ಕರಾವಳಿ ಮೂಲದ ನಿರ್ದೇಶಕನ ಸಿನೆಮಾಕ್ಕೆ 'ಬಾಯ್ಕಾಟ್' ಭೀತಿ; ಹಿಂದೂ-ಮುಸ್ಲಿಂ ವೈಷಮ್ಯ ಹುಟ್ಟು ಹಾಕುತ್ತಾ 'ಸಂಗೀತ ಬಾರ್ & ರೆಸ್ಟೋರೆಂಟ್'!?
Thursday, October 1, 2026
ಬೆಂಗಳೂರು: ಕರಾವಳಿ ಮೂಲದ ನಿರ್ದೇಶಕರೊಬ್ಬರ ಸಿನೆಮಾಕ್ಕೆ 'ಬಾಯ್ಕಾಟ್' ಭೀತಿ ಎದುರಾಗಿದೆ. ಸಂಗೀತ ಬಾರ್ ಆಂಡ್ ರೆಸ್ಟೋರೆಂಟ್ ಹೆಸರಿನ ಈ ಸಿನೆಮಾದ ಮೋಷನ್ ಪೋಸ್ಟರ್‌ವೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ರಿಲೀಸ್ ಆಗಿತ್ತು. ಇದರ ಬೆನ್ನಿಗೆ ಸಿನೆಮಾದ ಕುರಿತು ಅಪಸ್ವರ ಎದ್ದಿದೆ. ಸಿನೆಮಾದಲ್ಲಿ ಹಿಂದೂ-ಮುಸ್ಲಿಂ ಪಾತ್ರಗಳಿದ್ದು ಪ್ರೊಪಗಂಡಾ ಸಿನೆಮಾನ ಅಂತಾ ಕೆಲವರು ಆಕ್ಷೇಪ ಎತ್ತಿದ್ದಾರೆ. ಈ ಸಿನೆಮಾವನ್ನು ಬಹಿಷ್ಕರಿಸುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ಒತ್ತಾಯ ಕೇಳಿ ಬಂದಿದೆ.
ಸಿನೆಮಾವು ಕರಾವಳಿ ಮೂಲದ ಕಥೆಯನ್ನು ಹೊಂದಿದ್ದು, ಸಿನೆಮಾ ನಿರ್ದೇಶಕ ಸಂದೇಶ್ ಶೆಟ್ಟಿ ಅವರ ನಾಲ್ಕನೇ ಸಿನೆಮಾವಾಗಿದೆ. ಸ್ವತಃ ಸಿನೆಮಾದಲ್ಲಿ ಸಂದೇಶ್ ಶೆಟ್ಟಿ ಆಜ್ರಿ ಅವರೇ ಮುಸ್ಲಿಂ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕನಾಗಿ ಕೋಮಲ್, ನಾಯಕಿ ಅನುಷಾ ಹಾಗೂ ರಾಣಿಯ ಪಾತ್ರವೊಂದರಲ್ಲಿ ಮೇಘನಾ ರಾಜ್ ಕೂಡಾ ಅಭಿನಯಿಸಿದ್ದಾರೆ. ಸಿನೆಮಾದ ಟೈಟಲ್‌ಗೂ, ಪೋಸ್ಟರ್‌ನಲ್ಲಿ ಕಂಡು ಬಂದಿರೋ ಪಾತ್ರಗಳಿಗೂ ಹೊಂದಾಣಿಕೆಯಾಗುತ್ತಿಲ್ಲ.
ಆದರೆ, ಈ ಸಿನೆಮಾ ಕರಾವಳಿಯಲ್ಲಿ ಕೋಮು ವೈಷಮ್ಯ ಹುಟ್ಟುಹಾಕದಿರಲಿ ಅನ್ನೋದು ಕೆಲವರ ಅಭಿಪ್ರಾಯವಾದರೆ, ಇನ್ನು ಕೆಲವರು ಇದು ಪ್ರೊಪಗಂಡಾ ಸಿನೆಮಾ ಹಿಂದೂ ಮುಸ್ಲಿಮರನ್ನು ಎತ್ತಿಕಟ್ಟುವ ಸಾಧ್ಯತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದು, ಸಿನೆಮಾ ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ ಎಂದು ಸಿನೆಮಾ ತಂಡ ಹೇಳಿಕೊಂಡಿದೆ.
ಆದರೆ, 'ಬಾಯ್ಕಾಟ್' ಭೀತಿಯ ನಡುವೆ ಸಿನೆಮಾವನ್ನು ಯಾವ ರೀತಿ ರಿಲೀಸ್ ಮಾಡ್ತಾರೆ ಅನ್ನೋ ಕುತೂಹಲ ಮೂಡಿದೆ. ಜೊತೆಗೆ, ಸಿನೆಮಾ ತಂಡವು ಈ ರೀತಿಯ ನಕರಾತ್ಮಕ ಪ್ರತಿಕ್ರಿಯೆ ಕಂಡು ದಂಗಾಗಿದೆ. ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಸಿನೆಮಾ ನಿರ್ದೇಶಕರು ಸುಮ್ಮನಿರುವುದು ಕೂಡಾ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.