
udupi: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿಯ ಬಂಧನ...!
Wednesday, October 19, 2022
ಬ್ರಹ್ಮಾವರ: ಕೇರಳ ರಾಜ್ಯದಲ್ಲಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬ್ರಹ್ಮಾವರ ಬಿಲ್ಲಾಡಿ ಗ್ರಾಮದ ನೈಲಾಡಿ ಎಂಬಲ್ಲಿ ಬಂಧಿಸಿದ್ದಾರೆ.
ಕೇರಳದ ತಿರುವಂತಪುರು ಗ್ರಾಮಾಂತರ ಜಿಲ್ಲೆಯ ವೀರನಕಾವ್ಯ ನಿವಾಸಿ 39 ವರ್ಷದ ರಾಜೇಶ್ ಜೈಲಿನಿಂದ ತಪ್ಪಿಸಿಕೊಂಡ ಆರೋಪಿ. ಈತ 2012 ರಲ್ಲಿ ಕೇರಳ ರಾಜ್ಯದ ಅಪ್ರಾಪ್ತ ಬಾಲಕಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದು, ಬಳಿಕ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು.
ಆರೋಪಿಯು ತಿರುವಂತಪುರಂ ಕೇಂದ್ರ ಕಾರಾಗೃಹದಲ್ಲಿ ಇದ್ದು, ನಂತರ ನೆಟ್ಟುಕತಾರಿ ಬಯಲು ಜೈಲ್ ಗೆ ವರ್ಗಾಯಿಸಲಾಗಿತ್ತು. 2020ರ ಡಿಸೆಂಬರ್ 23ರಂದು ಜೈಲ್ ನಿಂದ ಪರಾರಿಯಾಗಿದ್ದನು. ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಇದೀಗ ಆರೋಪಿಯನ್ನು ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಮದ ನೈಲಾಡಿಯಲ್ಲಿ ಬ್ರಹ್ಮಾವರ ಪೊಲೀಸರು ಬಂಧಿಸಿ, ಕೇರಳ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕೇರಳ ಪೊಲೀಸರು ಇಂದು ಉಡುಪಿಗೆ ಆಗಮಿಸಿ, ಆರೋಪಿ ರಾಜೇಶನನ್ನು ವಶಕ್ಕೆ ಪಡೆದು ಕುಂದಾಪುರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಲಯದ ಆದೇಶ ಪಡೆದು ಕೇರಳಕ್ಕೆ ಕರೆದುಕೊಂಡು ಹೋಗಿದ್ದಾರೆ.