-->
ಪುತ್ತೂರು: ‘ಕೈ‘ ಟಿಕೆಟ್ ಗಾಗಿ 13 ಮಂದಿ ಅರ್ಜಿ; ಶಕು ಅಕ್ಕಗೆ ಕೊಕ್; ದಿವ್ಯಪ್ರಭಾಗೆ ಬುಲಾವ್!?

ಪುತ್ತೂರು: ‘ಕೈ‘ ಟಿಕೆಟ್ ಗಾಗಿ 13 ಮಂದಿ ಅರ್ಜಿ; ಶಕು ಅಕ್ಕಗೆ ಕೊಕ್; ದಿವ್ಯಪ್ರಭಾಗೆ ಬುಲಾವ್!?

 


ಮಂಗಳೂರು: ಪುತ್ತೂರು ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಜಿದ್ದಾಜಿದ್ದಿನ ಕಣ. ಹಾಲಿ ಶಾಸಕ ಬಿಜೆಪಿ ಪಕ್ಷದ ಸಂಜೀವ ಮಠಂದೂರು ವಿರುದ್ಧ ಪಕ್ಷದೊಳಗೆ ಅಸಮಾಧಾನ ಇರೋದರಿಂದ ಕಾಂಗ್ರೆಸ್ ಪಾಳಯದ ಟಿಕೆಟ್ ಗಾಗಿ ಬರೋಬ್ಬರಿ 13 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅಭಿವೃದ್ಧಿ, ಪಕ್ಷ-ಸಂಘಟನೆ ವಿಚಾರದಲ್ಲಿ ಸಂಜೀವ ಮಠಂದೂರು ಸೋತಿರುವುದು ಒಂದು ಕಡೆಯಾದರೆ, ಹಿಂದೂ ಸಂಘಟನೆ ಕಾರ್ಯಕರ್ತರ ಪರ ಕೆಲಸ ಮಾಡಲ್ಲ ಅನ್ನೋ ದೊಡ್ಡದಾದ ಅಸಮಾಧಾನವೂ ಇದೆ. ಇದೆಲ್ಲದರ ಲಾಭ ಪಡೆಯಲು ಪುತ್ತೂರು ಕ್ಷೇತ್ರದಲ್ಲಿ ಮಗದೊಮ್ಮೆ ಮಹಿಳಾ ಅಭ್ಯರ್ಥಿಯೇ ಕಣಕ್ಕೆ ಇಳಿಯುತ್ತಾರೆ ಅನ್ನೋ ಮಾತಿದೆ. ಆದರೆ ಈ ಬಾರಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರಿಗೆ ‘ಕೈ‘ ಟಿಕೆಟ್ ಇಲ್ಲ ಅನ್ನೋ ಮಾತು ಜೋರಾಗಿ ಕೇಳಿ ಬಂದಿದೆ.

 

ಯಾರೆಲ್ಲ ಆ 13 ಮಂದಿ?

ಶಕುಂತಲಾ ಶೆಟ್ಟಿ, ವಿಶ್ವನಾಥ ರೈ, ಭರತ್ ಮುಂಡೋಡಿ, ಧನಂಜಯ ಅಡ್ಪಂಗಾಯ, ಎಂ.ಎಸ್. ಮೊಹಮ್ಮದ್, ಡಾ. ರಾಜರಾಂ, ಮಮತಾ ಗಟ್ಟಿ, ಸತೀಶ್ ಕೆದಿಂಜೆ, ಕಾವು ಹೇಮನಾಥ ಶೆಟ್ಟಿ, ದಿವ್ಯಪ್ರಭ, ಕೃಪಾ ಅಮರ್ ಆಳ್ವ, ಕೌಶಲ್ ಶೆಟ್ಟಿ ಹಾಗೂ ಚಂದ್ರಹಾಸ ಶೆಟ್ಟಿ. ಈ ಪಟ್ಟಿಯಲ್ಲಿ ಶಕುಂತಲಾ ಶೆಟ್ಟಿ, ದಿವ್ಯಪ್ರಭಾ, ಮಮತಾ ಗಟ್ಟಿ ಹಾಗೂ ಕೃಪಾ ಅಮರ್ ಆಳ್ವ ಹೀಗೆ ನಾಲ್ವರು ಮಹಿಳಾ ನಾಯಕಿಯರೂ ಸೇರಿದ್ದು. ಕಾಂಗ್ರೆಸ್ ಪಕ್ಷದ ಮಹಿಳಾ ಮೀಸಲು ಕ್ಷೇತ್ರಕ್ಕೆ ಪೈಪೋಟಿ ಶುರು ಮಾಡಿದ್ದಾರೆ.

