ಬಯಲು ಸೀಮೆಯಲ್ಲೂ ತುಳುನಾಡ ಅಜ್ಜನ ಕಾರಣಿಕ; ಅಲ್ಲೂ ಇದೆ ನೋಡಿ ದೈವಸ್ಥಾನ!
ಹಾವೇರಿ: ಸ್ವಾಮಿ ಕೊರಗಜ್ಜ ತುಳುನಾಡಿನ ಮಟ್ಟಿಗೆ ಎಲ್ಲರಿಗೂ ಗೊತ್ತಿರುವ ದೈವ. ಸಂಕಷ್ಟ ಅಂತಾ ಬಂದಾಗ ಕೊರಗಜ್ಜ ಮೊರೆ ಹೋಗುವವರ ಸಂಖ್ಯೆಯೇ ಜಾಸ್ತಿ. ತುಳುನಾಡಿನಲ್ಲಿ ದೇವರಿಗಿಂತಲೂ ದೈವಗಳಿಗೆ ಹೆಚ್ಚಿನ ಸ್ಥಾನಮಾನವಿದೆ ಎಂದು ಹಿರಿಯರು ಹೇಳುತ್ತಾರೆ. ತುಳುನಾಡನ್ನು ಬಿಟ್ಟು ಇಲ್ಲಿನ ದೈವಗಳು ಘಟ್ಟ ದಾಟಿ ಹೋದದ್ದಿಲ್ಲ. ಆದರೆ ಹಾವೇರಿಯಲ್ಲಿ ನಡೆದಿರುವ ಘಟನೆಯೊಂದು ಅಚ್ಚರಿಗೆ ಕಾರಣವಾಗಿದೆ. ಮಾತ್ರವಲ್ಲದೇ ಸ್ವಾಮಿ ಕೊರಗಜ್ಜನ ಕಾರಣಿಕಕ್ಕೂ ನಿದರ್ಶನವಾಗಿದೆ.
ಬಯಲು ಸೀಮೆಯಲ್ಲಿ ಕೊರಗಜ್ಜ ದೈವಸ್ಥಾನ!
ನಿಜ, ಕೊರಗಜ್ಜ ದೈವ ಘಟ್ಟ ದಾಟಿ ಹೋಗಿರೋದರ ಹಿಂದೆ ಒಂದು ಕಥೆಯೇ ಇದೆ. ಸದ್ಯ ಕೊರಗಜ್ಜ ನೆಲೆ ನಿಂತಿದ್ದು ಹಾವೇರಿ ಜಿಲ್ಲೆಯ ಕರಿಮತ್ತಿಹಳ್ಳಿ ಗ್ರಾಮದ ಫಕ್ಕಿರೇಶ್ ಎಂಬುವವರ ಹೊಲದಲ್ಲಿ ಕಲ್ಲಿನ ರೂಪದಲ್ಲಿ. ಇತ್ತೀಚೆಗಷ್ಟೇ ಅದನ್ನ ಜೀರ್ಣೋದ್ಧಾರ ಮಾಡಿ ಸಾರ್ವಜನಿಕರಿಗೂ ಅನುಕೂಲವಾಗುವಂತೆ ದೈವಸ್ಥಾನ ನಿರ್ಮಿಸಲಾಗಿದೆ. ಅಲ್ಲೂ ನೂರಾರು ಭಕ್ತರು ಆಗಮಿಸಿ ಶೇಂದಿ, ವೀಳ್ಯ, ಚಕ್ಕುಲಿಗಳನ್ನು ಇರಿಸಿ ತಮ್ಮ ಹರಕೆ ತೀರಿಸುತ್ತಾರೆ.
ಕೊರಗಜ್ಜ ಬಯಲು ಸೀಮೆಗೆ ಹೋದ ಕಥೆ!
ಫಕ್ಕಿರೇಶ್ ಹೊಲದಲ್ಲಿ ನೆಲೆಸಿರುವ ಸ್ವಾಮಿ ಕೊರಗಜ್ಜ, "ತುಳುನಾಡಿನ ಕಾರಣಿಕ ದೈವ ಇಲ್ಲಿಗೆ ಬಂದಿದ್ದೇಗೆ" ಎಂದು ಫಕ್ಕಿರೇಶ್ ಅವರನ್ನು ಕೇಳಿದಾಗ, ಅವರು ಅದರ ಹಿಂದಿನ ಕಥೆಯನ್ನ ಹೀಗೆ ಹೇಳ್ತಾರೆ. ಕೆಲವು ವರ್ಷಗಳ ಹಿಂದೆ ದೇರಳಕಟ್ಟೆಯಲ್ಲಿರುವ ಯೇನೆಪೋಯಾ ಆಸ್ಪತ್ರೆಗೆ ಫಕ್ಕಿರೇಶ್ ಬಂದಿದ್ದರು. ತಮ್ಮ ಕುಟುಂಬಿಕರನ್ನು ಅಡ್ಮಿಟ್ ಮಾಡಿದ್ದ ಅವರು ರಾತ್ರಿ ವೇಳೆ ಅಲೆದಾಡುತ್ತಾ ಸಮಾಧಿ ರೀತಿ ಕಂಡ ಸ್ಥಳದಲ್ಲಿ ಹೋಗಿ ಮಲಗಿದ್ದಾರೆ. ಹೀಗೆ ಮಲಗಿದ್ದ ಫಕ್ಕಿರೇಶ್ ಅವರಿಗೆ ಕನಸಲ್ಲಿ ಅಜ್ಜನ ದರ್ಶನವಾಯಿತಂತೆ. ಇದೆಲ್ಲವೂ ಹೊಸ ಅನುಭವವಾದ್ದರಿಂದ ಅವರು ಅಲ್ಲಿನ ಸ್ಥಳೀಯರಿಗೆ ವಿಚಾರಿಸಿದಾಗ, ಅವರು ಮಲಗಿದ್ದು ಕುತ್ತಾರಿನ ಕೊರಗಜ್ಜನ ಮೂಲಸ್ಥಾನ ಎಂದು ಗೊತ್ತಾಗಿದೆ. ಹಾಗೆಯೇ ಅಲ್ಲಿನ ಕಾರಣಿಕ ತಿಳಿದು ಬಳಿಕ ತಪ್ಪು ಕಾಣಿಕೆ ಹಾಕಿದ್ದ ಫಕ್ಕಿರೇಶ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆದವರು ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿದ್ದರು. ಅದರಂತೆಯೇ ಶೀಘ್ರವೇ ಗುಣಮುಖರಾಗಿ ಅವರು ಊರಿಗೆ ಹೋಗುತ್ತಲೇ ಕೊರಗಜ್ಜನ ಆಶೀರ್ವಾದ ಪಡೆದು ಕರಿಗಂಧ ಪ್ರಸಾದ ಕೊಂಡೊಯ್ದಿದ್ದರು.
