
PUTTUR: ದಿ. ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ಗುದ್ದಲಿ ಪೂಜೆ...
ಪುತ್ತೂರು: ದಿ.ಪ್ರವೀಣ್ ನೆಟ್ಟಾರುವಿನ ಕನಸಿನ ಮನೆಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು. ಸುಮಾರು 60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಮನೆ, 2,700 ಚದರ ಅಡಿ ವಿಸ್ತೀರ್ಣವಿದೆ. ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರಿನಲ್ಲಿ ದಿ.ಪ್ರವೀಣ್ ಅವರ ಕನಸಿನಂತೆ ಬಿಜೆಪಿ ಪಕ್ಷ ಮನೆ ನಿರ್ಮಾಣ ಮಾಡ್ತಿದೆ. ಪ್ರವೀಣ್ ಸಮಾಧಿ ಬಳಿಯ ಜಾಗದಲ್ಲೇ ಮನೆ ನಿರ್ಮಾಣ ಕಾರ್ಯ ಆಗ್ತಿದೆ.
ಮೊದಲಿಗೆ ಪೂಜೆ ನೆರವೇರಿಸಿ ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಮನೆಗೆ ಗುದ್ದಲಿ ಪೂಜೆ ನಡೆಯಿತು. ಈ ಸಂದರ್ಭ ಸಚಿವರಾದ ಎಸ್. ಅಂಗಾರ, ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಪ್ರವೀಣ್ ಕುಟುಂಬಸ್ಥರು ಉಪಸ್ಥಿತರಿದ್ದರು. ಇನ್ನು ತಿಂಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರವೀಣ್ ಕುಟುಂಬಸ್ಥರಿಗೆ ಮನೆ ನಿರ್ಮಾಣದ ಬಗ್ಗೆ ಭರವಸೆ ನೀಡಿದ್ರು. ಅದ್ರಂತೆ ಇಂದು ಕೊಟ್ಟ ಮಾತಿನಂತೆ ಮನೆ ನಿರ್ಮಾಣಕ್ಕೆ ಚಾಲನೆ ದೊರಕಿದೆ. ಜುಲೈ 26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರುವಿನ ಭೀಕರ ಹತ್ಯೆಯಾಗಿತ್ತು. ಬಳಿಕ ಬಿಜೆಪಿ ನಾಯಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಅಲ್ಲದೆ ನಳಿನ್ ಕುಮಾರ್ ಕಟೀಲ್ ಹಾಗೂ ಸುನಿಲ್ ಕುಮಾರ್ ಅವರ ಕಾರನ್ನ ಅಲುಗಾಡಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ರು. ಇವೆಲ್ಲ ಘಟನೆಯ ಬಳಿಕ ಬಿಜೆಪಿ ಪಕ್ಷ ಇದೀಗ ಪ್ರವೀಣ್ ಕುಟುಂಬದ ಬೆನ್ನಿಗೆ ನಿಂತಿದೆ.
ದಿ. ಪ್ರವೀಣ್ ನೆಟ್ಟಾರಿನ ಕನಸು ನನಸಾಗ್ತಿದೆ: ಸಂಸದ ನಳಿನ್