 

ದಿವ್ಯಪ್ರಭ ಆ್ಯಕ್ಟಿವ್ ಮೋಡ್..!?

ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಹೊಸಮುಖಗಳಿಗೆ ಅವಕಾಶ ನೀಡುವ ಬಗ್ಗೆ ಈಗಾಗಲೇ ಪಕ್ಷ ನಿರ್ಧರಿಸಿದೆ. ಮಾತ್ರವಲ್ಲದೇ, ಯುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯೂ ಸಿಗಲಿದೆ. ಹೀಗಾಗಿ ಅಳೆದು ತೂಗಿ ಕಾಂಗ್ರೆಸ್ ಟಿಕೆಟ್ ನೀಡಲು ಮುಂದಾಗಿದೆ. ಮಾಜಿ ಶಾಸಕಿ ಶಕು ಅಕ್ಕ ಈ ಬಾರಿಯೂ ತನಗೆ ಟಿಕೆಟ್ ನೀಡಬಹುದು ಎಂಬ ವಿಶ್ವಾಸದಲ್ಲಿದ್ದರೆ, ಇತ್ತ ದಿವ್ಯಪ್ರಭ ಓಡಾಟ ಪುತ್ತೂರಿನಲ್ಲಿ ಜಾಸ್ತಿಯೇ ಇದ್ದು ಜನರ, ಸಂಘ ಸಂಸ್ಥೆಗಳ, ಮಹಿಳಾ ಸಂಘಗಳ ಜೊತೆ ಒಡನಾಟ ಬೆಳೆಸಿಕೊಳ್ಳುತ್ತಿದ್ದಾರೆ. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ, ಮಹಿಳಾ ಕಾಂಗ್ರೆಸ್ ನಾಯಕಿ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಣದಲ್ಲಿ ದಿವ್ಯಪ್ರಭ ಗುರುತಿಸಿಕೊಂಡಿರುವುದರಿಂದ ಅವರಿಗೆ ಈ ಬಾರಿಯ ಪುತ್ತೂರು ಟಿಕೆಟ್ ಎನ್ನಲಾಗುತ್ತಿದೆ. ಹೀಗಾಗಿ ದಿವ್ಯಪ್ರಭ ಓಡಾಟ, ಸಮಾಜ ಸೇವೆಗಳು ಕ್ಷೇತ್ರದಲ್ಲಿ ಹೆಚ್ಚಾಗಿದೆ. ಹೀಗಾದಲ್ಲಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಶಕುಂತಲಾ ಶೆಟ್ಟಿ ಅವರಿಗೆ ಟಿಕೆಟ್ ‘ಕೈ‘ ತಪ್ಪುವ ಸಾಧ್ಯತೆಯೂ ಇದೆ. ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದು ಶಾಸಕಿಯೂ ಆಗಿದ್ದ ಶಕುಂತಲಾ ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದೆ, ಅತ್ತ ಬಿಜೆಪಿ ಇವರನ್ನ ಮತ್ತೆ ‘ಹಿಂದುತ್ವ‘ದ ಪಕ್ಷಕ್ಕೆ ಕರೆದೊಯ್ಯುವ ಸಾಧ್ಯತೆ ಜಾಸ್ತಿ ಇದೆ.

 

ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಪುಷ್ಪ ಅಮರನಾಥ್ ಹಾಗೂ ಇನ್ನಿತರರ ಜೊತೆ ದಿವ್ಯಪ್ರಭ

ಪಕ್ಷದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ ದಿವ್ಯಪ್ರಭ

ಕೆಪಿಸಿಸಿ ಅಧ್ಯಕ್ಷರ ಜೊತೆ ಇತರೆ ಮಹಿಳಾ ನಾಯಕಿಯರೊಂದಿಗೆ ದಿವ್ಯಪ್ರಭ

ಹೇಮನಾಥ ಶೆಟ್ರಿಗೆ ಈ ಬಾರಿಯೂ ಇಲ್ಲ ಟಿಕೆಟ್!?

