ಮಂಗಳೂರು: ನಂತೂರು ಅನೈತಿಕ ಪೊಲೀಸ್ ಗಿರಿ ಪ್ರಕರಣ: ಭಜರಂಗದಳದ ಮೂವರು ಅರೆಸ್ಟ್
ಮಂಗಳೂರು:
ಮಂಗಳೂರು ನಗರದ ನಂತೂರು ಸರ್ಕಲ್ ಬಳಿ ಗುರುವಾರ ಸಂಜೆ ನಡೆದಿದ್ದ ಅನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ
ಮೂವರು ಆರೋಪಿಗಳನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್
ನಿವಾಸಿಗಳಾದ ಮುತ್ತು (18), ಪ್ರಕಾಶ್ (21) ಹಾಗೂ ಅಸೈಗೋಳಿ ನಿವಾಸಿ ರಾಕೇಶ್ (23) ಬಂಧಿತರು. ಈ
ಮೂವರು ಆರೋಪಿಗಳು ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ವಿವರ: ನವೆಂಬರ್ 24 ರಂದು ಸಂಜೆ ಕಾರ್ಕಳದ ನಿಟ್ಟೆಯಿಂದ
ತನ್ನ ಸಹಪಾಠಿ ಜೊತೆಗೆ ಆಗಮಿಸುತ್ತಿದ್ದ ಜೆಪ್ಪು ನಿವಾಸಿ ಸೈಯದ್ ರಶೀಮ್ ನನ್ನು ನಂತೂರು ಸರ್ಕಲ್ ಬಳಿ
ಏಕಾಏಕಿ ಬಸ್ ಗೆ ನುಗ್ಗಿ ಬಂದ ಅಪರಿಚಿತ ಯುವಕರು ಐಡಿ ಕಾರ್ಡ್ ತೋರಿಸಲು ಹೇಳಿ ಬಳಿಕ ಬಸ್ ನಿಂದ ಕೆಳಗೆ
ಎಳೆದು ಹಲ್ಲೆ ನಡೆಸಿದ್ದಾರೆ. ಆತನ ಜೊತೆಗಿದ್ದ ಭಿನ್ನಕೋಮಿನ ಯುವತಿಯನ್ನೂ ತರಾಟೆಗೆ ತೆಗೆದುಕೊಂಡಿದ್ದರು.
ಈ ಸಮಯದಲ್ಲಿ ಆರೋಪಿಗಳು ದೊಣ್ಣೆ ಹಾಗೂ ಬೆತ್ತದಿಂದ ಹಲ್ಲೆ ನಡೆಸಿದ್ದಾಗಿ ಹಲ್ಲೆಗೊಳಗಾದ ಯುವಕ ಸೈಯದ್
ರಶೀಮ್ ಕದ್ರಿ ಠಾಣೆಗೆ ದೂರು ನೀಡಿದ್ದರು.
ಸೈಯ್ಯದ್ ರಶೀಮ್
ಹಾಗೂ ಯುವತಿ ನಿಟ್ಟೆ ಕಾಲೇಜಿನ ಬಿಇ ಕ್ಲಾಸ್ ಮೇಟ್ ಗಳೆಂದು ತಿಳಿದು ಬಂದಿದೆ. ಅಕ್ಟೋಬರ್ ತಿಂಗಳಿನಲ್ಲಿಯೂ
ಭಿನ್ನ ಕೋಮಿನ ಯುವತಿ ಜೊತೆಗೆ ಬೆಂಗಳೂರಿಗೆ ತೆರಳುತ್ತಿದ್ದ ಮುಸ್ಲಿಮ್ ಯುವಕನೋರ್ವನನ್ನು ಬಸ್ ನಿಂದ
ಕೆಳಗಿಳಿಸಿ ಭಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದರು.
ನಂತೂರಿನ ಸೈಯ್ಯದ್
ರಶೀಮ್ ಮೇಲಿನ ಹಲ್ಲೆ ಪ್ರಕರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಡಿಜಿಪಿ ಅಲೋಕ್ ಕುಮಾರ್
ಟ್ವೀಟ್ ಮೂಲಕ ತಿಳಿಸಿದ್ದರು.