-->
puttur congress: ಶಕುಂತಳಾ ಶೆಟ್ಟಿ ವಿರುದ್ಧ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಗರಂ...!!!

puttur congress: ಶಕುಂತಳಾ ಶೆಟ್ಟಿ ವಿರುದ್ಧ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಗರಂ...!!!




ಪುತ್ತೂರು: ಸಂಘ ಪರಿವಾರದ ನಾಯಕ ಶ್ರೀಕೃಷ್ಣ ಉಪಾಧ್ಯಾಯರ ಮೂಲಕ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯುಧಪೂಜೆ ಮಾಡಿಸಿ ಪಕ್ಷದಲ್ಲಿರುವ ಮುಸ್ಲಿಂ ಸಮುದಾಯದವರ ಮನಸ್ಸಿಗೆ ನೋವುಂಟು ಮಾಡಿರುವ ಪಕ್ಷದ ನಾಯಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡ ಇಸಾಕ್ ಸಾಲ್ಮರ ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ವಿರೋಧಿ ಶ್ರೀಕೃಷ್ಣ ಉಪಾಧ್ಯಾಯರ ಮೂಲಕ ನಡೆಸಿದ ಆಯುಧಪೂಜೆಗೆ ಸಂಬಂಧಿಸಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು ಮತ್ತು ಮುಸ್ಲಿಂ ಸಮುದಾಯದವರೇ ಆದ ನಗರ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಬ್ಲಾಕ್ ಕಾಂಗ್ರೆಸ್ ನಡೆಯನ್ನು ವಿರೋಧಿಸಿ ಶೀಘ್ರದಲ್ಲೇ ಅಲ್ಪಸಂಖ್ಯಾತ ಮುಖಂಡ ಜಮೀರ್ ಅಹ್ಮದ್ ಅವರನ್ನು ಪುತ್ತೂರಿಗೆ ಕರೆಸಿಕೊಂಡು ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.

ಪುತ್ತೂರು ವಿಧಾನಸಭಾ ಕ್ಷೇತ್ರವು ಅತ್ಯಂತ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಈ ಕ್ಷೇತ್ರದಲ್ಲಿ ಸುಮಾರು 46ಸಾವಿರ ಮಂದಿ ಮುಸ್ಲಿಂ ಮತದಾರರಿದ್ದು, ಕಾಂಗ್ರೆಸ್ ಪಕ್ಷಕ್ಕೆ ತಲತಲಾಂತರದಿಂದ ಮತದಾನ ಮಾಡುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪಕ್ಷದ ಸ್ಥಳೀಯ ಕೆಲವು ನಾಯಕರ ನಡವಳಿಕೆಯಿಂದಾಗಿ ನಮಗೆ ನೋವಾಗಿದೆ. ಬಿಜೆಪಿ ಪಕ್ಷದಿಂದ ಬಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕಿಯಾಗಿದ್ದ, ಪ್ರಸ್ತುತ ಮಾಜಿ ಶಾಸಕಿಯಾಗಿರುವ ಶಕುಂತಳಾ ಶೆಟ್ಟಿ ಅವರು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳದೆ, ತನ್ನ ಮೂಲ ಪಕ್ಷದ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಪಕ್ಷದಲ್ಲಿ ಕೋಮುವಾದ ಹರಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಅವರ ಅಧಿಕಾರಾವಧಿಯಲ್ಲೂ ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ರಾಜ್ಯದ ಗುಂಡ್ಲು ಪೇಟೆಗೆ ಆಗಮಿಸುವ ದಿನವೇ ಶಕುಂತಳಾ ಶೆಟ್ಟಿ ಅವರು ಪುತ್ತೂರಿನಲ್ಲಿ ಆರೆಸ್ಸೆಸ್ಸ್, ಬಿಜೆಪಿ ಮುಖಂಡರನ್ನು ಸೇರಿಸಿಕೊಂಡು `ಪಿಲಿರಂಗ್' ಕಾರ್ಯಕ್ರಮ ಆಯೋಜಿಸಿದ್ದಾರೆ. ಕೋಮುವಾದಿ ಶ್ರೀಕೃಷ್ಣ ಉಪಾಧ್ಯಾಯರ ಮೂಲಕವೇ ಪೂಜೆ ಮಾಡಿಸಿ ಉದ್ಘಾಟಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲೂ ಅವರಿಂದಲೇ ಆಯುಧಪೂಜೆ ಮಾಡಿಸಿ ಪಕ್ಷದ ವರ್ಚಸ್ಸನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ ಅವರು ಪಕ್ಷದ ಸಿದ್ಧಾಂತಗಳ ವಿರುದ್ದ ನಡೆದುಕೊಂಡಿರುವವರ ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


Ads on article

Advertise in articles 1

advertising articles 2

Advertise under the article