
ಟಿಪ್ಪುಗೆ ಅವಾಚ್ಯವಾಗಿ ನಿಂದಿಸಿದ ಬಿಜೆಪಿ ಕಾರ್ಪೊರೇಟರ್ | ಮುಸ್ಲಿಂ ಸಂಘಟನೆಗಳ ವಿರೋಧ
ಮಂಗಳೂರು: ಸುರತ್ಕಲ್ ಜಂಕ್ಷನ್ ಗೆ 'ವೀರ ಸಾವರ್ಕರ್' ಹೆಸರಿಡುವ ಪ್ರಸ್ತಾವಕ್ಕೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಮಾತಿನ ಚಕಮಕಿಗೂ ಕಾರಣವಾಯಿತು.
ಆಡಳಿತ ಪಕ್ಷದ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸದಸ್ಯರು ಮೇಯರ್ ಪೀಠದ ಮುಂಭಾಗ ಧರಣಿ ನಡೆಸುತ್ತಿದ್ದ ಸಂದರ್ಭ ಮಹಾನಗರ ಪಾಲಿಕೆ ಸದಸ್ಯೆ ಶ್ವೇತಾ ಪೂಜಾರಿ, "ನಾವು ದೇಶಪ್ರೇಮಿ ಹೆಸರನ್ನ ಇಡುತ್ತಿದ್ದೇವೆ. ಸಾವರ್ಕರ್ ದೇಶದ್ರೋಹಿ ಅಲ್ಲ. ದೇಶದ್ರೋಹಿ ಟಿಪ್ಪು. ಟಿಪ್ಪು ಓರ್ವ ನಾ*ಯಿ, ಹ*ದಿ" ಎಂದು ಅವಾಚ್ಯವಾಗಿ ನಿಂದಿಸಿದರು.
ಮುಸ್ಲಿಂ ಒಕ್ಕೂಟ ಖಂಡನೆ
ಮನಪಾ ಸದಸ್ಯೆ ಶ್ವೇತಾ ಪೂಜಾರಿ ನೀಡಿರುವ ನಿಂದನಾತ್ಮಕ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟವು ಖಂಡಿಸಿದೆ. ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಕಾನೂನು ಕ್ರಮದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
"ಶ್ವೇತಾ ಪೂಜಾರಿ ಅವರಿಗೆ ಟಿಪ್ಪು ಕುರಿತು ಭಿನ್ನಾಭಿಪ್ರಾಯವಿದ್ದಲ್ಲಿ ಅದನ್ನು ನೈತಿಕ ಇತಿಮಿತಿಯೊಳಗಡೆ ಶಬ್ದ ಬಳಕೆ ಮಾಡಬೇಕಿತ್ತು. ಟಿಪ್ಪು ಹೆಸರು ವಿನಾಕಾರಣ ಎಳೆದು ಹಾಕಿ ಮಾತನಾಡಿದ್ದು ಸಂವಿಧಾನ ವಿರೋಧಿ ಮತ್ತು ಪರಿಷತ್ ನಿಯಮಕ್ಕೂ ವಿರುದ್ಧವಾಗಿದೆ. ಹಾಗಾಗಿ ಅವರು ತಮ್ಮ ವರ್ತನೆಯನ್ನು ಅರಿತು ಕ್ಷಮೆಯಾಚಿಸಬೇಕು" ಎಂದು ಕೆ.ಅಶ್ರಫ್ ಒತ್ತಾಯಿಸಿದ್ದಾರೆ.