
NITK ಟೋಲ್ ಗೇಟ್ ಮುಚ್ಚುವುದು ಅಷ್ಟು ಸುಲಭವಲ್ಲ: ಸತ್ಯಜಿತ್ ಸುರತ್ಕಲ್
ಮಂಗಳೂರು: ಸುರತ್ಕಲ್ ಸಮೀಪದ NITK ಟೋಲ್ ಗೇಟ್ ಮುಚ್ಚುವುದು ಅಷ್ಟು ಸುಲಭವಲ್ಲ. ಅದರ ಹಿಂದಿರುವ ತಾಂತ್ರಿಕ ಹಾಗೂ ಕಾನೂನಾತ್ಮಕ ಅಂಶಗಳನ್ನು ಮೊದಲು ತಿಳಿದುಕೊಳ್ಳಬೇಕು ಎಂದು ಟೋಲ್ ವಿರೋಧಿ ಹೋರಾಟ ಸಮಿತಿಯಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ, ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.
'ದಿ ನ್ಯೂಸ್ ಅವರ್' ಯೂಟ್ಯೂಬ್ ಚಾನೆಲ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಮುಂದಿಟ್ಟಿದ್ದಾರೆ.
ಟೋಲ್ ಗೇಟ್ ವಿರೋಧಿ ಹೋರಾಟದಲ್ಲಿ ಸತ್ಯಜಿತ್ ಸುರತ್ಕಲ್ ಯಾಕಾಗಿ ಕಾಣಿಸಿಕೊಳ್ಳುತ್ತಿಲ್ಲ ಅನ್ನೋ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ. "ಟೋಲ್ ಗೇಟ್ ವಿರೋಧಿ ಆರಂಭಿಕ ಹೋರಾಟದಲ್ಲಿ ನಾನಿದ್ದೆ. ಇವತ್ತು ಯಾರು ಹೋರಾಟ ನಡೆಸುತ್ತಿದ್ದಾರೋ, ಅವರೇ ಅಂದು ಹೈಕೋರ್ಟ್ ನಲ್ಲಿ ಟೋಲ್ ವಿರುದ್ಧ PIL ಸಲ್ಲಿಸಿದ್ದರು. ಹೈಕೋರ್ಟ್ ಆ PIL ಅನ್ನು ತಿರಸ್ಕಾರ ಮಾಡಿದ ಬಳಿಕವೇ ನಾವು ಬೇರೆ ರೀತಿಯ ಹೋರಾಟ ಆರಂಭಿಸಿದೆವು. ಯಾವಾಗ ಇಲ್ಲಿನ ಟೋಲ್ ಗೇಟ್ ಮುಚ್ಚಲು ಸಾಧ್ಯವಿಲ್ಲ ಅನ್ನೋದು ತಿಳಿಯಿತೋ, ಆವಾಗಲೇ ನಾವೆಲ್ಲ ಸೇರಿ ಸ್ಥಳೀಯ KA19 ವಾಹನಗಳಿಗೆ ಸುಂಕ ಮುಕ್ತ ಓಡಾಟಕ್ಕೆ ಬೇಡಿಕೆವಿಟ್ಟು ಅದರಲ್ಲಿ ಯಶಸ್ವಿಯಾದೆವು" ಎಂದರು.
ಸ್ಥಳೀಯ ವಾಹನಗಳು ಇಂದೇನಾದರೂ ಉಚಿತವಾಗಿ ಓಡಾಡುತ್ತಿದೆ ಅಂದ್ರೆ ಅದು ಇಂದಿನ ಹೋರಾಟಗಾರರಿಂದ ಸಾಧ್ಯವಾಗಿದ್ದಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
60 ಕಿಲೋ ಮೀಟರ್ ಅಂತರದಲ್ಲಿ ಎರಡು ಟೋಲ್ಗೇಟ್ ಇರಬಾರದೆನ್ನುವ ವಾದಕ್ಕೆ ಹೈಕೋರ್ಟ್ ಮಾನ್ಯತೆ ನೀಡಿಲ್ಲ. ನಂತೂರು - NITK ರಸ್ತೆ ನಿರ್ವಹಣೆಗೆ ಕಂಪೆನಿಯು ವಾರ್ಷಿಕ ₹15 ಕೋಟಿ ಕೇಳುತ್ತಿದೆ. ಆದರೆ ಅದನ್ನು ನೀಡಲು ಜಿಲ್ಲಾಡಳಿತವಾಗಲೀ, ಸರಕಾರವಾಗಲೀ ಒಪ್ಪುತ್ತಿಲ್ಲ. ಈ ಎಲ್ಲ ಸಮಸ್ಯೆಗಳು ಹೋರಾಟಗಾರರಿಗೆ ಗೊತ್ತಿದೆಯೋ, ಇಲ್ಲವೋ ತಿಳಿದಿಲ್ಲ. ಆದರೆ ನಿಜ ಸಮಸ್ಯೆ ತಿಳಿಯಲು ಯಾರೂ ಮುಂದಾಗಿಲ್ಲ. ಹೀಗಾಗಿ ಹೋರಾಟ ಮಾಡುವಾಗ ಎಚ್ಚರಿಕೆ ಇರಲಿ ಎಂದಿದ್ದಾರೆ.
ಅಲ್ಲದೇ, ಟೋಲ್ ಗೇಟ್ ನಿಂದ ನನಗೆ ಯಾವುದೇ ಹಣ, ಸೂಟ್ ಕೇಸ್ ಬಂದಿಲ್ಲ. ನಮ್ಮ ಹುಡುಗರು ಅಲ್ಲಿ ಕೆಲಸ ಮಾಡುತ್ತಿದ್ದದ್ದು ನಿಜ. ಹಾಗಂತ ನಾವು ಯಾರೂ ಸುಂಕ ವಸೂಲಿಗೆ ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ.