
ಉಚ್ಚಿಲದ ಬ್ಲೂ ವೇವ್ಸ್ ಅಪಾರ್ಟ್ಮೆಂಟ್ ಕರ್ಮಕಾಂಡ; ರೊಚ್ಚಿಗೆದ್ದ ಫ್ಲ್ಯಾಟ್ ನಿವಾಸಿಗಳು
ಉಡುಪಿ: ಕಳೆದ ಕೆಲವು ತಿಂಗಳಿನಿಂದ ಉಚ್ಚಿಲ ನಗರದಲ್ಲಿರುವ ಬ್ಲೂ ವೇವ್ಸ್ ಅಪಾರ್ಟ್ಮೆಂಟ್ ನಲ್ಲಿ ಹಲವಾರು ರೀತಿಯ ಸಮಸ್ಯೆ ಇದ್ದರೂ ವಸತಿ ಸಂಕೀರ್ಣದ ಮಾಲೀಕರು ಯಾವುದೇ ರೀತಿಯ ಸ್ಪಂದನೆ ನೀಡದಿರುವುದರಿಂದ ಫ್ಲ್ಯಾಟ್ ನಿವಾಸಿಗಳು ಗರಂ ಆಗಿದ್ದಾರೆ.
ಫ್ಲ್ಯಾಟ್ ನಲ್ಲಿ ಕೆಲವರು ಬಾಡಿಗೆಗಿದ್ದು, ಇನ್ನು ಕೆಲವರು ಸ್ವಂತಕ್ಕೆ ಪಡೆದುಕೊಂಡಿದ್ದಾರೆ. ಕಸ ವಿಲೇವಾರಿ ಮಾಡದಿರುವುದು, ನೀರಿನ ಜೊತೆ ಡ್ರೈನೇಜ್ ನೀರು ಮಿಶ್ರಿತವಾಗಿ ಬರುತ್ತಿದ್ದು ಅಲ್ಲಿರುವ ಹಿರಿಯರು, ಮಕ್ಕಳು ವಾಂತಿ ಬೇಧಿಗೆ ಒಳಗಾಗುತ್ತಿರುವುದಾಗಿ ಅಲ್ಲಿನ ನಿವಾಸಿಗಳು ದೂರಿದ್ದಾರೆ. ಪಾರ್ಕಿಂಗ್ ಏರಿಯಾದಲ್ಲಂತೂ ವಿಪರೀತ ಕಸಕಡ್ಡಿ ತುಂಬಿಕೊಂಡಿದ್ದು, ಸತ್ತ ಪ್ರಾಣಿಗಳು, ಕೊಳಕು ನೀರಿನಿಂದ ತುಂಬಿಕೊಂಡಿದೆ. ಇದೆಲ್ಲವೂ ರೋಗ ರುಜಿನಗಳಿಗೆ ಕಾರಣವಾಗುವ ಆತಂಕ ಎದುರಾಗಿದೆ.
ವಸತಿ ಸಂಕೀರ್ಣದಲ್ಲಿ ಮನೆಗಳಲ್ಲದೇ ಇನ್ನಿತರ ವಾಣಿಜ್ಯ ಮಳಿಗೆಗಳೂ ಇವೆ. ವಸತಿ ಸಂಕೀರ್ಣಕ್ಕೆ ಐವರು ಮಾಲಿಕರು ಇದ್ದು ಇವರ‌್ಯಾರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.
ಸಾಲ ಮಾಡಿ ಮನೆ ಮಾಡಿಕೊಂಡವರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಫೋನ್ ಕರೆಗೂ ಸ್ಪಂದಿಸದ ಕಟ್ಟಡ ಮಾಲೀಕರಿಗೆ ಮಾಧ್ಯಮಗಳಿಂದಾಗಿ ವಿಷಯ ತಿಳಿಯಲಿ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.