
ಸುರತ್ಕಲ್ ವೃತ್ತಕ್ಕೆ 'ವೀರ ಸಾವರ್ಕರ್' ಹೆಸರಿಡುವ ಪ್ರಸ್ತಾವ | ಕಾಂಗ್ರೆಸ್ ವಿರೋಧ; ಪಾಲಿಕೆ ಸಭೆಯಲ್ಲಿ ಗದ್ದಲ!
ಮಂಗಳೂರು: ನಗರದ ಹೊರವಲಯದಲ್ಲಿರುವ ಸುರತ್ಕಲ್ ಜಂಕ್ಷನ್ ಗೆ 'ವೀರ ಸಾವರ್ಕರ್' ಹೆಸರಿಡುವ ವಿಚಾರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ಈ ಹಿಂದಿನ ಪಾಲಿಕೆ ಸಭೆಯಲ್ಲಿ ಕೊನೆಯ ಕ್ಷಣದಲ್ಲಿ ಕಾರ್ಯಸೂಚಿಗೆ ಸೇರಿಸಲಾಗಿತ್ತು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಿರಲಿಲ್ಲ. ಹಾಗಾಗಿ ಇಂದಿನ ಸಭೆಯಲ್ಲಿ ಆ ನಿರ್ಣಯವನ್ನು ಸ್ಥಿರೀಕರಿಸುವ ಮುನ್ನ ಕಾಂಗ್ರೆಸ್ ಪಕ್ಷದ ಆಕ್ಷೇಪವನ್ನು ದಾಖಲಿಸಬೇಕು ಎಂದು ಪಾಲಿಕೆಯ ಪ್ರತಿಪಕ್ಷದ ನಾಯಕ ನವೀನ್ ಡಿಸೋಜಾ ಒತ್ತಾಯಿಸಿದರು.
ಆಕ್ಷೇಪ ವ್ಯಕ್ತಪಡಿಸಿದ ಪಾಲಿಕೆಯ ಆಡಳಿತ ಪಕ್ಷದ ಸಚೇತಕ ಪ್ರೇಮಾನಂದ ಶೆಟ್ಟಿ, 'ಕಾಂಗ್ರೆಸ್ ನವರು ಕಳೆದ ಸಭೆಯಲ್ಲಿ ಯಾವುದೇ ಆಕ್ಷೇಪ ದಾಖಲಿಸದೆ ಸುಮ್ಮನಿದ್ದರು. ಈಗ ಗಲಾಟೆ ಮಾಡುವುದರಲ್ಲಿ ಅರ್ಥವಿಲ್ಲ' ಎಂದರು.
ವಿರೋಧದ ಮಧ್ಯೆ ಅಂಗೀಕಾರ
ಆಕ್ಷೇಪ ದಾಖಲಿಸಲು ಮೇಯರ್ ಜಯಾನಂದ ಅವರು ಒಪ್ಪಂದ ಕಾರಣ, ಕಾಂಗ್ರೆಸ್ ಸದಸ್ಯರು ಮೇಯರ್ ಪೀಠದ ಎದುರು ಧರಣಿ ಆರಂಭಿಸಿದರು. ಬಳಿಕ ಮೇಯರ್ ಅವರು ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು.
ಸಭೆ ಮತ್ತೆ ಆರಂಭವಾದಾಗ ಮೇಯರ್, ಪ್ರತಿಪಕ್ಷದ ಎಲ್ಲ ಸದಸ್ಯರ ಆಕ್ಷೇಪವನ್ನು ದಾಖಲಿಸಿ ಪ್ರಸ್ತಾಪವನ್ನು ಅಂಗೀಕರಿಸಿದರು.