ್ರೆಂಡ್ ನೋಡುವುದಿದ್ದರೆ ಮೊಯ್ದಿನ್ ಬಾವಾ, ಇನಾಯತ್ ಅಲಿ ಟಿಕೆಟ್ ಗಾಗಿ ಕಾದಾಟ ನಡೆಸುತ್ತಿದ್ದಾರೆ. ಪ್ರತಿಭಾ ಕುಳಾಯಿ ತಮ್ಮ ಹೋರಾಟದ ಮೂಲಕ ಪಕ್ಷದ ವರಿಷ್ಠರ ಗಮನ ಸೆಳೆದಿದ್ದಾರೆ. ಅದರಲ್ಲೂ ಟೋಲ್ ವಿರೋಧಿ ಹೋರಾಟದಲ್ಲಿ ಗಟ್ಟಿತನ ಪ್ರದರ್ಶಿಸುತ್ತಾ, ನಿಂದನಾತ್ಮಕ ಪೋಸ್ಟ್ ಮಾಡಿದ ಕಹಳೆಯ ಶ್ಯಾಮ ಸುದರ್ಶನ ಭಟ್ ವಿರುದ್ಧ ಕಾನೂನು ಹೋರಾಟ ನಡೆಸುವ ಮೂಲಕ ಪ್ರತಿಭಾ ಕುಳಾಯಿ ತಾನೋರ್ವ ಗಟ್ಟಿಗಿತ್ತಿ ನಾಯಕಿ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಇನ್ನೊಂದೆಡೆ ಇನಾಯತ್ ಅಲಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಗೆ ವೋಟ್ ಹಾಕಲ್ಲ ಎಂದು ಮೊಯ್ದಿನ್ ಬಾವಾ ಬೆಂಬಲಿಗರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ವೈರಲ್ ಆದ ಆಡಿಯೋವೊಂದು ಅದಕ್ಕೆ ಸಾಕ್ಷ್ಯದಂತಿದೆ.

ಹೀಗಾಗಿ ಇನಾಯತ್ ಅಲಿಗೆ ಟಿಕೆಟ್ ನೀಡಿದರೆ ಬಾವಾ ಬೆಂಬಲಿಗರು, ಬಾವಾಗೆ ಟಿಕೆಟ್ ನೀಡಿದರೆ ಇನಾಯತ್ ಅಲಿ ಬೆಂಬಲಿಗರು ಬಹಿರಂಗವಾಗಿಯೇ ತಿರುಗಿ ಬೀಳುವುದರಲ್ಲಿ ಅಚ್ಚರಿಯಿಲ್ಲ. ಅದಲ್ಲದೇ ಇನಾಯತ್ ಅಲಿಗೆ ಟಿಕೆಟ್ ನೀಡಿದರೆ ಮೊಯ್ದಿನ್ ಬಾವಾ ಜೆಡಿಎಸ್ ನಿಂದ ಸ್ಪರ್ಧಿಸಬಹುದು ಅನ್ನೋ ಮಾತುಗಳು ಕೂಡಾ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅದೇ ವೇಳೆಗೆ ಇವರಿಬ್ಬರಿಗೂ ಪಕ್ಷ ಟಿಕೆಟ್ ನೀಡದೇ, ಮಹಿಳಾ ನಾಯಕಿ ಪ್ರತಿಭಾ ಕುಳಾಯಿಗೆ ಟಿಕೆಟ್ ನೀಡಿದ್ದಲ್ಲಿ ಈ ಎರಡೂ ನಾಯಕರ ಬೆಂಬಲಿಗರು ಅನಿವಾರ್ಯವಾಗಿ ಪ್ರತಿಭಾ ಪರ ಮತಯಾಚನೆ ನಡೆಸಲೇಬೇಕಾಗುತ್ತದೆ. ಅಲ್ಲದೇ, ಮಾಜಿ ಶಾಸಕ ಮೊಯ್ದಿನ್ ಬಾವಾ ಕೂಡಾ ಪಕ್ಷದಲ್ಲೇ ಉಳಿಯಬಹುದು ಮತ್ತು ಪ್ರತಿಭಾ ಬೆಂಬಲಿಸಬಹುದು ಅನ್ನೋ ಲೆಕ್ಕಚಾರವೂ ಕೆಪಿಸಿಸಿ ಮುಂದಿದೆ.

