ಟೋಲ್ ವಿರೋಧಿ ಹೋರಾಟ ಹತ್ತಿಕ್ಕುವುದು ಸರಿಯಲ್ಲ: ರಮಾನಾಥ ರೈ
Monday, October 17, 2022
ಮಂಗಳೂರು: ಟೋಲ್ ಗೇಟ್ ವಿರೋಧಿ ಹೋರಾಟ ಸಂಬಂಧ ಮಧ್ಯರಾತ್ರಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಮನೆಗೆ ಪೊಲೀಸ್ ದಾಳಿ ವಿಚಾರವನ್ನು ಮಾಜಿ ಸಚಿವ ರಮಾನಾಥ ರೈ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಸಂಸದರು ಪದೇ ಪದೇ ಮಾತು ತಪ್ಪಿದ್ದಾರೆ. ಸುರತ್ಕಲ್ ಟೋಲ್ ಗೇಟ್ ಹಣ ವಸೂಲಿ ವಿರುದ್ಧ ಜನರ ಆಕ್ರೋಶ ಕಟ್ಟೆಯೊಡದಿದೆ. ಹೀಗಾಗಿ ಸರಕಾರವು ಹೋರಾಟಗಾರರನ್ನು ಹತ್ತಿಕ್ಕಲು ಪೊಲೀಸ್ ಬಲಪ್ರಯೋಗ ನಡೆಸುತ್ತಿರುವುದು ಖಂಡನೀಯ ಎಂದರು.
ಹಿಂದೊಮ್ಮೆ ಹೋರಾಟಗಾರರನ್ನು ಉದ್ದೇಶಿಸಿ ಟೋಲ್ ಒಡೆದು ಹಾಕುವಂತೆ ಸಂಸದರೇ ಹೇಳಿದ್ದರು. ಆದರೆ, ಈಗ ಮಹಿಳಾ ಹೋರಾಟಗಾರ್ತಿಯರ ಮನೆಗೆ ರಾತ್ರಿ ವೇಳೆ ನೋಟೀಸ್ ಜಾರಿಗೊಳಿಸಿ ಬಾಂಡ್ ಬರೆಸಲು ಮುಂದಾಗಿದ್ದಾರೆ. ಪೊಲೀಸರ ಇಂತಹ ಕ್ರಮ ಅತ್ಯಂತ ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.