ನವೆಂಬರ್ 8 ರಂದು ಚಂದ್ರಗ್ರಹಣ; ಕುಕ್ಕೆ, ಧರ್ಮಸ್ಥಳದಲ್ಲಿ ಹೀಗಿರಲಿದೆ ಬದಲಾವಣೆ
ಮಂಗಳೂರು: ಅಕ್ಟೋಬರ್ 25ರ ಭಾಗಶಃ ಸೂರ್ಯಗ್ರಹಣ ನಂತರ ಇದೀಗ ಚಂದ್ರಗ್ರಹಣದ ಸರದಿ. ನವೆಂಬರ್ 8 ರಂದು ಚಂದ್ರಗ್ರಹಣ ಸಂಭವಿಸಲಿದ್ದು, ವಿಜ್ಞಾನಿಗಳು, ವಿದ್ಯಾರ್ಥಿಗಳು ಹಾಗೂ ಧಾರ್ಮಿಕ ವಿದ್ವಾಂಸರು ಹಲವು ಲೆಕ್ಕಚಾರದಲ್ಲಿ ತೊಡಗಿದ್ದಾರೆ. ಈ ವರ್ಷದ ಕೊನೆಯ ಗ್ರಹಣವೂ ಇದಾಗಲಿದೆ. ಭೂಮಂಡಲದಲ್ಲಿ ನಡೆಯುವ ಕೌತುಕ ಕಣ್ತುಂಬಿಕೊಳ್ಳುವುದು ಕರಾವಳಿ ಭಾಗದಲ್ಲಿ ತುಸು ಕಷ್ಟ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಎರಡು ಕ್ಷೇತ್ರಗಳಲ್ಲಿ ಅಂದು ಸಾಮಾನ್ಯ ದಿನಕ್ಕಿಂತ ಸ್ವಲ್ಪ ಬದಲಾವಣೆ ಗಮನಿಸಬಹುದಾಗಿದೆ.
ಸದಾ ಭಕ್ತರಿಂದ ತುಂಬಿ ತುಳುಕುವ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಶ್ರೀಮಂಜುನಾಥ ಸನ್ನಿಧಿಯಲ್ಲಿ ನಡೆಯಲಿರುವ ಪೂಜೆ- ಪುನಸ್ಕಾರ ಈ ಎಲ್ಲ ವಿಧಗಳಲ್ಲಿ ಬದಲಾವಣೆ ಆಗಲಿದೆ.
ಕುಕ್ಕೆಯಲ್ಲಿ ಹೀಗಿರುತ್ತೆ ಬದಲಾವಣೆ
ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂದ್ರಗ್ರಹಣದ ದಿನವಾದ ನ.8ರಂದು ಯಾವುದೇ ಸೇವೆಗಳು ನೆರವೇರುವುದಿಲ್ಲ. ಅಲ್ಲದೆ ಭೋಜನ ಪ್ರಸಾದ ವಿತರಣೆ ಕೂಡಾ ಇರುವುದಿಲ್ಲ.ಆದರೆ ಶ್ರೀ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತರಿಗೆ ದೇವರ ದರ್ಶನದ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ಕುಕ್ಕೆ ಸಮಯ ಗಮನಿಸಿ
ಬೆಳಗ್ಗೆ 9ಗಂಟೆಯಿಂದ 11.30ರ ತನಕ, ಗ್ರಹಣ ಸ್ಪರ್ಶ ಸಮಯವಾದ 2.39ರಿಂದ ಗ್ರಹಣ ಮೋಕ್ಷ ಸಮಯವಾದ 6.19ರ ತನಕ ಹಾಗೂ ರಾತ್ರಿ 7.30ರಿಂದ 9 ರ ತನಕ ಶ್ರೀ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ದೇಗುಲದ ಆಡಳಿತ ಸಮಿತಿ ತಿಳಿಸಿದೆ.
ಧರ್ಮಸ್ಥಳದಲ್ಲೂ ಬದಲಾವಣೆ
ಚಂದ್ರಗ್ರಹಣ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ . ಮದ್ಯಾಹ್ನ 1.30 ರಿಂದ ರಾತ್ರಿ 7 ಗಂಟೆವರೆಗೆ ಧರ್ಮಸ್ಥಳದಲ್ಲಿ ದೇವರ ದರ್ಶನ ಬಂದ್ ಆಗಿರಲಿದೆ. ಮಧ್ಯಾಹ್ನದಿಂದ ಸಂಜೆಯವರೆಗೆ ದರ್ಶನ ಮತ್ತು ಸೇವೆಗಳು ಬಂದ್ ಆಗಲಿದ್ದು, ಮಧ್ಯಾಹ್ನ 1.30 ರವರೆಗೆ ಮಾತ್ರ ಭೋಜನ ವ್ಯವಸ್ಥೆ ಇರಲಿದೆ. ನಂತರ ರಾತ್ರಿ 7 ಗಂಟೆಯ ಬಳಿಕವಷ್ಟೇ ಭೋಜನ ವ್ಯವಸ್ಥೆ ಇರಲಿದೆ . ದೂರದ ಊರಿನಿಂದ ಬರುವ ಭಕ್ತರು ಬದಲಾವಣೆ ಗಮನಿಸಲೇಬೇಕಿದೆ.