
ಬೆಂಗಳೂರು: ಸರಕಾರಿ ಶಾಲೆ ನಡೆಸಲು ಪೋಷಕರಿಂದಲೇ ಹಣ ವಸೂಲಿ!
ಬೆಂಗಳೂರು: ಸರಕಾರಿ ಶಾಲೆ ಖರ್ಚು ವೆಚ್ಚಗಳಿಗೆ ಮಕ್ಕಳ ಪೋಷಕರಿಂದ ಪ್ರತಿ ತಿಂಗಳು ದೇಣಿಗೆ ರೂಪದಲ್ಲಿ ₹100 ಸಂಗ್ರಹಿಸಲು ಶಾಲಾಭಿವೃದ್ಧಿ ಸಮಿತಿಗೆ (SDMC) ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇಲಾಖೆಯ ಈ ಸುತ್ತೋಲೆ ಹೊರ ಬರುತ್ತಲೇ ಸರಕಾರದ ವಿರುದ್ಧ ಶಿಕ್ಷಣ ತಜ್ಞರು ಆಕ್ಷೇಪವೆತ್ತಿದ್ದಾರೆ. ಇದು ಮಕ್ಕಳ ಮೂಲಭೂತ ಶಿಕ್ಷಣದ ಹಕ್ಕನ್ನು ಕಸಿಯುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈ ರೂಪದ ದೇಣಿಗೆ ಸಂಗ್ರಹಿಸಲು ಅನುಮತಿ ನೀಡಿರುವುದು ಹಲವು ಚರ್ಚೆಗೆ ಕಾರಣವೂ ಆಗಿದೆ.
ಸುತ್ತೋಲೆಯಲ್ಲಿ ಶಿಕ್ಷಣ ಇಲಾಖೆಯು, "ಸರಕಾರಿ ಶಾಲೆ ನಡೆಯಬೇಕೆಂದರೆ ಸಾರ್ವಜನಿಕರ ಸಹಕಾರ ಅಗತ್ಯ. ಈಗಾಗಲೇ 'ನನ್ನ ಶಾಲೆ - ನನ್ನ ಕೊಡುಗೆ' ಯೋಜನೆಯಡಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಹಾಗಾಗಿ ಮಕ್ಕಳ ಪೋಷಕರು ಕೂಡಾ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸುವಂತಾಗಲು ಅವರಿಂದಲೂ ಪ್ರತಿ ತಿಂಗಳು ಹಣ ಪಡೆಯಲು ಮನವೊಲಿಸಬೇಕು. ಬದಲಾಗಿ ಯಾವುದೇ ಬಲವಂತ ಮಾಡಬಾರದು" ಎಂದು SDMC ಗೆ ತಿಳಿಸಿದೆ.
"ಸಂವಿಧಾನದ 21 ಎ ವಿಧಿ ಪ್ರಕಾರ ಮಕ್ಕಳಿಗೆ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಇಂತಹ ಸುತ್ತೋಲೆಯಿಂದ ಬಡ, ಕೂಲಿ ಕಾರ್ಮಿಕರ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಮಕ್ಕಳು ಶಿಕ್ಷಣದಿಂದ ದೂರವೇ ಉಳಿಯಬಹುದು" ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.