
ಉಡುಪಿ: ಚೇತನ್ ವಿರುದ್ಧ ಪೊಲೀಸರಿಗೆ ದೂರು ನೀಡಲ್ಲ: ದೈವ ನರ್ತಕರ ನಿರ್ಧಾರ
ಉಡುಪಿ: "ದೈವರಾಧನೆ ಹಿಂದೂ ಸಂಸ್ಕೃತಿಯ ಭಾಗವಲ್ಲ" ಎನ್ನುವ ನಟ ಚೇತನ್ ಹೇಳಿಕೆಗೆ ಕರವಾಳಿಯಲ್ಲಿ ದೈವ ನರ್ತಕ ಸಮುದಾಯದಿಂದಲೂ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ನಟ ಚೇತನ್ ವಿರುದ್ದ ತಾವು ನಂಬಿದ ದೈವಗಳ ಮೊರೆ ಹೋಗಲು ದೈವ ನರ್ತಕ ಸಮುದಾಯಗಳು ತೀರ್ಮಾನಿಸಿವೆ.
ಪೊಲೀಸ್ ದೂರು ನೀಡಲ್ಲ: ಕುಮಾರ ಪಂಬದ
"ಚೇತನ್ ಅವರ ಹೇಳಿಕೆಯಿಂದ ನಮ್ಮ ಸಮುದಾಯದ ನಂಬಿಕೆಗೆ ಧಕ್ಕೆ ಉಂಟಾಗಿದೆ. ನಮ್ಮ ಸಮುದಾಯದ ಕುರಿತು ಚೇತನ್ ಅಧ್ಯಯನ ಮಾಡಿದ್ದಾರಾ, ಕೇವಲ ಪುಸ್ತಕ ಓದಿದರೆ ಸಮುದಾಯ ಏನು ಅಂತ ಗೊತ್ತಾಗುತ್ತಾ" ಅಂತ ದೈವ ನರ್ತಕ ಕುಮಾರ ಪಂಬದ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
"ಚೇತನ್ ವಿರುದ್ಧ ನಮ್ಮ ಸಮುದಾಯ ಒಂದು ಮಹತ್ವದ ತೀರ್ಮಾನಕ್ಕೆ ಬಂದಿದೆ. ನಾವು ಯಾವುದೇ ಪೊಲೀಸ್ ದೂರು ನೀಡುದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ದೈವದ ಎದರು ನಿಂತು ಚೇತನ್ ಹೇಳಿಕೆಯಿಂದ ನಮಗೆ ನೋವಾಗಿದೆ. ದೈವವೇ ಎಲ್ಲವನ್ನು ನೋಡಿಕೊಳ್ಳಬೇಕು ಅಂತ ಪ್ರಾರ್ಥನೆ ಮಾಡುತ್ತೇವೆ. ದೈವವೇ ಆತನಿಗೆ ತಕ್ಕದಾದ ಬುದ್ಧಿ ಕಲಿಸಲಿ" ಅಂತ ಕುಮಾರ ಪಂಬದ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.