-->
ಶಾಲಾ ಕ್ರೀಡಾಕೂಟದ ಸರ್ವ ಧರ್ಮ ಪ್ರಾರ್ಥನೆಯಲ್ಲಿ ಆಝಾನ್; ಹಿಂದೂ ಸಂಘಟನೆ ಗರಂ!

ಶಾಲಾ ಕ್ರೀಡಾಕೂಟದ ಸರ್ವ ಧರ್ಮ ಪ್ರಾರ್ಥನೆಯಲ್ಲಿ ಆಝಾನ್; ಹಿಂದೂ ಸಂಘಟನೆ ಗರಂ!



ಕುಂದಾಪುರ: ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕ್ರೀಡಾಕೂಟದ ಸರ್ವ ಧರ್ಮದ ಪ್ರಾರ್ಥನೆ ವಿರುದ್ಧ ಹಿಂದೂ ಬಲಪಂಥೀಯ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಶಾಲಾ ಮುಖ್ಯಸ್ಥರಿಗೆ ಕ್ಷಮೆಯಾಚಿಸುವಂತೆ ಒತ್ತಡ ಹಾಕಿದ ಘಟನೆ ಶಂಕರನಾರಾಯಣದಲ್ಲಿ ನಡೆದಿದೆ.

ಇಲ್ಲಿನ ಮದರ್ ಥೆರೇಸಾ ಮೆಮೋರಿಯಲ್ ಶಾಲೆಯಲ್ಲಿ ಆಯೋಜನೆಯಾಗಿದ್ದ ಕ್ರೀಡಾ ಕೂಟ ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಉದ್ಘಾಟನಾ ನೃತ್ಯವಾಗಿ ಮೂರು ಧರ್ಮದ (ಹಿಂದೂ, ಮುಸ್ಲಿಂ, ಕ್ರೈಸ್ತ) ನೃತ್ಯವನ್ನು ಆಯೋಜಿಸಿದ್ದರು. ಇದರಲ್ಲಿ ಕೆಲವು ವಿದ್ಯಾರ್ಥಿನಿಯರು ನೃತ್ಯ ಮಾಡಿದ್ದರು. ಕೊನೆಯಲ್ಲಿ ಮುಸ್ಲಿಮರ ಆಝಾನ್ ಕೂಡಾವಿದ್ದು ಇದಕ್ಕೂ ನೃತ್ಯ ಪ್ರದರ್ಶಿಸಿದ್ದರು. ಆದರೆ, ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಕಲ್ಗದೆ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಲಾ ಆಡಳಿತ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಅಲ್ಲದೇ, ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದು, ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಹಾಗೂ ಹಿಂದೂ ಬಲಪಂಥೀಯ ಸಂಘಟನೆ ಕಾರ್ಯಕರ್ತರು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

ಕೂಡಲೇ ಶಾಲಾ ಮುಖ್ಯಸ್ಥರು ಆಗಿರುವ ತಪ್ಪಿಗೆ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ. ನಂತರ ಹಿಂದೂ ಸಂಘಟನೆ ಕಾರ್ಯಕರ್ತರು ಕ್ಷಮೆಯಾಚನೆ ವೀಡಿಯೋ ಸೆರೆ ಹಿಡಿದು ಜಾಲತಾಣದಲ್ಲಿ ವೈರಲ್ ಮಾಡಿದ್ದಾಗಿ ತಿಳಿದು ಬಂದಿದೆ. 


Ads on article

Advertise in articles 1

advertising articles 2

Advertise under the article