-->
ಸಮಾಜಸೇವೆಯತ್ತ ಆಕಾಶಭವನ ‌ಶರಣ್; ರೌಡಿಸಂ ಬಿಟ್ಟು ರಾಜಕೀಯದತ್ತ ಚಿತ್ತ ನೆಟ್ಟ ವಿಕ್ಕಿ ಶೆಟ್ಟಿ ಸಹಚರ!?

ಸಮಾಜಸೇವೆಯತ್ತ ಆಕಾಶಭವನ ‌ಶರಣ್; ರೌಡಿಸಂ ಬಿಟ್ಟು ರಾಜಕೀಯದತ್ತ ಚಿತ್ತ ನೆಟ್ಟ ವಿಕ್ಕಿ ಶೆಟ್ಟಿ ಸಹಚರ!?

ಮಂಗಳೂರು: ಕೊಲೆ, ಪೋಕ್ಸೋ, ದರೋಡೆ ಸಹಿತ ಹದಿನೈದಕ್ಕೂ ಹೆಚ್ಚು ಪ್ರಕರಣಗಳ ಆರೋಪಿ,  ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರನಾಗಿರುವ ರೋಹಿದಾಸ್ ಅಲಿಯಾಸ್ ಆಕಾಶಭವನ ಶರಣ್ ರೌಡಿಸಂಗೆ ಗುಡ್ ಬೈ ಹೇಳಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಶಕ್ತಿ ಫ್ರೆಂಡ್ಸ್ ಆಕಾಶಭವನದ ಗಣೇಶೋತ್ಸವ ಅಂಗವಾಗಿ ನಡೆಯುವ ಹುಲಿವೇಷದ ಊದು ಕಾರ್ಯಕ್ರಮದಲ್ಲಿ ಆಕಾಶಭವನ ಶರಣ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು, ಎಲ್ಲರ ಜೊತೆಗೆ ಬೆರೆತು ಕಾರ್ಯಕ್ರಮದ ಆಯೋಜಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಇಷ್ಟಲ್ಲದೇ, ಮೂರು ತಿಂಗಳ ಹಿಂದೆ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ಇನ್ನಿತರ ವಸ್ತುಗಳನ್ನು ಕೊಡುಗೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಭಾಗವಹಿಸಿದ್ದರು. ಮೊನ್ನೆ ನಡೆದಿರುವ ಊದು ಪೂಜೆ ಕಾರ್ಯಕ್ರಮದಲ್ಲೂ ಇನಾಯತ್ ಆಲಿ, ಮಿಥುನ್ ರೈ ಭಾಗವಹಿಸಿದ್ದಾರೆ. 

'ಕೈ' ಮುಖಂಡರ ಜೊತೆ ಭಾರೀ ಕ್ಲೋಸ್!

ಆಕಾಶಭವನ ಶರಣ್ ಸದ್ಯ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು ಅದರ ಜೊತೆಗೆ ರಾಜಕೀಯ ಮುಖಂಡರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಇನಾಯತ್ ಆಲಿ‌ ಜೊತೆ ಅತ್ಯಂತ ಆಪ್ತರಾಗಿ ಒಡನಾಟ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಶಕ್ತಿ ಫ್ರೆಂಡ್ಸ್ ಕಾರ್ಯಕ್ರಮದಲ್ಲಿ ಚಿತ್ರನಟ ಶ್ರೀನಗರ ಕಿಟ್ಟಿ ಕೂಡಾ ಭಾಗವಹಿಸಿದ್ದು ಶರಣ್ ಜೊತೆಗೆ ಆತ್ಮೀಯವಾಗಿ ನಿಂತು ವೇದಿಕೆ ಮೇಲೆ ಮಾತನಾಡಿದ್ದಾರೆ.

ರಾಜಕೀಯಕ್ಕೆ ಎಂಟ್ರಿ!?

ರೌಡಿಸಂನಿಂದ ಸಮಾಜಸೇವೆ, ಸಮಾಜಸೇವೆಯಿಂದ ಪಾಲಿಟಿಕ್ಸ್‌ಗೆ ಬರೋದು ನಡೆಯುತ್ತಾ ಬಂದಿದೆ. ಆಕಾಶಭವನ ಶರಣ್ ಕೂಡಾ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಜೀವ ಬೆದರಿಕೆ ಮಧ್ಯೆಯೇ ಓಡಾಟ ನಡೆಸಬೇಕಾದ ಶರಣ್ ಸದ್ಯ ರಾಜಕೀಯದಿಂದ ದೂರವಿದ್ದು ಇನಾಯತ್ ಆಲಿ, ಮಿಥುನ್‌ ರೈಯಂತಹ ನಾಯಕರನ್ನು ಬೆಂಬಲಿಸುವ ಸಾಧ್ಯತೆ ಜಾಸ್ತಿ ಇದೆ. 

ಆಕಾಶಭವನ ಶರಣ್ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಅಣತಿ ಮೇರೆಗೆ ಹಲವು ಕೃತ್ಯಗಳನ್ನು ನಡೆಸಿದ್ದು, ಅದರಲ್ಲಿ ಜೈಲಿನಲ್ಲಿ ನಡೆದ ಮಾಡೂರು ಯೂಸುಫ್ ಹತ್ಯೆ, ಚಿತ್ರನಟ ಸುರೇಂದ್ರ ಬಂಟ್ವಾಳ ಹತ್ಯೆ ಕೂಡಾ ಸೇರಿದೆ. 2024 ರಲ್ಲಿ ಶರಣ್ ಮೇಲೆ ಪೊಲೀಸರು ಶೂಟೌಟ್ ಕೂಡಾ ನಡೆಸಿದ್ದರು. ಒಂದೊಮ್ಮೆ ಎನ್‌ಕೌಂಟರ್ ಭೀತಿಯನ್ನು‌ ಎದುರಿಸಿದ್ದ ಶರಣ್ ಇದೀಗ ರೌಡಿಸಂನಿಂದ ದೂರವುಳಿಯುವ ಸೂಚನೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article