ಇನ್ನು ದಿ. ಪ್ರವೀಣ್ ನೆಟ್ಟಾರು ಮನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರವೀಣ್ ಕನಸು ನನಸು ಮಾಡಲು ಬಿಜೆಪಿ ಪಕ್ಷ ಹೆಜ್ಜೆ ಇಟ್ಟಿದೆ. ಅವರ ಹಳೆಯದಾದ ಮನೆಯನ್ನ ಕೆಡವಿ ಇಂದು ನೂತನ ಮನೆಗೆ ಗುದ್ದಲಿ ಪೂಜೆ ಮಾಡಿದ್ದೇವೆ. 60 ಲಕ್ಷ ವೆಚ್ಚದಲ್ಲಿ ಸುಮಾರು 2,700 ಚದರ ಅಡಿಯ ಮನೆ ಇದಾಗಿದ್ದು, ಮುಗ್ರೋಡಿ ಕನ್ಸ್ಟ್ರಕ್ಷನ್ ಕಂಪೆನಿ ಮನೆ ನಿರ್ಮಾಣ ಕಾರ್ಯದ ಮುತುವರ್ಜಿ ವಹಿಸಿದೆ. ಈ ಮನೆಯನ್ನ ಮೇ ಅಂತ್ಯದ ಒಳಗೆ ಮಾಡಿಮುಗಿಸಲಾಗುವುದು ಎಂದರು. ಇನ್ನು ಈಗಾಗ್ಲೇ ದಿ.ಪ್ರವೀಣ್ ಪತ್ನಿ ನೂತನ ಅವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ದೊರಕಿದೆ. ಬಿಜೆಪಿಯಿಂದ 25 ಲಕ್ಷ, ಸರ್ಕಾರದಿಂದ 25 ಲಕ್ಷ ಹಾಗೆಯೇ ಬಿಜೆಪಿ ಯುವಮೋರ್ಛಾದಿಂದ 15 ಲಕ್ಷ ನೀಡಲಾಗಿದೆ. ಇನ್ನು ದಿ. ಪ್ರವೀಣ್ ನಮ್ಮ ಒಳ್ಳೆಯ ಕಾರ್ಯಕರ್ತ, ಅವನ ಕುಟುಂಬದ ಜೊತೆ ಯಾವತ್ತೂ ಇರುತ್ತೇವೆ. ಪ್ರವೀಣ್ ಕೆಲಸಕ್ಕೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ, ಹಾಗಾಗಿ ಇಲ್ಲಿ ಹಣ ಮುಖ್ಯವಲ್ಲ ಎಂದರು. ಇನ್ನು ಈ ಮನೆಯನ್ನ ಮನೆಯವರ ಅಭಿಪ್ರಾಯದಂತೆಯೇ ಪಕ್ಷವೇ ಮನೆ ಕಟ್ಟಿ ಕೊಡ್ತಾ ಇದೆ. ಮನೆಯೇ ಇಡೀ ವೆಚ್ಚವನ್ನು ಬಿಜೆಪಿ ಪಕ್ಷ ಭರಿಸಲಿದೆ. ಮನೆಯವರೇ ಕೊಟ್ಟ ನಕ್ಷೆಯ ಪ್ರಕಾರ ಮನೆ ನಿರ್ಮಾಣ ಆಗ್ತಿದೆ ಎಂದರು.
ಎಲ್ಲಾ ಪಕ್ಷದವರಿಗೂ ಧನ್ಯವಾದ...
ಇನ್ನು ಮನೆಯ ಗುದ್ದಲಿ ಪೂಜೆಯ ಬಳಿಕ ದಿ.ಪ್ರವೀಣ್ ನೆಟ್ಟಾರು ಪತ್ನಿ ನೂತನ ಮಾತನಾಡಿ, ನಮ್ಮ ಜಿಲ್ಲೆಯ ಸಂಸದರು, ಸಚಿವರು ಹಾಗೆಯೇ ಬಿಜೆಪಿ ಮುಖಂಡರು ಪ್ರವೀಣ್ ಕನಸಿನ ಮನೆಗೆ ಹೆಜ್ಜೆ ಇಟ್ಟಿದ್ದಾರೆ. ಮುಖ್ಯವಾಗಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರು ಕನಸಿನ ಮನೆಗೆ ಮೊದಲ ಹೆಜ್ಜೆ ಇಟ್ಟವರು. ಹಾಗಾಗಿ ನಮ್ಮ ಮನೆಯವರ ಪರವಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಜೊತೆಗೆ ಎಲ್ಲಾ ಪಕ್ಷದ ನಾಯಕರು ನಮ್ಮ ಜೊತೆಗೆ ನಿಂತಿದ್ದಾರೆ. ಇನ್ನು ಮುಂದೆಯೂ ಆರೋಪಿಗಳನ್ನ ಹಿಡಿಯುವಲ್ಲೂ ಸಹಕಾರ ಮುಂದುವರೆಯಬೇಕು. ಇನ್ನೂ ಆರು ಜನ ಆರೋಪಿಗಳ ಪತ್ತೆ ಆಗಬೇಕಿದೆ, ಅವರನ್ನೂ ಹಿಡಿಯುವಲ್ಲಿಯೂ ಎಲ್ಲರ ಸಹಕಾರ ಇರಬೇಕು ಎಂದರು.