ಶಾಸಕ ಪೂಂಜಾ ಕಾರು 'ಓವರ್ ಟೇಕ್' ಪ್ರಕರಣ: ಸಿಐಡಿಗೆ ವರ್ಗಾಯಿಸಿದ ಸರಕಾರ
ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಉನ್ನತ ತನಿಖೆಗಾಗಿ ಸಿಐಡಿಗೆ ವರ್ಗಾಯಿಸಲಾಗಿದೆ.
ತನಿಖೆಯನ್ನು ಕೂಲಂಕುಷವಾಗಿ ನಡೆಸುವ ಉದ್ದೇಶದಿಂದ ಸಿಐಡಿಗೆ ವರ್ಗಾಯಿಸಿ ಸರಕಾರ ಆದೇಶಿಸಿದೆ.
ಕಳೆದ ಗುರುವಾರ ತಡರಾತ್ರಿ 11.30 ವೇಳೆಗೆ ಶಾಸಕರ ಆಪ್ತರ ಹಾಗೂ ಶಾಸಕರ ಕಾರನ್ನು ಓವರ್ ಟೇಕ್ ಮಾಡಿ ಬಂದಿದ್ದ ಯುವಕನೊಬ್ಬ ಅಡ್ಡಗಟ್ಟಿ ಬೆದರಿಕೆ ಒಡ್ಡಿದ್ದಾಗಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ಸಂಬಂಧ ಮಂಗಳೂರು ನಗರದ ಫಳ್ನೀರ್ ನಿವಾಸಿ ರಿಯಾಝ್ (38) ಎಂಬಾತನನ್ನು ಬಂಧಿಸಲಾಗಿತ್ತು.
ಆರೋಪಿತನಿಂದ ಮೊಬೈಲ್, ಸ್ಪಾನರ್ ವಶಕ್ಕೆ ಪಡೆದು ವಿಚಾರಣೆ ಕೈಗೆತ್ತಿಕೊಳ್ಳಲಾಗಿತ್ತು. ವಿಚಾರಣೆ ವೇಳೆ ಇದೊಂದು 'ರೋಡ್ ರೇಜ್' ಪ್ರಕರಣ ಎಂದು ತಿಳಿದು ಬಂದಿತ್ತು. ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
ಘಟನೆ ವಿರುದ್ಧ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಪರಿವಾರ ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ವರ್ಗಾಯಿಸಿ ಆದೇಶಿಸಿದೆ.