Mangaluru: ಸ್ಫೋಟಗೊಂಡಿದ್ದು ಕುಕ್ಕರ್ ಬಾಂಬ್!; ಪೊಲೀಸರ ತನಿಖೆ ತೀವ್ರ | ಕಡಲ ನಗರಿಯಲ್ಲಿ ತಪ್ಪಿದ ದೊಡ್ಡ ದುರಂತ!?
ಮಂಗಳೂರು: ನಗರದ ನಾಗುರಿ ಬಳಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಸಂಬಂಧ ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಸುಧಾರಿತ ಕಡಿಮೆ ಪ್ರಮಾಣದ ಕುಕ್ಕರ್ ಬಾಂಬ್ ಅನ್ನೋದು ಗೊತ್ತಾಗಿದೆ.
ಉತ್ತರ ಪ್ರದೇಶದ ಕಾರ್ಮಿಕನಂತಿದ್ದ ಆಟೋ ಪ್ರಯಾಣಿಕ ಸದ್ಯ ಗಾಯಗೊಂಡು ಆಸ್ಪತ್ರೆಯಲ್ಲಿದ್ದು, ಆಟೋದಲ್ಲಿ ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದೆ. ಆತನಲ್ಲಿದ್ದ ಬಾಕ್ಸ್ ಮತ್ತು ಬ್ಯಾಗ್ ನಿಂದಲೇ ನಿಗೂಢ ಸ್ಪೋಟವಾಗಿದ್ದು, ಇದನ್ನು ಯಾಕಾಗಿ ತಂದ? ಯಾರು ನೀಡಿದ್ದರು ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋ ಹತ್ತಿದ್ದ ವ್ಯಕ್ತಿ, ಆಟೋದಲ್ಲಿ ತೆರಳುವ ವೇಳೆ ಸ್ಫೋಟಗೊಂಡಿತ್ತು. ಸ್ಪೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟ ಗಾಯಗಳಿಂದ ಕೂಡಿದೆ.
ಬಾಂಬ್ ಅನ್ನೋದು ಪಕ್ಕ!
ಆಟೋದಲ್ಲಿ ಪರಿಶೀಲನೆ ಸಂದರ್ಭ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿದೆ. ಸ್ಪೋಟಗೊಂಡ ಆಟೋದಲ್ಲಿ ನಟ್ ಬೋಲ್ಟ್ ಗಳು ಮತ್ತು ಬ್ಯಾಟರಿ ಹಾಗೂ ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಪತ್ತೆಯಾಗಿವೆ. ಲಘು ತೀವ್ರತೆ ಇರುವ ಸ್ಪೋಟಕ ಬಳಸಿರುವ ಶಂಕೆಯಾಗಿದೆ. ತೀವ್ರ ಶೋಧ ನಡೆಸಿದ ಎಫ್ ಎಸ್ ಎಲ್ ಟೀಮ್ ಮತ್ತು ಬಾಂಬ್ ನಿಷ್ಕ್ರೀಯ ದಳ ಸ್ಥಳದಲ್ಲಿ ಅತೀ ಸುಕ್ಷ್ಮವಾಗಿ ಪರಿಶೀಲನೆ ಮಾಡಿದೆ. ಆಟೋ ರಿಕ್ಷಾದ ಒಳಭಾಗದಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ. ತನಿಖೆ ಸಂಬಂಧ ಒಂದು ತಂಡ ಮೈಸೂರಿಗೆ ತೆರಳಿದೆ ಎನ್ನಲಾಗಿದೆ.