
Mangaluru: ಗರೋಡಿ ದಾಟುತ್ತಲೇ ಸ್ಫೋಟ; ಶಾರಿಕ್ ಪ್ಲ್ಯಾನ್ ವಿಫಲಗೊಳಿಸಿದ್ದು ತುಳುನಾಡಿನ ದೈವಗಳು!
ಮಂಗಳೂರು: ಆಟೋ ರಿಕ್ಷಾ ಮೂಲಕ ಕುಕ್ಕರ್ ಬಾಂಬ್ ತಂದು ನಗರದ ಜನನಿಬಿಡ
ಪ್ರದೇಶದಲ್ಲಿ ಸ್ಫೋಟಿಸುವ ಸಂಚು ಹೂಡಿದ್ದ ಶಾರಿಕ್ ಪ್ಲ್ಯಾನ್ ಅರ್ಧಕ್ಕೆ ಸ್ಫೋಟಗೊಂಡಿತ್ತು. ಇದುವರೆಗೂ
ತಲೆಮರೆಸಿಕೊಂಡು ಓಡಾಡಿದ್ದ ಶಂಕಿತ ಉಗ್ರ ಈ ಮೂಲಕ ತಾನೇ ಸುಟ್ಟು ಗಾಯಗೊಂಡಿದ್ದಾನೆ. ಇದುವರೆಗೂ ಪೊಲೀಸರ
ಕಣ್ಣು ತಪ್ಪಿಸಿ ತಿರುಗಾಡುತ್ತಿದ್ದ ಶಾರಿಕ್ ಬಲೆಗೆ ಬೀಳಲು ತುಳುನಾಡಿನ ದೈವಗಳೇ ಕಾರಣ ಅಂತಾ ದೈವಾರಾಧಕರು
ಅಭಿಪ್ರಾಯಪಟ್ಟಿದ್ದಾರೆ.
ಸ್ಫೋಟ ನಡೆದ ಸ್ಥಳ ಗರೋಡಿಯಾಗಿದ್ದು, ಶಾರಿಕ್ ಆಟೋ ಹತ್ತಿ ಗರೋಡಿ ದಾಟಿ
ಸುಮಾರು 50 ಮೀಟರ್ ನಷ್ಟು ಮುಂದೆ ಬರುತ್ತಲೇ ಬಾಂಬ್ ಸ್ಫೋಟಗೊಂಡಿತ್ತು. ಅಲ್ಲೆ ಇರುವ ಬ್ರಹ್ಮ ಬೈದರ್ಕಳ
ವೀರ ಪುರುಷರಾದ ಕೋಟಿ ಚೆನ್ನಯ್ಯರ ಗರೋಡಿ ದಾಟಿ ಹೋಗುತ್ತಲೇ ಇದೆಲ್ಲವೂ ನಡೆದು ಹೋಗಿತ್ತು. ಹೀಗಾಗಿ
ತುಳುನಾಡಿನ ಮಂದಿ ಗರೋಡಿಯಲ್ಲಿನ ಬ್ರಹ್ಮ ಬೈದರ್ಕಳ ಹಾಗೂ ಇತರೆ ದೈವಗಳೇ ಶಾರಿಕ್ ಕೃತ್ಯ ವಿಫಲಗೊಳಿಸಿದೆ
ಮತ್ತು ಆತನ ಕೃತ್ಯಕ್ಕೆ ತಕ್ಕ ಶಾಸ್ತಿ ಕಲಿಸಿದೆ ಎಂದು ದೈವದ ಕಾರಣಿಕದ ಬಗ್ಗೆ ಮಾತನಾಡುತ್ತಿದ್ದಾರೆ.
ಈ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದಾಗಲೂ ಅದು
ಸ್ಫೋಟಗೊಳ್ಳದೇ ಜೀವಂತವಾಗಿ ಪತ್ತೆಯಾಗಿತ್ತು. ಇದೀಗ ಮತ್ತೊಮ್ಮೆ ಅಂತಹ ಪ್ರಯತ್ನ ನಡೆದರೂ ಸಾವು ನೋವಿನಿಂದ
ತುಳುನಾಡಿನ ಮಂದಿ ಸುರಕ್ಷಿತರಾಗಿದ್ದಾರೆ.