
ಕನ್ನಡ ರಾಜ್ಯೋತ್ಸವ | ಕರಾವಳಿಯಲ್ಲಿ 'ಕರಾಳ ದಿನ' ಆಚರಿಸಿದ ತುಳು ಹೋರಾಟಗಾರರು!
ಮಂಗಳೂರು: ತುಳು ಭಾಷೆಗೆ ರಾಜ್ಯದಲ್ಲಿ ಅಧಿಕೃತ ಸ್ಥಾನಮಾನ, ಪ್ರತ್ಯೇಕ ತುಳು ರಾಜ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನಿರಿಸಿ ಹಲವು ಹೋರಾಟಗಳು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ನಡೆದುಕೊಂಡು ಬಂದಿದೆ. ಈ ಹಿಂದೆ ತುಳುವನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಬೇಕೆನ್ನುವ ಕೂಗು ಹಲವು ಜನಪ್ರತಿನಿಧಿಗಳಿಂದಲೂ ಕೇಳಿ ಬಂದಿತ್ತು. ಇದೀಗ ತುಳು ಭಾಷೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಯುವಕರು ಕರ್ನಾಟಕ ರಾಜ್ಯೋತ್ಸವ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಿದ್ದಾರೆ.
ಸುನಿಲ್ ಕುಮಾರ್ ವಿರುದ್ಧ ಆಕ್ಷೇಪ
ಕಾರ್ಕಳ ಶಾಸಕ, ಸಚಿವ ವಿ. ಸುನಿಲ್ ಕುಮಾರ್ ತುಳುವನಾದರೂ ತುಳು ಭಾಷೆಗಾಗಿ ಏನನ್ನೂ ಮಾಡುತ್ತಿಲ್ಲ ಎಂದು ಕೆಲವು ತುಳು ಪರ ಹೋರಾಟಗಾರರು ದೂರಿದ್ದಾರೆ. ಅದರಲ್ಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಬಳಿಕ ಕನ್ನಡಕ್ಕೆ ಆದ್ಯತೆ ನೀಡುತ್ತಿದ್ದು, ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಿ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ನೀಡುತ್ತಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರಾಳ ದಿನಕ್ಕೆ ನೀರಸ ಪ್ರತಿಕ್ರಿಯೆ
ಸಾಮಾಜಿಕ ಜಾಲತಾಣಗಳಲ್ಲೇ ತುಸು ಜೋರಾಗಿ ನಡೆಯುತ್ತಿರುವ ಕರಾಳ ದಿನಾಚರಣೆಗೆ ಹೆಚ್ಚಿನ ಬೆಂಬಲ ಸಿಕ್ಕಿಲ್ಲ. ಈ ಹಿಂದೆ ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ನಡೆದಿದ್ದ ಪ್ರತಿಭಟನೆ ವೇಳೆಯೂ ನವೆಂಬರ್ 1 ರಂದು ಕರಾಳ ದಿನವನ್ನಾಗಿ ಆಚರಿಸುವುದಾಗಿ ಕೆಲವರು ಹೇಳಿಕೊಂಡಿದ್ದರು. ಆದರೆ ಜಾಲತಾಣದ ಹೊರತಾಗಿ ಯಾವುದೇ ರೀತಿಯ ಬಹಿರಂಗ ಆಚರಣೆ ಕಂಡು ಬಂದಿಲ್ಲ. ಅಲ್ಲದೇ, ತುಳು ಪರ ಹೋರಾಟಗಾರರ ಬೇಡಿಕೆಯನ್ನು ಬೆಂಬಲಿಸುತ್ತಿರುವ ಬಹುತೇಕರು, ಕರಾಳ ದಿನವನ್ನು ಬೆಂಬಲಿಸುತ್ತಿಲ್ಲ ಎನ್ನುವುದು ಗಮನಾರ್ಹ.
ಕನ್ನಡ-ತುಳು ಎರಡು ಕಣ್ಣುಗಳಿದ್ದಂತೆ
ತುಳುನಾಡ ಅಭಿವೃದ್ಧಿಗೆ ತುಳು, ಕನ್ನಡ ಎರಡೂ ಭಾಷೆಗಳು ಕಣ್ಣುಗಳಿದ್ದಂತೆ. ಉಳಿದಂತೆ ಅರೆಭಾಷೆ, ಬ್ಯಾರಿ, ಕೊಂಕಣಿ, ಮಲಾಮೆ, ಮಲಯಾಳಂ ಭಾಷೆಗಳು ವಿವಿಧ ಅಂಗಗಳಿದ್ದಂತೆ ಎಂದು ಹಿರಿಯರ ಅಭಿಪ್ರಾಯವಾಗಿದೆ. ಹೀಗಾಗಿ ಪ್ರತ್ಯೇಕ ತುಳು ರಾಜ್ಯದ ಕೂಗು ಸೀಮಿತ ಜನರ ಬೇಡಿಕೆ ಅನ್ನೋ ಮಾತು ಕೇಳಿ ಬರುತ್ತಿದೆ.