
ಟೋಲ್ ವಿರೋಧಿ ಹೋರಾಟಗಾರರಿಗೆ ಕಿರುಕುಳ | ಬಿಜೆಪಿ ವಿರುದ್ಧ ಹಿಂದೂ ಮಹಾಸಭಾ ಆಕ್ರೋಶ
ಮಂಗಳೂರು: ಸುರತ್ಕಲ್ NITK ಟೋಲ್ ಗೇಟ್ ತೆರವುಗೊಳಿಸುವಂತೆ ಸಾರ್ವಜನಿಕರು ರಾಜಕೀಯ, ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಲು ಉದ್ದೇಶಿಸಿದ್ದ ಬಿಜೆಪಿ ಸರಕಾರದ ನಡೆಯನ್ನು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಘಟಕವು ತೀವ್ರವಾಗಿ ಖಂಡಿಸಿದೆ.
ಟೋಲ್ ವಿರೋಧಿ ಹೋರಾಟಗಾರರನ್ನು ಬೆಂಬಲಿಸಿ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಮಾತನಾಡಿದ್ದು, ತಕ್ಷಣ ಟೋಲ್ ಸಂಗ್ರಹ ನಿಲ್ಲಿಸುವಂತೆ ಪ್ರತಿಭಟಿಸಿದ ಟೋಲ್ ವಿರೋಧಿ ಹೋರಾಟ ಸಮಿತಿ ಹಾಗೂ ಅದಕ್ಕೆ ಪಕ್ಷಾತೀತವಾಗಿ ಬೆಂಬಲ ಸೂಚಿಸಿದ ಸಂಘ ಸಂಸ್ಥೆಗಳ ಹಾಗೂ ಸ್ಥಳೀಯ ನಾಗರಿಕರ ಮೇಲೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅಧಿಕಾರ ದುರುಪಯೋಗಪಡಿಸಿ ಹೋರಾಟಗಾರರ ಮೇಲೆ ಪೊಲೀಸರಿಂದ ದಬ್ಬಾಳಿಕೆ ಮಾಡಿರುವುದನ್ನು ಖಂಡಿಸುತ್ತೇವೆ. ಅಕ್ರಮ ಟೋಲ್ ಗೇಟ್ ನಲ್ಲಿ ದಬ್ಬಾಳಿಕೆಯಿಂದ ಸುಂಕ ವಸೂಲಿ ಮಾಡುವವರ ವಿರುದ್ಧ ಹೋರಾಟವನ್ನು ಮಾಡಿ ಹಗಲು ದರೋಡೆ ಮಾಡುವುದನ್ನು ತಡೆಯಲು ಯತ್ನಿಸಿದಾಗ, ಸಾರ್ವಜನಿಕರಿಗೆ ಪೊಲೀಸರ ಮುಖಾಂತರ ದಬ್ಬಾಳಿಕೆ ನಡೆಸುವ ಬಿಜೆಪಿ ಸರಕಾರದ ನಡೆ ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಇದು ಸ್ಪಷ್ಟವಾಗಿ ಲೂಟಿಕೋರರ ಕಂಪೆನಿಯ ಜೊತೆ ಸರ್ಕಾರ ಶಾಮೀಲಾಗಿರುವುದನ್ನು ಎತ್ತಿತೋರಿಸುತ್ತದೆ .ಇವರಿಗೆ ತಕ್ಕ ಉತ್ತರವನ್ನು ಸುರತ್ಕಲ್ ಕ್ಷೇತ್ರದ ಜನರು ಬರುವ ಚುನಾವಣೆಯಲ್ಲಿ ಬಿಜೆಪಿಗೆ ಕೊಡಲಿದ್ದಾರೆ" ಎಂದು ರಾಜೇಶ್ ಪವಿತ್ರನ್ ತಿಳಿಸಿದ್ದಾರೆ.