ಊರಲ್ಲೂ ಕಾಣಿಸಿಕೊಂಡ ಅಜ್ಜ!
ಹಾವೇರಿಗೆ ಹೋದ ಮೇಲೆ ಅಲ್ಲಿ ಇನ್ನೊಂದು ವಿಚಿತ್ರ ಘಟನೆ ನಡೆಯಿತು. ಮತ್ತೆ ಮತ್ತೆ ಕನಸಲ್ಲಿ ಕಲ್ಲೊಂದು ಕಾಣಿಸತೊಡಗಿತು. ಎಷ್ಟೋ ರಾತ್ರಿ ಅವರಿಗೆ ನಿದ್ದೆಯೇ ಇರಲಿಲ್ಲ. ಆಮೇಲೆ ಮತ್ತೆ ಮಂಗಳೂರಿನ ಕುತ್ತಾರಿನಲ್ಲಿರುವ ಕೊರಗಜ್ಜನ ಮೂಲಸ್ಥಾನದಲ್ಲಿ ಪ್ರಶ್ನೆ ಇಟ್ಟಾಗ ಆ ಕಲ್ಲಿನಲ್ಲಿ ಕೊರಗಜ್ಜನ ಆವಾಸವಿದೆ ಎಂದಿದ್ದರಂತೆ. ಆ ಕಲ್ಲನ್ನ ಫಕ್ಕಿರೇಶ್ ಪೂರ್ವಜರು ನಂಬಿದ್ದಾಗಿ ತಿಳಿಸಿದ್ದರಂತೆ. ಹೀಗೆ ಅಂದಿನಿಂದ ಫಕ್ಕಿರೇಶ್ ಮನೆಯವರು ಆ ಕಲ್ಲನ್ನು ಪ್ರತಿಷ್ಠಾಪಿಸಿ ನಂಬಿಕೊಂಡು ಬಂದಿದ್ದಾರೆ. ಈಗ ದೈವಸ್ಥಾನವೂ ಕಟ್ಟಲಾಗಿದ್ದು, ದಿನನಿತ್ಯ ನೂರಾರು ಜನ ಬಂದು ಕೈ ಮುಗಿದು ಕರಿಗಂಧ ಪ್ರಸಾದ ಪಡೆಯುತ್ತಾರೆ.
ಅಜ್ಜನ ದರ್ಶನದ ಸಮಯ!
ಇದೀಗ ಪ್ರತಿ ದಿನ ಬೆಳಿಗ್ಗೆ 9 ರಿಂದ 6 ಗಂಟೆಯವರೆಗೆ ಅಜ್ಜನ ದರ್ಶನ, ಪ್ರಶ್ನಾಚಿಂತನೆ ಇತ್ಯಾದಿಗಳು ನಡೆಯುತ್ತಿವೆ. ಭಕ್ತರು ಸುತ್ತಮುತ್ತಲಿನ ಹಳ್ಳಿಯಿಂದ ಆಗಮಿಸಿ ದೈವಕ್ಕೆ ವೀಳ್ಯದೆಲೆ, ಚಕ್ಕುಲಿ ಇತ್ಯಾದಿಗಳನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಾರೆ. ಈ ಮೂಲಕ ಭಕ್ತರು ಕೂಡಾ ತುಳುನಾಡಿನ ಕಾರಣಿಕ ದೈವವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.
ಉಡುಪಿ ಮೂಲದವರಿಂದ ಕೋಲ
ಸದ್ಯ ಕೊರಗಜ್ಜ ದೈವದ ಚಾಕರಿಯನ್ನು ತುಳುನಾಡಿನ ದೈವಪಾತ್ರಿಗಳು ಹೇಳಿದಂತೆ ಫಕ್ಕಿರೇಶ್ ಕುಟುಂಬವು ಮಾಡುತ್ತಿದೆ. ಕೋಲ ಇತ್ಯಾದಿ ಬಹುಮುಖ್ಯ ಸೇವೆಗಳನ್ನು ಮಾತ್ರ ಉಡುಪಿ ಮೂಲದ ದೈವ ನರ್ತಕ ಸಮುದಾಯವೊಂದು ನಡೆಸುತ್ತಾ ಬಂದಿರುವುದಾಗಿ ಫಕ್ಕಿರೇಶ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ತುಳುನಾಡಿನ ಸ್ವಾಮಿ ಕೊರಗಜ್ಜ ಈಗ ಬಯಲು ಸೀಮೆಯಲ್ಲೂ ತನ್ನ ಕಾರಣಿಕ ತೋರುತ್ತಿದ್ದಾನೆ.