 



ಬಿಲ್ಲವರ ಒಗ್ಗಟ್ಟು ಮಂತ್ರವೂ ಕಾರಣ

‘ದಿ ನ್ಯೂಸ್ ಅವರ್‘ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ನಡೆಸಿದ್ದ ಸಂದರ್ಶನದಲ್ಲಿ ಬಿಲ್ಲವ ಮುಖಂಡ, ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷರೂ ಆದ ಸತ್ಯಜಿತ್ ಸುರತ್ಕಲ್, ಮುಂದೆ ಏನಿದ್ದರೂ ಪಕ್ಷಕ್ಕೂ ಜಾಸ್ತಿ ಸಮಾಜದ ವ್ಯಕ್ತಿ ಮುಖ್ಯ ಅನ್ನೋ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದಾದ ಬಳಿಕ ಸುರತ್ಕಲ್ ಕ್ಷೇತ್ರದ ಸದ್ಯದ ರಾಜಕೀಯ ಟ್ರೆಂಡ್ ಬಗ್ಗೆ ಕಾಂಗ್ರೆಸ್ ನಾಯಕರು ‘ದಿ ನ್ಯೂಸ್ ಅವರ್‘ ಸಂಪರ್ಕಿಸಿದ್ದು, ಮಾಹಿತಿ ಕಲೆ ಹಾಕಿದ್ದಾರೆ. ಹೀಗಾಗಿ ಬಿಲ್ಲವ ಸಮುದಾಯ ಪ್ರತಿನಿಧಿಸುವ ಪ್ರತಿಭಾ ಕುಳಾಯಿಗೆ ಟಿಕೆಟ್ ನೀಡುವ ಮೂಲಕ ಹಾಲಿ ಶಾಸಕ, ಬಂಟ ಸಮುದಾಯದ ಡಾ. ವೈ.ಭರತ್ ಶೆಟ್ಟಿ ಕಟ್ಟಿ ಹಾಕುವ ಪ್ರಯತ್ನವನ್ನೂ ಕಾಂಗ್ರೆಸ್ ಮಾಡುವುದು ನಿಶ್ಚಿತ. ಜೊತೆಗೆ ಅಹಿಂದ ವರ್ಗಗಳ ವೋಟ್ ಕೂಡಾ ಪ್ರತಿಭಾ ಕುಳಾಯಿ ಪರ ಬಹುದೊಡ್ಡ ಸಂಖ್ಯೆಯಲ್ಲಿ ಚಲಾವಣೆ ಆಗುವ ನಿರೀಕ್ಷೆ ಹೊಂದಲಾಗಿದೆ.

