
ಟೋಲ್ ಹೋರಾಟದ ಜೊತೆ ನಿಲ್ಲುವುದು ನ್ಯಾಯವಾದಿಗಳ ಕರ್ತವ್ಯ: ಎಸ್.ಪಿ. ಚಂಗಪ್ಪ
ಮಂಗಳೂರು: ಟೋಲ್ ಗೇಟ್ ವಿರುದ್ದ ನಡೆಯುತ್ತಿರುವ ಹೋರಾಟ ನಾಡಿನ ಎಲ್ಲಾ ಜನರನ್ನು ಸೆಳೆದಂತೆ ವಕೀಲರಾದ ನಮ್ಮನ್ನೂ ಆಕರ್ಷಿಸಿದೆ. ನ್ಯಾಯಾಲಯದ ಜವಾಬ್ದಾರಿಗಳಿಂದಾಗಿ ಇಡೀ ದಿನ ಹೋರಾಟದ ಜೊತೆ ಇರಲಾಗುತ್ತಿಲ್ಲ. ಆದರೆ ಹೋರಾಟಗಾರರಿಗೆ ವ್ಯವಸ್ಥೆಯಿಂದ ಕಾನೂನಿನ ತೊಂದರೆ ಆದರೆ ನಾವೆಲ್ಲ ತಕ್ಷಣ ಧಾವಿಸಿ ಬರುತ್ತೇವೆ. ಟೋಲ್ ಗೇಟ್ ಸುಲಿಗೆ ವಿರುದ್ದದ ಈ ಹೋರಾಟ ಗೆಲ್ಲಲೇಬೇಕು. ಕರಾವಳಿ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಈ ಹೋರಾಟದ ಗೆಲುವಿನಲ್ಲಿ ಉತ್ತರ ಇದೆ ಎಂದು ಹಿರಿಯ ನ್ಯಾಯವಾದಿ ಎಸ್ ಪಿ ಚಂಗಪ್ಪ ಹೇಳಿದರು. ಅವರು ಸುರತ್ಕಲ್ ಟೋಲ್ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯ ಐದನೇ ದಿನದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಧರಣಿಯ ಐದನೇ ದಿನವಾದ ಇಂದು ಅತಿ ಹೆಚ್ಚು ಸಂಖ್ಯೆಯಲ್ಲಿ ಜನ ಭಾಗವಹಿಸುವ ಮೂಲಕ ಜನಾಕರ್ಷಣೆಯ ಕೇಂದ್ರವಾಗಿ ಪರಿವರ್ತನೆಗೊಂಡಿತು. ಬೆಳಿಗ್ಗೆ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಡೆದ ಧ್ವಜಾರೋಹಣವನ್ನು ಹಿರಿಯ ದಲಿತ ನಾಯಕ ಎಂ ದೇವದಾಸ್ ನೆರವೇರಿಸಿದರು. ಬೆಳಿಗ್ಗೆಯ ಧರಣಿಯಲ್ಲಿ ಉಡುಪಿ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಯೂನಿಯನ್ ನವರು, ಬಂಟ್ವಾಳ ಸಮಾನ ಮನಸ್ಕ ಸಂಘಟನೆಯ ಸದಸ್ಯರುಗಳು ಕೈ ಜೋಡಿಸಿದರು. ಮಧ್ಯಾಹ್ನ ಜನಪರ ವಕೀಲರ ಗುಂಪು, ಎಸ್ಎಫ್ಐ, ಡಿವೈಎಫ್ಐ ಕಾರ್ಯಕರ್ತರು ಭಾಗಿಗಳಾದರು. ನಾಲ್ಕು ಗಂಟೆಗೆ ಟೋಲ್ ಗೇಟ್ ಕವಿತೆಗಳು ಕವಿಗೋಷ್ಟಿ ಜರುಗಿತು. ಕವಿಗಳು ಟೋಲ್ ಗೇಟ್ ಮೇಲೆ ಓದಿದ ವಿಡಂಬನಾತ್ಮಕ ಕವಿತೆಗಳು ಗಮನ ಸೆಳೆದವು. ರಂಗ ಕಲಾವಿದರಾದ ಮೇಘನಾ ಮತ್ತು ಬಳಗದವರು ರಂಗಗೀತೆಗಳನ್ನು ಹಾಡಿ ಪ್ರತಿಭಟನೆಯ ಕಾವು ಹೆಚ್ಚಿಸಿದರು. ಡಿವೈಎಫ್ಐ ಸಂಗಾತಿಗಳು ತಂಡಗಳಾಗಿ ಕ್ರಾಂತಿಗೀತೆಗಳನ್ನು ಹಾಡಿದರು.
ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಅಭಯ ಚಂದ್ರ ಜೈನ್, ಮೊಯ್ದಿನ್ ಬಾವಾ, ಟ್ಯಾಕ್ಸಿ ಯೂನಿಯನ್ ಮುಂದಾಳು ರಮೇಶ್ ಕೋಟ್ಯಾನ್, ಬಂಟ್ವಾಳ ಸಮಾನ ಮನಸ್ಕರ ವೇದಿಕೆಯ ರಾಜಾ ಚಂಡ್ತಿಮಾರ್, ಬಿ ಶೇಖರ್, ಅಬ್ಬಾಸ್ ಅಲಿ, ಡಿವೈಎಫ್ಐ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ದಯಾನಂದ ಶೆಟ್ಟಿ, ವಿನಿತ್ ದೇವಾಡಿಗ, ಹೋರಾಟ ಸಮಿತಿಯ ರಾಘವೇಂದ್ರ ರಾವ್, ಎಮ್ ಜಿ ಹೆಗ್ಡೆ, ಮೂಸಬ್ಬ ಪಕ್ಷಿಕೆರೆ, ಹಿರಿಯ ವಕೀಲರುಗಳಾದ ಬಿ ಇಬ್ರಾಹಿಂ, ಯಶವಂತ ಮರೋಳಿ, ಟಿ ನಾರಾಯಣ ಪೂಜಾರಿ, ವಸಂತ ಕಾರಂದೂರು, ಖ್ಯಾತ ಕವಿಗಳಾದ ಮುಹಮ್ಮದ್ ಬಡ್ಡೂರು, ವಿಲ್ಸನ್ ಕಟೀಲ್, ನವೀನ್ ಪಿರೇರಾ, ಸಂವರ್ಥ ಸಾಹಿಲ್ ಸಹಿತ ವಿವಿಧ ಸಂಘಟನೆಗಳ ಹಲವು ಪದಾಧಿಕಾರಿಗಳು ಹಾಜರಿದ್ದರು.