
Toll Fight: ನಾಳೆ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧತೆ!
ಮಂಗಳೂರು: NITK ಟೋಲ್ ಗೇಟ್ ತೆರವು ಮಾಡುವ ನಿಟ್ಟಿನಲ್ಲಿ ನಡೆದ ವಿವಿಧ ಸಂಘಟನೆಗಳ ಕಾರ್ಯಾಚರಣೆಯಲ್ಲಿ ಹೋರಾಟಗಾರರು ಬಹುತೇಕ ಯಶಸ್ವಿ ಕಂಡಿದ್ದಾರೆ. ಈ ಮಧ್ಯೆ ಪೊಲೀಸ್ ವಶದಲ್ಲಿದ್ದ ಹೋರಾಟಗಾರರು ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಿದ್ದಾರೆ.
ಈ ಕುರಿತು 'ದಿ ನ್ಯೂಸ್ ಅವರ್' ಗೆ ಮಾಹಿತಿ ನೀಡಿರುವ ಹೋರಾಟಗಾರ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ, "ಪೊಲೀಸರ ವಶದಲ್ಲಿದ್ದ ಹೋರಾಟಗಾರರನ್ನು ಪೊಲೀಸರು ಬೇಷರತ್ ಆಗಿ ಬಿಟ್ಟು ಕಳುಹಿಸಿದ್ದಾರೆ. ಅದಾಗ್ಯೂ ಟೋಲ್ ಗೇಟ್ ವಿರುದ್ಧದ ಹೋರಾಟ ಅಂತ್ಯ ಕಂಡಿಲ್ಲ. ಪೊಲೀಸ್ ವಶದಲ್ಲಿರಿಸಿದ್ದ ಸುರತ್ಕಲ್ ಬಂಟರ ಭವನದಲ್ಲಿ ಹೋರಾಟಗಾರರ ಬಿಡುಗಡೆಯಾಗುತ್ತಲೇ ಸಭೆ ನಡೆದಿದ್ದು ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಇಂದು ನಡೆದ ಸಭೆಯಲ್ಲಿ ಶೀಘ್ರವೇ ಉಪವಾಸ ಸತ್ಯಾಗ್ರಹ ನಡೆಸುವ ಕುರಿತು ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಾಗ್ಯೂ, ನಾಳೆ ಮತ್ತೊಂದು ಸುತ್ತಿನ ಸಭೆ ನಡೆಸಿ ಮುಂದಿನ ಹೋರಾಟದ ದಿನ ನಿಗದಿಪಡಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.