ಟೋಲ್ ವಿರೋಧಿ ಹೋರಾಟದ ನಾಯಕತ್ವ

ಹೌದು, ಟೋಲ್ ಗೇಟ್ ವಿರೋಧಿ ಹೋರಾಟದಲ್ಲಿ ಮುಂಚೂಣಿ ನಾಯಕತ್ವ ಕಂಡು ಬಂದವರಲ್ಲಿ ಪ್ರತಿಭಾ ಕುಳಾಯಿ ಕೂಡಾ ಒಬ್ಬರು. ಅದರಲ್ಲೂ ಅಕ್ಟೋಬರ್ 18 ರಂದು ನಡೆದ ಹೋರಾಟದಲ್ಲಂತೂ ಪ್ರತಿಭಾ ಕುಳಾಯಿ ಇಡೀ ಹೋರಾಟದ ಗಮನ ಸೆಳೆದಿದ್ದರು. ಪೊಲೀಸರು ಬಂಧಿಸಲು ಮುಂದಾದಾಗ ತೋರಿದ ಪ್ರತಿಭಟನೆ, ಅವರಲ್ಲಿನ ಹೋರಾಟದ ಕಿಚ್ಚು ತೋರಿಸುವಂತಿತ್ತು. ಆ ಬಳಿಕ ಶ್ಯಾಮ್ ಸುದರ್ಶನ್ ಭಟ್ ಮಾಡಿದ್ದ ಅಶ್ಲೀಲ ಕಾಮೆಂಟ್ ವಿರುದ್ಧವೂ ಪ್ರತಿಭಾ ಕುಳಾಯಿ ಎಲ್ಲಿಯೂ ರಾಜಿಯಿಲ್ಲದೇ ಹೋರಾಟ ನಡೆಸಿದ್ದರು. ಜಾಲತಾಣದಲ್ಲಿ ಅಪಾರ ಬೆಂಬಲವೂ ಸಿಕ್ಕಿತ್ತು. ಇದೆಲ್ಲವೂ ಕಾಂಗ್ರೆಸ್ ವರಿಷ್ಠರ ಅಂಗಳ ತಲುಪಿದೆ. 

ಮುಲ್ಕಿ-ಮೂಡಬಿದ್ರಿಗೂ ಅರ್ಜಿ

ಇನ್ನೊಂದೆಡೆ ಬಿಲ್ಲವರು ಹೆಚ್ಚಿರುವ ಮುಲ್ಕಿ-ಮೂಡಬಿದ್ರಿ ಕ್ಷೇತ್ರದಲ್ಲೂ ಟಿಕೆಟ್ ಆಕಾಂಕ್ಷಿಯಾಗಿ ಪ್ರತಿಭಾ ಕುಳಾಯಿ ಅರ್ಜಿ ಹಾಕಿದ್ದಾರೆ. ಆದರೆ, ಇಲ್ಲಿ ಬಹುತೇಕ ಮಿಥುನ್ ರೈ ಅವರಿಗೆ ಟಿಕೆಟ್ ಕನ್ಫರ್ಮ್ ಅನ್ನೋದು ತಿಳಿದಿದೆ. ಇನ್ನು ಸುರತ್ಕಲ್ ಕ್ಷೇತ್ರದಲ್ಲಿ ಪ್ರತಿಭಾ ಕುಳಾಯಿಗೆ ಟಿಕೆಟ್ ನೀಡಿದರೆ ಪುತ್ತೂರಿನಲ್ಲಿ ಈ ಬಾರಿ ಶಕು ಅಕ್ಕ ಟಿಕೆಟ್ ಕಳೆದುಕೊಂಡರೂ ಅಚ್ಚರಿಯಿಲ್ಲ.

ಒಟ್ಟಿನಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಪಕ್ಷದ ಆಂತರಿಕ ಕಚ್ಚಾಟ ತಪ್ಪಿಸಲು ಪ್ರತಿಭಾ ಕುಳಾಯಿಗೆ ಪಕ್ಷವು ಮಣೆ ಹಾಕಲಿದೆ ಎನ್ನಲಾಗುತ್ತಿದೆ. ಅದಾಗ್ಯೂ, ಕೊನೆ ಕ್ಷಣದಲ್ಲಿ ಸಿದ್ದು ಅಥವಾ ಡಿಕೆಶಿ ಆಯ್ಕೆ ಎಂದು ಬಂದರೆ ಮೊಯ್ದಿನ್ ಬಾವಾ ಅಥವಾ ಇನಾಯತ್ ಅಲಿ ಆಯ್ಕೆಯಾದರೂ ಅಚ್ಚರಿಯಿಲ್ಲ. ಹಾಗಾದರೆ ಮಾತ್ರ ಕಾಂಗ್ರೆಸ್ ಸೋಲು, ಗೆಲುವಿನ ಬಗ್ಗೆ ಚರ್ಚೆಗಳು ಆರಂಭವಾಗಲಿದೆ.  

Ads on article

Advertise in articles 1

advertising articles 2

Advertise under the article