ಟೋಲ್ ಸಂಗ್ರಹ ರದ್ದೇ ಆಗಿಲ್ಲ, ಇದು ಬಿಜೆಪಿ ನಾಯಕತ್ವದ ನೈಜ ಮುಖ: ಮುನೀರ್ ಕಾಟಿಪಳ್ಳ ವಾಗ್ದಾಳಿ
ಮಂಗಳೂರು: ಸುರತ್ಕಲ್ ಟೋಲ್ ಗೇಟ್ ರದ್ದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದರೂ ಸುರತ್ಕಲ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಹೋರಾಟಗಾರರು ಟೋಲ್ ಸಂಗ್ರಹ ಸ್ಥಗಿತಗೊಳಿಸುವಂತೆ ಪಟ್ಟು ಹಿಡಿದಿದ್ದು ಹತ್ತೊಂಬತ್ತನೇ ದಿನವಾದ ಇಂದೂ ಧರಣಿ ಮುಂದುವರಿದಿದೆ. ಅಧಿಸೂಚನೆ ಹೊರಟಿರುವ ಹಿನ್ನಲೆಯಲ್ಲಿ ಪ್ರತಿಭಟನಾಕಾರರ ಹುಮ್ಮಸ್ಸು ಹೆಚ್ಚಿದ್ದು ಇಂದು ದೊಡ್ಡ ಸಂಖ್ಯೆಯಲ್ಲಿ ಜನರು ಧರಣಿಯಲ್ಲಿ ಪಾಲ್ಗೊಂಡು ಹಗಲು ರಾತ್ರಿ ಧರಣಿಗೆ ಮತ್ತಷ್ಟು ಬಲ ತುಂಬಿದರು.
19 ನೇ ದಿನವಾದ ಇಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ "ಏಳು ವರ್ಷಗಳ ಕಾಲ ನಿಯಮ ಬಾಹಿರ ಟೋಲ್ ಕೇಂದ್ರದಲ್ಲಿ ನೂರಾರು ಕೋಟಿ ರೂಪಾಯಿ ಸಂಗ್ರಹಕ್ಕೆ ಅವಕಾಶ ಒದಗಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಈಗ ತರಾತುರಿಯಲ್ಲಿ ಪ್ರಧಾನಿ, ಹೆದ್ದಾರಿ ಸಚಿವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಟೋಲ್ ಗೇಟ್ ಮುಚ್ಚಿದರ ಹಿರಿಮೆ ತನ್ನದಾಗಿಸಿಕೊಳ್ಳುವ ಆಸಕ್ತಿ ಅಕ್ರಮ ಟೋಲ್ ಗೇಟ್ ಮುಚ್ಚುವುದರಲ್ಲಿ ಬಿಜೆಪಿ ಸಂಸದ, ಶಾಸಕರುಗಳಿಗೆ ಇಲ್ಲ. ಅಧಿಸೂಚನೆ ಹೊರ ಬಿದ್ದು ಮೂರು ದಿನ ಕಳೆದರೂ ಟೋಲ್ ಸಂಗ್ರಹ ಅಭಾದಿತವಾಗಿ ನಡೆದಿದೆ. ಇದು ಬಿಜೆಪಿ ಮುಖಂಡತ್ವದ ನೈಜ ಮುಖ" ಎಂದು ಆರೋಪಿಸಿದರು.
ಟೋಲ್ ಕೇಂದ್ರ ಮುಚ್ಚದೆ ಹಗಲು ರಾತ್ರಿ ಧರಣಿ ಕೊನೆಗೊಳಿಸುವ ಪ್ರಶ್ನೆಯೇ ಇಲ್ಲ. ಅಧಿಸೂಚನೆ ಆಧಾರದಲ್ಲಿ ಜಿಲ್ಲಾಡಳಿತ ತಕ್ಷಣ ಟೋಲ್ ಸಂಗ್ರಹ ಸ್ಥಗಿತಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿಲೀನದ ಹೆಸರಿನಲ್ಲಿ ಹೆಜಮಾಡಿಯ ನವಯುಗ್ ಟೋಲ್ ಪ್ಲಾಜಾದಲ್ಲಿ ಟೋಲ್ ದರವನ್ನು ವಿಪರೀತ ಹೆಚ್ಚಿಸಿ ಸುಲಿಗೆಯನ್ನು ಅಲ್ಲಿಗೆ ಸ್ಥಳಾಂತರಿಸಿದರೆ ಅವಿಭಜಿತ ಜಿಲ್ಲೆಯಲ್ಲಿ ಜನ ಹೋರಾಟ ಭುಗಿಲೇಳಲಿದೆ ಅದಕ್ಕೆ ಬಿಜೆಪಿ ಶಾಸಕರುಗಳು ಅವಕಾಶ ಮಾಡಿಕೊಡುವುದು ಬೇಡ ಎಂದು ಎಚ್ಚರಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಫಾದರ್ ವಿಲಿಯಂ ಮಾರ್ಟಿಸ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಾಹುಲ್ ಹಮೀದ್, ರಾಲ್ಪಿ ಡಿಸೋಜ, ಮನಪಾ ಸದಸ್ಯ ಅಬ್ದುಲ್ ರವೂಫ್, ನ್ಯಾಯವಾದಿ ಯಶವಂತ ಮರೋಳಿ, ಕನಕದಾಸ ಕೂಳೂರು, ಹಮೀದ್ ಹರೇಕಳ, ರಫೀಕ್ ಹರೇಕಳ, ದಲಿತ ನಾಯಕರಾದ ರಘು ಎಕ್ಕಾರು, ಶೇಖರ ಹೆಜಮಾಡಿ, ಸಹಬಾಳ್ವೆ ಉಡುಪಿಯ ಜ್ಯೋತಿ ಮೆನನ್, ತಸ್ರೀನ್ ಅರ಼ಾ, ಶೇಖಬ್ಬ ಕೋಟೆ, ಪ್ರತಿಭಾ ಕುಳಾಯಿ, ಹೋರಾಟ ಸಮಿತಿಯ ಪ್ರಮುಖರಾದ ಬಿ ಕೆ ಇಮ್ತಿಯಾಜ್, ರಾಘವೇಂದ್ರ ರಾವ್, ರಮೇಶ್ ಟಿ ಎನ್, ಶ್ರೀನಾಥ್ ಕುಲಾಲ್, ಮುಹಮ್ಮದ್ ಕುಂಜತ್ತಬೈಲ್, ಮಂಜುಳಾ ನಾಯಕ್, ಸಂತೋಷ್ ಬಜಾಲ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.