ಹೇಳಿ ಕೇಳಿ ಪುತ್ತೂರು ಅನ್ನೋದು ಕಾಂಗ್ರೆಸ್ ಪಾಲಿನ ಮಹಿಳಾ ಮೀಸಲು ಕ್ಷೇತ್ರವೇ ಆಗಿದೆ. ಜಿಲ್ಲೆಯಲ್ಲಿ ಮಹಿಳೆಯರಿಗೆ 2-3 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕೆನ್ನುವ ಒತ್ತಾಯ ಮಹಿಳಾ ಕಾಂಗ್ರೆಸ್ ನಿಂದಲೇ ಇದೆ. ಆದರೆ ಸದ್ಯಕ್ಕೆ ಪುತ್ತೂರನ್ನಷ್ಟೇ ಮಹಿಳಾ ಮೀಸಲು ಕ್ಷೇತ್ರವಾಗಿ ಕಾಂಗ್ರೆಸ್ ಇಟ್ಟುಕೊಂಡಿದೆ. ಇದರಲ್ಲಿ ಕಾಂಗ್ರೆಸ್ ಯಶಸ್ವಿ ಕಂಡಿದ್ದೂ ಇದೆ. ಹಾಗಾಗಿ ಎಷ್ಟೇ ಪ್ರಯತ್ನಪಟ್ಟರೂ, ಕಾವು ಹೇಮನಾಥ್ ಶೆಟ್ಟಿ ಅವ್ರಿಗೆ ಟಿಕೆಟ್ ಸಿಗೋದು ಡೌಟ್ ಎಂದೇ ಹೇಳಲಾಗುತ್ತಿದೆ. ಜೊತೆಗೆ ಈ ಹಿಂದೊಮ್ಮೆ ಶಕುಂತಲಾ ಶೆಟ್ಟಿ ಅವರನ್ನು ಸೋಲಿಸಲು ಕಾವು ಪ್ರಯತ್ನಪಟ್ಟಿದ್ದರೂ ಅನ್ನೋದು ಕೂಡಾ ಅವರಿಗೆ ಟಿಕೆಟ್ ನೀಡಲು ಅಡ್ಡಿಯಾದೀತು. ಆಗಿದ್ಮೇಲೂ ಕಾವುಗೆ ಟಿಕೆಟ್ ಸಿಗಬೇಕೆಂದರೆ ‘ದಿ ನ್ಯೂಸ್ ಅವರ್‘ ಈ ಹಿಂದಿನ ಕ್ಷೇತ್ರ ವಿಶ್ಲೇಷಣೆಯಲ್ಲಿ ಹೇಳಿದಂತೆ ಸುರತ್ಕಲ್ (ಮಂಗಳೂರು ಉತ್ತರ) ಕ್ಷೇತ್ರದಲ್ಲಿ ಬಿಲ್ಲವ ನಾಯಕಿ ಪ್ರತಿಭಾ ಕುಳಾಯಿ ಅವರಿಗೆ ಟಿಕೆಟ್ ನೀಡಬೇಕಾಗುತ್ತದೆ.

ಒಟ್ಟಿನಲ್ಲಿ ಪುತ್ತೂರು ಕ್ಷೇತ್ರದ ಟಿಕೆಟ್ ಗಾಗಿ ಎಷ್ಟೇ ಪ್ರಯತ್ನಪಟ್ಟರೂ ಕೊನೆಗೆ ಟಿಕೆಟ್ ಖಾತ್ರಿ ಇರೋದು ದಿವ್ಯಪ್ರಭ ಗೌಡ ಅವರಿಗೆ ಎಂದೇ ಹೇಳಲಾಗುತ್ತಿದೆ. ಆದರೆ, ಕೊನೆ ಹಂತದ ಕಸರತ್ತು, ಲಾಬಿ ಯಾರಿಗೆ ಬೇಕಾದರೂ ಟಿಕೆಟ್ ದಯಪಾಲಿಸಬಹುದು ಅನ್ನೋದನ್ನು ಮರೆಯುವಂತಿಲ್ಲ.  

 

  

Ads on article

Advertise in articles 1

advertising articles 2

Advertise under the article