
PUTTUR: ಪುತ್ತೂರಿಗೆ ಭೇಟಿ ನೀಡಿದ ಗಿಣಿರಾಮ ಖ್ಯಾತಿಯ ನಟ ಶಿವರಾಮ್
ಪುತ್ತೂರು: ಕರಾವಳಿ ಭಾಗದ ದೈವಾರಾಧನೆಯ ಜತೆಗೆ ಈ ಭಾಗದ ಸಂಸ್ಕೃತಿಯನ್ನು ಅದ್ಭುತವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ಪರಿಚಯಿಸುವ ಕೆಲಸ ಕಾಂತಾರ ಚಿತ್ರದ ಮೂಲಕ ಆಗಿದ್ದು, ನನಗಂತೂ ಖುಷಿ ಕೊಟ್ಟಿದೆ ಎಂದು `ಗಿಣಿರಾಮ' ಧಾರಾವಾಹಿ ನಟ ಶಿವರಾಮ್ ( ರಿತ್ವಿಕ್) ಅವರು ಹೇಳಿದರು.
ಅವರು ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರಿನ ಕೆಮ್ಮಿಂಜೆಯ ಮಹಾವಿಷ್ಣು-ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಈಶ್ವರಮಂಗಲದ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರಗಳಿಗೆ ಪತ್ನಿ ಸುಮನ್ ಅವರೊಂದಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ತೆರಳಿ ಡಯಾಲಿಸಿಸ್ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಪುತ್ತೂರಿನ ಮಹಾಲಿಂಗೇಶ್ವರ ದೇವರ ಬಗ್ಗೆ ಅಗಾಧ ನಂಬಿಕೆ ನನಗಿದೆ. ಹಾಗಾಗಿಯೇ ನಾನು ಕಳೆದ 5 ವರ್ಷಗಳಿಂದ ಪ್ರತೀ ವರ್ಷ ಇಲ್ಲಿಗೆ ಬಂದು ದೇವರ ದರ್ಶನ ಪಡೆಯುತ್ತಿದ್ದೇನೆ ಎಂದರು.
ಗಿಣಿರಾಮ ಧಾರಾವಾಹಿ ಸುಮಾರು 570 ಕಂತುಗಳನ್ನು ಪೂರೈಸಿದೆ. ಪ್ರಸ್ತುತ ನಾನು ಚಲನಚಿತ್ರದಲ್ಲಿ ಬ್ಯುಸಿಯಾಗಿದ್ದೇನೆ. ಈಗಾಗಲೇ ಒಂದು ಚಲನಚಿತ್ರ ರೆಡಿಯಾಗಿದ್ದು, ಇನ್ನಷ್ಟೇ ಅದಕ್ಕೆ ಟೈಟಲ್ ಇಡಬೇಕಾಗಿದೆ. `ಉತ್ಸವ' ಹೆಸರಿನ ಮತ್ತೊಂದು ಚಲನಚಿತ್ರದ ಶೇ.10ರಷ್ಟು ಚಿತ್ರೀಕರಣ ಈಗಾಗಲೇ ನಡೆದಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಧಾರಾವಾಹಿಗಳಿಗೂ ಆಫರ್ ಬಂದಿದೆ. ಆದರೆ ಕಾಲಾವಕಾಶವಿಲ್ಲದ ಕಾರಣ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದರು.