
ಬೈಂದೂರು: ಬೃಹತ್ ಉದ್ಯೋಗ ಮೇಳ; ಸಾವಿರಾರು ವಿದ್ಯಾರ್ಥಿಗಳ ಆಯ್ಕೆ
ಉಡುಪಿ: ನಿರುದ್ಯೋಗ ಸಮಸ್ಯೆ ಭಾರತದ ದೊಡ್ಡ ಸಮಸ್ಯೆಗಳಲ್ಲಿ ಒಂದು. ಹಳ್ಳಿ ಪ್ರದೇಶಗಳಲ್ಲಿ ಸಾವಿರಾರು ಮಂದಿ ಪದವಿದರ ವಿದ್ಯಾರ್ಥಿಗಳು, ಉದ್ಯೋಗ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಉಡುಪಿಯ ಬೈಂದೂರಿನ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ, ತನ್ನೂರಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಿದರು.
ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ವತಿಯಿಂದ ಆಯೋಜಿಸಲಾದ ಉದ್ಯೋಗ ಮೇಳಕ್ಕೆ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಸಾಗರೋಪಾದಿಯಲ್ಲಿ ಹರಿದು ಬಂದರು.
ಉಪ್ಪುಂದದ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ನಂದನವನ ಹೊಟೇಲ್‌ನ ಪ್ರಜ್ಞಾ ಸಾಗರ್ ಹಾಲ್‌ನಲ್ಲಿ ಆಯೋಜಿಸಲಾದ ಉದ್ಯೋಗ ಮೇಳದಲ್ಲಿ ಪಿಯುಸಿ ಉತ್ತೀರ್ಣರಾದವರು, ಪದವಿ, ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವವರು ಭಾಗವಹಿಸಿ ಇದರ ಪ್ರಯೋಜನ ಪಡೆದರು.
ವಿಶೇಷವಾಗಿ 100ರಿಂದ 150 ಮಂದಿ ಅರ್ಹ ಮಹಿಳೆಯರಿಗೆ 'ವರ್ಕ್ ಫ್ರಮ್ ಹೋಮ್' ಆಧಾರದಲ್ಲಿ ಉದ್ಯೋಗ ನೀಡುವ ಕಂಪೆನಿಗಳು ಭಾಗವಹಿಸಿದ್ದು, ಮನೆಯಲ್ಲೇ ಕುಳಿತು ಕೆಲಸ ಮಾಡಲು ಅವಕಾಶವು ಕೂಡ ಉದ್ಯೋಗ ಮೇಳದಿಂದ ಲಭ್ಯವಾಗಿದೆ. ಉದ್ಯೋಗ ಮೇಳದಲ್ಲಿ ದೇಶದ ಹಲವು ಪ್ರತಿಷ್ಠಿತ ಕಂಪೆನಿಗಳು ಸೇರಿದಂತೆ 32ಕ್ಕೂ ಅಧಿಕ ಕಂಪೆನಿಗಳು ಇದರಲ್ಲಿ ಭಾಗವಹಿಸಿದ್ದವು. 3,500ಕ್ಕೂ ಅಧಿಕ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಇಂಟರ್ ವ್ಯೂ ನಡೆಯಿತು.