
ಉಡುಪಿ: ರೌಡಿ ಶೀಟರ್ ಸುಭಾನ್ ಆರು ತಿಂಗಳ ಕಾಲ ಗಡೀಪಾರು
ಉಡುಪಿ: ದರೋಡೆ, ಹೊಡೆದಾಟ ಹಾಗೂ ದನ ಕಳ್ಳತನ ಹೀಗೆ ನಿರಂತರ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನೆಲೆ ರೌಡಿಶೀಟರ್ ಓರ್ವನನ್ನು ಕುಂದಾಪುರ ಉಪವಿಭಾಗದಿಂದ ಗಡೀಪಾರು ಮಾಡಲಾಗಿದೆ.
ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಜಾಮಿಯಾ ಮೊಹಲಾ ನಿವಾಸಿ ಮೊಹಮ್ಮದ್ ಸುಭಾನ್ (25) ಗಡೀಪಾರಾದ ರೌಡಿಶೀಟರ್.
ಈತ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಕೊಂಡ ಹಿನ್ನೆಲೆ ಕುಂದಾಪುರ ಉಪವಿಭಾಗ ದಂಡಾಧಿಕಾರಿ ಆರು ತಿಂಗಳ ಕಾಲ ಚಳ್ಳಕೆರೆ ಉಪವಿಭಾಗಕ್ಕೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಈತನ ವಿರುದ್ಧ ಹೊಡೆದಾಟ, ದನ ಕಳ್ಳತನ, ಹಾಗೂ ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಭಾಗಿಯಾದ ಕುರಿತ ಪ್ರಕರಣಗಳು ವಿಚಾರಣೆಯಲ್ಲಿದೆ.
ಸುಭಾನ್ ತನ್ನದೇ ಆದ ಒಂದು ತಂಡವನ್ನು ಕಟ್ಟಿಕೊಂಡು, ಕಳೆದ 5 ವರ್ಷಗಳಿಂದ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದಾನೆ. ಈತನ ಗೂಂಡಾ ಪ್ರವೃತ್ತಿಗೆ ಹೆದರಿಕೊಂಡು ಹಲವರು ಈತನ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ನೀಡಲು ಮುಂದೆ ಬರುತ್ತಿಲ್ಲವೆಂದು ತಿಳಿದುಬಂದಿದೆ. ಈ ಹಿನ್ನೆಲೆ ಆರು ತಿಂಗಳ ಮಟ್ಟಿಗೆ ಗಡೀಪಾರು ಮಾಡಿ ಆದೇಶಿಸಲಾಗಿದೆ.